ಸೆನ್ಸಾರ್ ಮುಗಿಸಿದ 'ಮಾರ್ಟಿನ್'; ಧ್ರುವ ಹುಟ್ಟುಹಬ್ಬಕ್ಕೆ 6 ಕೋಟಿ ರೂ. ಗಿಫ್ಟ್?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡಗೆ ದಿನಗಣನೆ ಶುರುವಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದ್ದು ಈಗಾಗಲೇ ಟೀಸರ್‌ಗಳಿಂದಲೇ ಭಾರೀ ಸದ್ದು ಮಾಡ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ದೇಶ ವಿದೇಶದ ಭಾಷೆಗಳಿಗೆ ಡಬ್ ಆಗಿ ಬರ್ತಿದೆ.
ಎ. ಪಿ ಅರ್ಜುನ್ ನಿರ್ದೇಶನದ ಚಿತ್ರದಲ್ಲಿ ಧ್ರುವ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ. ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ಮೂಡಿ ಬರ್ತಿದೆ. ಮಾಸ್ ಪ್ರೇಕ್ಷಕರನ್ನೇ ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಇದು. ಅಭಿಮಾನಿಗಳು 'ಮಾರ್ಟಿನ್' ಆರ್ಭಟ ನೋಡಲು ಚಾತಕಪಕ್ಷಿಗಳಂತೆ ಕಾಯತ್ತಿದ್ದಾರೆ. ಈಗಾಗಲೇ ಚಿತ್ರದ ಪ್ರಮೋಷನ್ ಸಹ ಜೋರಾಗಿದೆ.

ನಿರ್ಮಾಪಕರ ಜೊತೆ ನಿರ್ದೇಶಕರ ಭಿನ್ನಾಪ್ರಾಯಗಳಿವೆ, ಅದೇ ಕಾರಣಕ್ಕೆ ಎ. ಪಿ ಅರ್ಜುನ್ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೆಲ್ಲದರ ನಡುವೆ 'ಮಾರ್ಟಿನ್' ಸಿನಿಮಾ ಸೆನ್ಸಾರ್ ಮುಗಿಸಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು ರನ್‌ಟೈಮ್ 2 ಗಂಟೆ 28 ನಿಮಿಷ ಎಂದು ಗೊತ್ತಾಗಿದೆ. ಇನ್ನು 'ಮಾರ್ಟಿನ್' ಚಿತ್ರಕ್ಕೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಭಾರತೀಯನೊಬ್ಬ ಪಾಕಿಸ್ತಾನದ ಗಡಿ ದಾಟಿ ಅಲ್ಲಿಗೆ ಹೋದರೆ ಏನೆಲ್ಲಾ ಆಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ.
240 ದಿನಗಳ ಕಾಲ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ನಡೆದಿದೆ. ಕಾಶ್ಮೀರ ಸೇರಿ ಹಲವೆಡೆ ಸಿನಿಮಾ ಸೆರೆ ಹಿಡಿಯಲಾಗಿದೆ. ಚಿತ್ರಕ್ಕಾಗಿ ಧ್ರುವ ಬಹಳ ಶ್ರಮಪಟ್ಟಿದ್ದಾರೆ. ಅದೆಲ್ಲವೂ ತೆರೆಗೆ ಬರಲು ಇನ್ನೊಂದು ವಾರ ಮಾತ್ರ ಬಾಕಿಯಿದೆ. ಈ ಹಿಂದೆ ಬೆಂಗಳೂರಿನಲ್ಲಿ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿತ್ತು. ಇತ್ತೀಚೆಗೆ ಮುಂಬೈನಲ್ಲಿ ಮತ್ತೊಂದು ಟೀಸರ್ ಬಂದು ಅಭಿಮಾನಿಗಳ ಗಮನ ಸೆಳೆದಿತ್ತು.
'ಮಾರ್ಟಿನ್' ಚಿತ್ರದ ಹಾಡುಗಳಿಗೆ ಮಣಿಶರ್ಮ ಟ್ಯೂನ್ ಹಾಕಿದ್ದಾರೆ. ರವಿ ಬಸ್ರೂರು ರೀರೆಕಾರ್ಡಿಂಗ್ ಮಾಡಿದ್ದಾರೆ. ಇನ್ನು ಸತ್ಯಾ ಹೆಗಡೆ ಕ್ಯಾಮರಾ ಕಣ್ಣಲ್ಲಿ ಸಿನಿಮಾ ಸೆರೆಯಾಗಿದೆ. ಲೇಟ್ ಆಗಿದ್ದರೂ ಬಹಳ ದೊಡ್ಡದಾಗಿ ಸಿನಿಮಾ ಪ್ರೇಕ್ಷಕರ ಮುಂದಿಡುವ ಪ್ರಯತ್ನ ನಡೀತಿದೆ. ಸಿನಿಮಾ ಬಿಡುಗಡೆಗೆ ಒಂದು ವಾರ ಬಾಕಿಯಿದ್ದರೂ ಟ್ರೈಲರ್ ಮಾತ್ರ ರಿಲೀಸ್ ಆಗಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ.
ಧ್ರುವ ಸರ್ಜಾ ಸಂದರ್ಶನಗಳಲ್ಲಿ ಭಾಗಿ ಆಗುವುದು ಬಿಟ್ಟರೆ ದೊಡ್ಡಮಟ್ಟದ ಪ್ರಮೋಷನ್ ಕಾಣುತ್ತಿಲ್ಲ. ಇದೆಲ್ಲದರ ನಡುವೆ ಧ್ರುವ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ಕಾಯುತ್ತಿದೆ ಎಂದು ಹೇಳಲಾಗ್ತಿದೆ. ಇದೇ ಭಾನುವಾರ (ಅಕ್ಟೋಬರ್ 6) ಆಕ್ಷನ್ ಪ್ರಿನ್ಸ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅದೇ ಸಂಭ್ರಮದಲ್ಲಿ 'ಮಾರ್ಟಿನ್' ಇಂಟ್ರೊಡಕ್ಷನ್ ಸಾಂಗ್ ರಿಲೀಸ್ ಆಗುವ ಸಾಧ್ಯತೆಯಿದೆ. ಅಂದಾಜು 6 ಕೋಟಿ ರೂ. ಬಜೆಟ್‌ನಲ್ಲಿ ಈ ಸಾಂಗ್ ಕಟ್ಟಿಕೊಡಲಾಗಿದೆಯಂತೆ.

ಹೀರೊ ಇಂಟ್ರಡಕ್ಷನ್ ಸಾಂಗ್ ಚಿತ್ರಕ್ಕೆ ಪ್ಲಸ್ ಆಗುವ ಸಾಧ್ಯತೆ ಹೆಚ್ಚು. ಅದೇ ಕಾರಣಕ್ಕೆ 'ಮಾರ್ಟಿನ್' ಚಿತ್ರದಲ್ಲೂ ಒಂದು ಜಬರ್ದಸ್ತ್ ಸಾಂಗ್ ಇದೆ. ಅದನ್ನು ಮುರಳಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸೆರೆ ಹಿಡಿಯಲಾಗಿದೆ. ನಾನು ಈಗಾಗಲೇ 500ಕ್ಕೂ ಅಧಿಕ ಸಿನಿಮಾಗಳಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದೀನಿ, ಅದೆಲ್ಲಕ್ಕಿಂತ 'ಮಾರ್ಟಿನ್' ವಿಶೇಷ ಎಂದು ಅವರು ಹೇಳಿದ್ದಾರೆ.
ಕಂಪ್ಲೀಟ್ ಕಥೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ಮುರಳಿ ಮಾಸ್ಟರ್ 'ಮಾರ್ಟಿನ್' ಸಾಂಗ್ ಕಂಪೋಸ್ ಮಾಡಿದ್ದಾರಂತೆ. ದೇಶ ವಿದೇಶದ ಡ್ಯಾನ್ಸರ್ಸ್ ಈ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ದೇಶ ವಿದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸುಮಾರು 10 ದಿನಗಳ ಕಾಲ 'ಮಾರ್ಟಿನ್' ಚಿತ್ರದ ಈ ಅದ್ಧೂರಿ ಸಾಂಗ್ ಚಿತ್ರೀಕರಣ ಮಾಡಲಾಗಿದೆ. ಬ್ಯಾಂಕಾಕ್ ಹಾಗೂ ಫುಕೆಟ್‌ನ ಪಬ್‌ಗಳಲ್ಲಿ ಈ ಸಾಂಗ್ ಕೂಡ ಶೂಟಿಂಗ್ ನಡೆದಿದೆ.
ಧ್ರುವ ಸರ್ಜಾ ಒಳ್ಳೆ ಡ್ಯಾನ್ಸರ್. ಅದನ್ನು ಬಳಸಿಕೊಂಡು ಜಬರ್ದಸ್ತ್ ಮೂವ್ಸ್ ಕಂಪೋಸ್ ಮಾಡಲಾಗಿದೆ. ಹುಕ್ ಸ್ಟೆಪ್ ಅಂತೂ ಟ್ರೆಂಡ್ ಹುಟ್ಟು ಹಾಕುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಮುರಳಿ ಮಾಸ್ಟರ್. ಸೆಟ್, ಡ್ಯಾನ್ಸರ್ಸ್, ಕಾಸ್ಟ್ಯೂಮ್, ಬೇರೆ ಬೇರೆ ಲೊಕೇಶನ್‌ಗಳಲ್ಲಿ ಶೂಟಿಂಗ್ ಎಲ್ಲಾ ಸೇರಿ ಸಾಂಗ್ ಬಜೆಟ್ 6 ಕೋಟಿ ತಲುಪಿರಬಹುದು ಎಂದಿದ್ದಾರೆ.
ಟ್ರೈಲರ್ ಬದಲು 'ಮಾರ್ಟಿನ್' ಇಂಟ್ರಡಕ್ಷನ್ ಸಾಂಗ್ ಮಾತ್ರ ರಿಲೀಸ್ ಮಾಡಿ ಚಿತ್ರವನ್ನು ತೆರೆಗೆ ತರುತ್ತಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇನ್ನು 'ಮಾರ್ಟಿನ್' ಹಿಂದಿ ವಿತರಣೆ ಹಕ್ಕು ಲಕ್ಷ್ಮಿ ಗಣಪತಿ ಫಿಲ್ಮ್ಸ್ ಪಾಲಾಗಿದೆ.


Click it and Unblock the Notifications











