24 ಗಂಟೆಗಳಲ್ಲಿ ಅತಿಹೆಚ್ಚು ವ್ಯೂಸ್ ಪಡೆದುಕೊಂಡ ಕನ್ನಡ ಟೀಸರ್ಸ್; ಕೆಜಿಎಫ್ 2 ಹಿಂದಿಕ್ಕಿತಾ ಮಾರ್ಟಿನ್?
ಸ್ಟಾರ್ ನಟರ ಹೊಸ ಸಿನಿಮಾಗಳು ಸೆಟ್ಟೇರಿದಾಗಲೇ ಹೈಪ್ ಹುಟ್ಟಿಸಿಬಿಡುತ್ತವೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗಳಿಂದಲೇ ಅಭಿಮಾನಿಗಳನ್ನು ಸೆಳೆಯುವುದು ಸುಲಭ. ಆದರೆ ಅಭಿಮಾನಿಗಳು ಮಾತ್ರವಲ್ಲದೇ ಉಳಿದ ಸಿನಿ ರಸಿಕರು ಮತ್ತು ಸಾಮಾನ್ಯ ಪ್ರೇಕ್ಷಕರಿಗೆ ಸ್ಟಾರ್ ನಟರ ಸಿನಿಮಾಗಳ ಮೇಲೆ ನಿರೀಕ್ಷೆ ಹುಟ್ಟಬೇಕೆಂದರೆ ಚಿತ್ರತಂಡ ಒಳ್ಳೆಯ ಟೀಸರ್ ಅಥವಾ ಟ್ರೈಲರ್ ಅನ್ನು ಬಿಡುಗಡೆ ಮಾಡಲೇಬೇಕು.
ಹೌದು, ಸ್ಟಾರ್ ನಟರ ಸಿನಿಮಾ ಎಂದೇನಿಲ್ಲ ಪ್ರತಿಯೊಂದು ಸಿನಿಮಾಗೂ ಸಹ ಇದು ಅನ್ವಯಿಸುತ್ತದೆ. ಹೊಸ ಸಿನಿಮಾ ಬಂದಿದೆ ಟಿಕೆಟ್ ಬುಕ್ ಮಾಡೋಣ ಎಂದುಕೊಳ್ಳುವ ಪ್ರೇಕ್ಷಕರು ಒಂದೊಮ್ಮೆ ಚಿತ್ರದ ಟೀಸರ್ ಅಥವಾ ಟ್ರೈಲರ್ ನೋಡಿ ಚಿತ್ರ ಹೇಗಿರಲಿದೆ ಎಂಬುದನ್ನು ಅಂದಾಜಿಸಿಬಿಡುತ್ತಾರೆ. ಟೀಸರ್ ಅಥವಾ ಟ್ರೈಲರ್ ಚೆನ್ನಾಗಿದ್ದರೆ ಮಾತ್ರ ಚಿತ್ರಮಂದಿರಗಳಿಗೆ ಹೋಗುವ ಕೆಲಸಕ್ಕೆ ಕೈ ಹಾಕ್ತಾನೆ ಸಾಮಾನ್ಯ ಸಿನಿ ಪ್ರೇಕ್ಷಕ.

ಈ ಕಾರಣಕ್ಕಾಗಿಯೇ ಚಿತ್ರವೊಂದಕ್ಕೆ ಅಚ್ಚುಕಟ್ಟಾದ ಟೀಸರ್ ಅಥವಾ ಟ್ರೈಲರ್ ಕಟ್ ಅತಿಮುಖ್ಯ. ಇದನ್ನು ಚೆನ್ನಾಗಿ ಅರಿತಿರುವ ಸಿನಿಮಾ ಮಂದಿ ಟೀಸರ್ ಹಾಗೂ ಟ್ರೈಲರ್‌ಗಳನ್ನು ಆದಷ್ಟು ಅದ್ಭುತವಾಗಿ ಎಡಿಟ್ ಮಾಡುವತ್ತ ಗಮನ ಹರಿಸುತ್ತಾರೆ. ಇತ್ತೀಚೆಗಂತೂ ಪ್ರತಿಯೊಂದು ಚಿತ್ರತಂಡವೂ ಟೀಸರ್ ಹಾಗೂ ಟ್ರೈಲರ್ ಬಿಡುಗಡೆ ಮಾಡುವುದು ಒಂದು ರೀತಿಯ ಕಡ್ಡಾಯ ನಿಯಮವಾಗಿಬಿಟ್ಟಿದೆ. ಇನ್ನು ಬಾಕ್ಸ್ ಆಫೀಸ್ ವಿಚಾರದಲ್ಲಿ ಹೇಗೆ ಯಾವ ಚಿತ್ರ ಎಷ್ಟು ಗಳಿಕೆ ಮಾಡಿದೆ ಎಂದು ಅಳೆಯುತ್ತಾರೋ, ಅದೇ ರೀತಿ ಈ ಟ್ರೈಲರ್ ಹಾಗೂ ಟೀಸರ್‌ಗಳನ್ನು ಎಷ್ಟು ವೀಕ್ಷಣೆ ಪಡೆದುಕೊಂಡಿವೆ, ಯಾವ ಚಿತ್ರ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಟೀಸರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಅಳೆಯಲಾಗುತ್ತದೆ.
ಇನ್ನು ಇಲ್ಲಿಯೂ ಸಹ ಸ್ಟಾರ್ ನಟರ ಅಭಿಮಾನಿಗಳ ನಡುವೆ ಪೈಪೋಟಿ ಕಾಮನ್. ಕಲೆಕ್ಷನ್ ವಿಚಾರದಲ್ಲಿ ಹೇಗೆ ನಮ್ಮ ನಟನ ಚಿತ್ರ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಫ್ಯಾನ್ ವಾರ್ ನಡೆಸುತ್ತಾರೋ, ಅದೇ ರೀತಿ ಇಲ್ಲಿ ವೀಕ್ಷಣೆ ಕುರಿತ ಫ್ಯಾನ್ ವಾರ್ ಇರಲಿದೆ. ಮೊನ್ನೆಯಷ್ಟೇ ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಟೀಸರ್ ಬಿಡುಗಡೆಯಾಯಿತು. ಮೊದಲಿಗೆ ಮಧ್ಯಾಹ್ನ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡ ಟೀಸರ್ ಸಂಜೆ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಯಿತು.

ವಾವ್ ಎನಿಸುವಂತಿದ್ದ ಮಾರ್ಟಿನ್ ಟೀಸರ್ ಕಂಡ ಸಿನಿ ರಸಿಕರಿಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಯಿತು. ಇನ್ನು ಇದು ಪ್ಯಾನ್ ಇಂಡಿಯಾ ಸಿನಿಮಾವಾದ ಕಾರಣ ಟೀಸರ್ ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಎಷ್ಟು ವೀಕ್ಷಣೆ ಪಡೆದುಕೊಳ್ಳಬಹುದು ಎಂಬ ಲೆಕ್ಕಾಚಾರ ಶುರುವಾಗಿತ್ತು. ಅದರಲ್ಲಿಯೂ 24 ಗಂಟೆಗಳಲ್ಲಿ ಅತಿಹೆಚ್ಚು ವ್ಯೂಸ್ ಪಡೆದುಕೊಂಡ ಸ್ಯಾಂಡಲ್‌ವುಡ್ ಟೀಸರ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ವೀಕ್ಷಣೆಗಳನ್ನು ಮಾರ್ಟಿನ್ ಹಿಂದಿಕ್ಕಲಿದೆಯಾ ಎಂಬ ಚರ್ಚೆಗಳು ಹೆಚ್ಚಾಗಿದ್ದವು.
ಆದರೆ ಮಾರ್ಟಿನ್ ಚಿತ್ರ ಈ ದಾಖಲೆಯನ್ನು ಮುರಿಯುವಲ್ಲಿ ವಿಫಲಗೊಂಡಿದೆ. 24 ಗಂಟೆಗಳಲ್ಲಿ 33 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡ ಮಾರ್ಟಿನ್ ಟೀಸರ್ 425000 ಲೈಕ್ಸ್ ಅನ್ನೂ ಸಹ ಪಡೆದುಕೊಂಡಿತು. ಈ ಮೂಲಕ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಸ್ಯಾಂಡಲ್‌ವುಡ್ ಟೀಸರ್‌ಗಳ ಪಟ್ಟಿಯಲ್ಲಿ ಮಾರ್ಟಿನ್ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಹಾಗಾದರೆ ಈ ಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಪಡೆದುಕೊಂಡಿರುವ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
1. 24 ಗಂಟೆಗಳಲ್ಲಿ 78 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 24 ಗಂಟೆಗಳಲ್ಲಿ ಈ ಟೀಸರ್ 4.2 ಮಿಲಿಯನ್ ಲೈಕ್ಸ್ ಪಡೆದಿತ್ತು.
2. 24 ಗಂಟೆಗಳಲ್ಲಿ 33 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವ ಮಾರ್ಟಿನ್ ಚಿತ್ರದ ಟೀಸರ್ ಎರಡನೇ ಸ್ಥಾನದಲ್ಲಿದೆ. 24 ಗಂಟೆಗಳಲ್ಲಿ ಈ ಟೀಸರ್ 7,67,000 ಲೈಕ್ಸ್ ಪಡೆದಿತ್ತು.
3. 20 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದ ಜೇಮ್ಸ್ ಚಿತ್ರದ ಟೀಸರ್ ಮೂರನೇ ಸ್ಥಾನದಲ್ಲಿದೆ. 24 ಗಂಟೆಗಳಲ್ಲಿ ಈ ಟೀಸರ್ 4,25,000 ಲೈಕ್ಸ್ ಪಡೆದಿತ್ತು.
4. 12 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದ ಕಬ್ಜ ಚಿತ್ರದ ಟೀಸರ್ ನಾಲ್ಕನೇ ಸ್ಥಾನದಲ್ಲಿದೆ. 24 ಗಂಟೆಗಳಲ್ಲಿ ಈ ಟೀಸರ್ 3,81,000 ಲೈಕ್ಸ್ ಪಡೆದಿತ್ತು.


Click it and Unblock the Notifications











