ಗೋವಾದಲ್ಲಿ 'ಮಾರ್ಟಿನ್' ಗಾನಬಜಾನ; ಧ್ರುವ ಸರ್ಜಾ ಆಫ್ರೋ ಲುಕ್ ವೈರಲ್
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ರಿಷಬ್ ಶೆಟ್ಟ 'ಕಾಂತಾರ' ಪ್ರೀಕ್ವೆಲ್, ಯಶ್ 'ಟಾಕ್ಸಿಕ್' ಸಿನಿಮಾ ಬಂದು ಹೋದ್ರು 'ಮಾರ್ಟಿನ್' ಬರೋದು ಡೌಟು ಅಂತೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಅಂತೂ ಇಂತೂ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾನೆ 'ಮಾರ್ಟಿನ್'.
ಎ. ಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದು. ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಕಳೆದ ವರ್ಷವೇ ಟೀಸರ್ ಬಿಡುಗಡೆ ಆಗಿತ್ತು. ಬಳಿಕ ಯಾವುದೇ ಅಪ್‌ಡೇಟ್ ಇರಲಿಲ್ಲ. ಧ್ರುವ ಸರ್ಜಾ 'KD' ಚಿತ್ರದಲ್ಲಿ ಬ್ಯುಸಿಯಾಗಿ ಬಿಟ್ಟರು. 'ಮಾರ್ಟಿನ್' ಕಥೆ ಏನಾಯ್ತು? ಅನ್ನೋದು ಗೊತ್ತಾಗಲಿಲ್ಲ. ಆದರೆ ನಿರ್ಮಾಪಕರು ಪದೇ ಪದೇ ಚಿತ್ರವನ್ನು ನೆನಪಿಸುವ ಪ್ರಯತ್ನ ಮಾಡಿದ್ದರು. ಇತ್ತೀಚೆಗೆ ಚಿತ್ರದ ಆಡಿಯೋ ರೈಟ್ಸ್ 9 ಕೋಟಿ ರೂ.ಗೂ ಮಾರಾಟ ಆಗಿದ್ದು ಸುದ್ದಿ ಆಗಿತ್ತು.

ಅಂದುಕೊಂಡಿದ್ದಕ್ಕಿಂತ ದೊಡ್ಡ ಮಟ್ಟದ ಬಜೆಟ್‌ನಲ್ಲಿ 'ಮಾರ್ಟಿನ್' ಸಿನಿಮಾ ನಿರ್ಮಾಣವಾಗುತ್ತಿದೆ. ಕಾಶ್ಮೀರ, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಸದ್ಯ ಗೋವಾದಲ್ಲಿ ಚಿತ್ರತಂಡ ಬೀಡುಬಿಟ್ಟಿದ್ದು ಚಿತ್ರದ ಸಾಂಗ್ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರೀಕರಣಕ್ಕಾಗಿ ಧ್ರುವ ಆಫ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ವೈರಲ್ ಆಗುತ್ತಿದೆ.
ತೆಲುಗು ಸಂಗೀತ ನಿರ್ದೇಶಕ ಮಣಿಶರ್ಮ 'ಮಾರ್ಟಿನ್' ಚಿತ್ರದ ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಅದಕ್ಕೆ ತಕ್ಕಂತೆ ದೊಡ್ಡಮಟ್ಟದಲ್ಲಿ ಸಾಂಗ್ ಶೂಟಿಂಗ್ ಮಾಡಲಾಗುತ್ತಿದೆ. ಧ್ರುವ ಆಫ್ರೋ ಲುಕ್ ವಿಗ್ ಧರಿಸಿ, ದೊಡ್ಡ ಫ್ಯಾನ್ಸಿ ಸನ್ ಗ್ಲಾಸ್ ಹಾಕಿಕೊಂಡು ಚಿತ್ರೀಕರಣದಲ್ಲಿ ಮಿಂಚಿದ್ದಾರೆ. ಮುರಳಿ ಮಾಸ್ಟರ್ ಕೊರಿಯೋಗ್ರಫಿ ಮಾಡುತ್ತಿದ್ದಾರೆ.
ಎ. ಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ 'ದುಬಾರಿ' ಎನ್ನುವ ಸಿನಿಮಾ ಘೋಷಣೆ ಆಗಿತ್ತು. ಕಥೆ, ಚಿತ್ರಕಥೆ ಕೂಡ ಸಿದ್ಧವಾಗಿತ್ತು. ಉದಯ್ ಕೆ ಮೆಹ್ತಾ ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ಆದರೆ ಬಳಿಕ ಆ ಚಿತ್ರವನ್ನು ಪಕ್ಕಕ್ಕಿಟ್ಟು 'ಮಾರ್ಟಿನ್' ಕಥೆ ಕೈಗೆತ್ತಿಕೊಳ್ಳಲಾಗಿತ್ತು. ಚಿತ್ರದ ಟಾಕಿ ಭಾಗದ ಚಿತ್ರೀಕರಣ ಬಹಳ ಹಿಂದೆಯೇ ಮುಕ್ತಾಯವಾಗಿತ್ತು. ಆದರೆ 2 ಹಾಡುಗಳ ಚಿತ್ರೀಕರಣ ಬಾಕಿಯಿತ್ತು.

'ಮಾರ್ಟಿನ್' ಚಿತ್ರದ ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. 4 ದಿನಕ್ಕೆ 70 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಸದ್ದು ಮಾಡಿತ್ತು. 5 ಭಾಷೆಗಳಿಗೆ ಸೇರಿ ಒಂದೇ ಟೀಸರ್ ಬಂದಿತ್ತು. ದೇಶ ಪ್ರೇಮದ ಕಥೆ 'ಮಾರ್ಟಿನ್' ಚಿತ್ರದಲ್ಲಿದೆ. ಟೀಸರ್‌ನಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಧ್ರುವ ಸರ್ಜಾ ಅಬ್ಬರಿಸುವುದನ್ನು ತೋರಿಸಲಾಗಿತ್ತು. ಹಾಗಾಗಿ ಸಿನಿಮಾ ಕಥೆ ಕುತೂಹಲ ಮೂಡಿಸಿದೆ.
ಚಿತ್ರದಲ್ಲಿ ಧ್ರುವ ಸರ್ಜಾ ಹೆಸರು 'ಮಾರ್ಟಿನ್' ಅಲ್ಲ, ಹಾಗಾದರೆ 'ಮಾರ್ಟಿನ್' ಎನ್ನುವುದೇ ಇಂಟ್ರೆಸ್ಟಿಂಗ್ ಎಂದು ಚಿತ್ರತಂಡ ಹೇಳಿದೆ. ಸದ್ಯ ಕೊನೆ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಬಳಿಕ ಪ್ಲ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಮೋಷನ್ ಪ್ಲ್ಯಾನ್ ಮಾಡುತ್ತಿದೆ. ಶೀಘ್ರದಲ್ಲೇ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗುವ ಸಾಧ್ಯತೆಯಿದೆ.
ಅಂತರಾಷ್ಟ್ರೀಯ ಬಾಡಿ ಬಿಲ್ಡರ್‌ಗಳಾದ ನಥನ್ ಜೋನ್ಸ್ ಹಾಗೂ ರುಬಿಲ್ ಜೊತೆಗೆ ಧ್ರುವ ಸರ್ಜಾ ಗುದ್ದಾಡಿದ್ದಾರೆ. ಇದು ಚಿತ್ರದ ಹೈಲೆಟ್ ಎನ್ನಲಾಗ್ತಿದೆ. ಸತ್ಯ ಹೆಗ್ಡೆ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಸಂಕಲನ, ರಾಮ್-ಲಕ್ಷ್ಮಣ್ ಸಾಹಸ ಸಂಯೋಜನೆ ಚಿತ್ರಕ್ಕಿದೆ.


Click it and Unblock the Notifications











