ಧ್ರುವ ಸರ್ಜಾ 'ಮಾರ್ಟಿನ್' ಟ್ರೈಲರ್ ರಿಲೀಸ್ ಆಗಲ್ವಾ? ಅಭಿಮಾನಿಗಳಿಗೆ ಬೇಸರ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗ್ತಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಎ. ಪಿ ಅರ್ಜುನ್ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಸರ್ಜಾ ಕಥೆ ಚಿತ್ರಕ್ಕಿದೆ.
'ಪೊಗರು' ಬಳಿಕ ಧ್ರುವ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ 'ಮಾರ್ಟಿನ್' ರಿಲೀಸ್ ತಡವಾಗುತ್ತಲೇ ಬಂದಿತ್ತು. ಅಂತೂ ಇಂತೂ ಇದೀಗ ಪ್ರೇಕ್ಷಕರ ಮುಂದೆ ಬರ್ತಿದೆ. ಕೆಲ ದಿನಗಳ ಹಿಂದೆ ಮುಂಬೈನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಹೈವೋಲ್ಟೇಜ್ ಆಕ್ಷನ್ ಝಲಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಮೇಕಿಂಗ್, ಅದ್ಧೂರಿತನ, ಆಕ್ಷನ್ ಧಮಾಕಾ ನೋಡಿ ಥ್ರಿಲ್ಲಾಗಿದ್ದರು.

ಈಗಾಗಲೇ ಧ್ರುವ ಸರ್ಜಾ ಸಾಕಷ್ಟು ಸಂದರ್ಶನದಲ್ಲಿ ಭಾಗಿ ಆಗಿ 'ಮಾರ್ಟಿನ್' ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಕನ್ನಡ ಮಾತ್ರವಲ್ಲ ತಮಿಳು ಸಂದರ್ಶನಗಳಲ್ಲಿ ಭಾಗಿ ಆಗಿ ಮಾತನಾಡಿದ್ದಾರೆ. ಚಿತ್ರಕ್ಕೆ ಮಣಿಶರ್ಮ ಟ್ಯೂನ್ ಹಾಕಿದ್ದಾರೆ. ರವಿ ಬಸ್ರೂರು ರೀರೆಕಾರ್ಡಿಂಗ್ ಮಾಡಿದ್ದಾರೆ. ಸತ್ಯಾ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ವಾಸವಿ ಎಂಟರ್‌ಪ್ರೈಸಸ್ ಹಾಗೂ ಉದಯ್ ಕೆ ಮೆಹ್ತಾ ಪ್ರೊಡಕ್ಷನ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ವೈಭವಿ ಶಾಂಡಿಲ್ಯ 'ಮಾರ್ಟಿನ್' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಇತ್ತೀಚೆಗೆ ಚಿತ್ರದ ಡ್ಯುಯೆಟ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡಿತ್ತು. ಅನ್ವೇಷಿ ಜೈನ್, ಸಾಧು ಕೋಕಿಲ, ಚಿಕ್ಕಣ್ಣ, ಸುಕೃತಾ ವಾಗ್ಲೆ, ಮಾಳವಿಕಾ ಅವಿನಾಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಿನಿಮಾ ಬಿಡುಗಡೆ 20 ದಿನ ಬಾಕಿಯಿದೆ. ಆದರೆ ಸರಿಯಾಗಿ ಪ್ರಮೋಷನ್ ಮಾಡ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ತಿಂಗಳಿಗೂ ಮುನ್ನ ಟ್ರೈಲರ್ ರಿಲೀಸ್ ಮಾಡಿ ಪ್ಯಾನ್ ಇಂಡಿಯಾ ಸಿನಿಮಾಗಳ ಪ್ರಚಾರ ಮಾಡಲಾಗುತ್ತದೆ. ಆದರೆ 'ಮಾರ್ಟಿನ್' ವಿಚಾರದಲ್ಲಿ ಅದು ಕಾಣುತ್ತಿಲ್ಲ. ಟ್ರೈಲರ್ ರಿಲೀಸ್ ಮಾಡದೇ ಇರಲು ಚಿತ್ರತಂಡ ತೀರ್ಮಾನಿಸಿದೆ ಎನ್ನುವ ಗುಸುಗುಸು ಶುರುವಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಒಂದು ಸಾಂಗ್ ಮಾತ್ರ ರಿಲೀಸ್ ಮಾಡಿ ಬಳಿಕ ಸಿನಿಮಾ ತೆರೆಗೆ ತರಲು ಚಿತ್ರತಂಡ ಮುಂದಾಗಿದೆ ಎನ್ನುವ ಊಹಾಪೋಹ ಶುರುವಾಗಿದೆ.
ಸದ್ಯ 'ಮಾರ್ಟಿನ್' ಚಿತ್ರದ ಸೆನ್ಸಾರ್ ಕೆಲಸಗಳು ಆರಂಭವಾಗಿದೆ. ಚಿತ್ರದ ಕಾಲಾವಧಿ 2 ಗಂಟೆ 28 ನಿಮಿಷ ಎಂದು ಈಗಾಗಲೇ ಧ್ರುವ ಸರ್ಜಾ ಹೇಳಿದ್ದಾರೆ. ಆದರೆ ಟ್ರೈಲರ್ ರಿಲೀಸ್ ಮಾಡದೇ ಇರಲು ತೀರ್ಮಾನಿಸಿರುವ ಬಗ್ಗೆ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಸಾಮಾನ್ಯವಾಗಿ ಟ್ರೈಲರ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ 'ಮಾರ್ಟಿನ್' ಟೀಂ ಯಾಕೆ ರಿಸ್ಕ್ ತೆಗೆದುಕೊಳ್ಳುತ್ತಿದೆ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಈ ಹಿಂದೆ ಕೂಡ ಕೆಲ ಸಿನಿಮಾಗಳ ವಿಚಾರದಲ್ಲಿ ಈ ಪ್ರಯತ್ನ ಮಾಡಲಾಗಿತ್ತು. ಬರೀ ಟೀಸರ್ ಮಾತ್ರ ಬಿಟ್ಟು ಕಥೆಯ ಬಗ್ಗೆ ಕುತೂಹಲ ಉಳಿಸಿಕೊಳ್ಳುವ ಲೆಕ್ಕಾಚಾರ ನಡೆದಿತ್ತು. 'ಮಾರ್ಟಿನ್' ಟೀಂ ಕೂಡ ಇದೇ ರಿಸ್ಕ್ ತೆಗದುಕೊಳ್ತಿದ್ಯಾ? ಅಥವಾ ಮುಂದಿನ ದಿನಗಳಲ್ಲಿ ಟ್ರೈಲರ್ ಬರುತ್ತಾ ಕಾದು ನೋಡಬೇಕಿದೆ.
ದಸರಾ ಸಂಭ್ರಮದಲ್ಲಿ 'ಮಾರ್ಟಿನ್' ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕಿಂತ ಒಂದು ದಿನ ಮುನ್ನ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಬರಲಿದೆ. ಈ ಹಿಂದೆ ಸೂರ್ಯ ನಟನೆಯ 'ಕಂಗುವ' ಚಿತ್ರವನ್ನು ಅದೇ ದಿನ ರಿಲೀಸ್ ಮಾಡಲು ತೀರ್ಮಾನಿಸಲಾಗಿತ್ತು. ಕೊನೆ ಕ್ಷಣದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಬೇಡ ಎಂದು 'ಕಂಗುವ' ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಲಾಯಿತು. ಇದು 'ಮಾರ್ಟಿನ್'ಗೆ ವರದಾನವಾಗಲಿದೆ.


Click it and Unblock the Notifications











