ಧ್ರುವ ಸರ್ಜಾ 'ಪೊಗರು' ಸಿನಿಮಾದ ಹೊಸ ರಿಲೀಸ್ ಡೇಟ್ ಬಹಿರಂಗ
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿ ಹ್ಯಾಟ್ರಿಕ್ ಹಿಟ್ ಪಡೆದಿರುವ ಧ್ರುವ ಮೇಲಿನ ನಿರೀಕ್ಷೆ ಇಮ್ಮಡಿಯಾಗಿದೆ. ಸದ್ಯ ಸಿದ್ಧವಾಗುತ್ತಿರುವ ಪೊಗರು ಸಿನಿಮಾ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಸದ್ಯ ರಿಲೀಸ್ ಆಗಿರುವ ಪೊಗರು ಡೈಲಾಗ್ ಟ್ರೈಲರ್ ಸಿಕ್ಕಾಪಟ್ಟೆ ಕ್ರೇಸ್ ಹುಟ್ಟುಹಾಕಿದ್ದು ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಪೊಗರು ಚಿತ್ರೀಕರಣ ಪ್ರಾರಂಭವಾಗಿ ತುಂಬ ಸಮಯವಾಗಿದೆ. ಹಾಗಾಗಿ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎನ್ನುವುದು ಅಭಿಮಾನಿಗಳ ದೊಡ್ಡ ಪ್ರಶ್ನೆ.
ಈಗಾಗಲೆ ಕೇಳಿಬಂದ ಸುದ್ದಿಯ ಪ್ರಕಾರ ಸಿನಿಮಾ ಕಳೆದ ವರ್ಷ ಡಿಸೆಂಬರ್ ನಲ್ಲಿ ತೆರೆಗೆ ಬರಬೇಕಿತ್ತು. ಆದರೆ ಚಿತ್ರೀಕರಣ ಮುಗಿಯದ ಕಾರಣ ಮುಂದಕ್ಕೆ ಹೋಗಿತ್ತು. ನಂತರ ಸಂಕ್ರಾಂತಿಗೆ ರಿಲೀಸ್ ಆಗುತ್ತೆ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು. ಸಂಕ್ರಾಂತಿಗೂ ಸಿನಿಮಾ ಚಿತ್ರಮಂದಿರಕ್ಕೆ ಬರ್ತಿಲ್ಲ.

ಸದ್ಯ ಚಿತ್ರದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಪೊಗರು ಸಿನಿಮಾದ ಹೊಸ ರಿಲೀಸ್ ತಿಂಗಳು ಬಹಿರಂಗವಾಗಿದೆ. ಭಾರಿ ನಿರೀಕ್ಷೆಯ ಪೊಗರು ಮಾರ್ಚ್ ತಿಂಗಳ ಕೊನೆಯಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದರೆ ಮಾರ್ಚ್ ತಿಂಗಳ ಕೊನೆಯಲ್ಲಿ ಪೊಗರು ರಿಲೀಸ್ ಆದರೆ, ಏಪ್ರಿಲ್ ತಿಂಗಳ ಮೊದಲು ಡಿ ಬಾಸ್ ರಾಬರ್ಟ್ ಸಿನಿಮಾ ರಿಲೀಸ್ ಆಗುತ್ತಿದೆ
ಒಂದು ವೇಳೆ ಪೊಗರು ಮಾರ್ಚ್ ಕೊನೆಯಲ್ಲಿ, ರಾಬರ್ಟ್ ಏಪ್ರಿಲ್ ಮೊದಲು ಬಂದರೆ ಸ್ಯಾಂಡಲ್ ವುಡ್ ನ ಎರಡು ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗಿದಂತೆ ಆಗುತ್ತೆ. ಸದ್ಯ ಪೊಗರು ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಪೊಗರು ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ.


Click it and Unblock the Notifications











