'KGF-2' ದಾಖಲೆ ಮುರೀತಾ ಧ್ರುವ ಸರ್ಜಾ 'ಮಾರ್ಟಿನ್' ಆಡಿಯೋ ರೈಟ್ಸ್?
ಧ್ರುವ ಸರ್ಜಾ ನಟನೆಯ 'KD' ಸಿನಿಮಾ ಶುರುವಾದ ಬಳಿಕ 'ಮಾರ್ಟಿನ್' ಸಿನಿಮಾವನ್ನು ಎಲ್ಲರೂ ಮರೆತೇಬಿಟ್ಟಿದ್ದರು. ಕಳೆದ ವರ್ಷವೇ ಬಿಡುಗಡೆಯಾಗುತ್ತದೆ ಎಂದುಕೊಂಡಿದ್ದ ಸಿನಿಮಾ ಇನ್ನು ರಿಲೀಸ್ ಆಗುವ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಅಂತೂ ಇಂತೂ ಚಿತ್ರದ ಬಗ್ಗೆ ಒಂದು ಅಪ್‌ಡೇಟ್ ಸಿಕ್ಕಿದೆ.
ಭಾರೀ ಮೊತ್ತಕ್ಕೆ 'ಮಾರ್ಟಿನ್' ಪ್ಯಾನ್ ಇಂಡಿಯಾ ಚಿತ್ರದ ಆಡಿಯೋ ಹಕ್ಕು ಮಾರಾಟವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಯೇ ಸಿಕ್ಕಿದೆ. ಎ. ಪಿ ಅರ್ಜುನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ಜೋರಾಗಿದೆ. ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಚಿತ್ರವನ್ನು ನಿರ್ಮಿಸಿದ್ದಾರೆ. 'ಮಾರ್ಟಿನ್' ಪ್ಯಾನ್ ಇಂಡಿಯಾ ಚಿತ್ರದ ಆಡಿಯೋ ಹಕ್ಕು ಒಂಭತ್ತು ಕೋಟಿ ರೂಪಾಯಿಗೆ ಬಿಕರಿಯಾಗಿದೆ. ಜನಪ್ರಿಯ ಆಡಿಯೋ ಸಂಸ್ಥೆಯಾದ 'ಸರೆಗಮ' ಆಡಿಯೋ ಹಕ್ಕನ್ನು ಕೊಂಡುಕೊಂಡಿದೆ.

ನಿರ್ಮಾಪಕ ಉದಯ್ ಕೆ. ಮೆಹ್ತಾ ಮಾತನಾಡಿ "ನನಗೆ ತಿಳಿದ ಇಷ್ಟು ದೊಡ್ಡ ಮೊತ್ತಕ್ಕೆ ಯಾವುದೇ ಚಿತ್ರದ ಆಡಿಯೋ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲ". ನಮ್ಮ ಚಿತ್ರದ ಆಡಿಯೋ ರೈಟ್ಸ್ ಈ ಬಾರಿ ಮೊತ್ತಕ್ಕೆ ಮಾರಾಟವಾಗಿರುವುದು ತುಂಬಾ ಖುಷಿಯಾಗಿದೆ. ಮಣಿಶರ್ಮ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ" ಎಂದು ತಿಳಿಸಿದ್ದಾರೆ.
ಎ.ಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಜೋಡಿಯ ಎರಡನೇ ಸಿನಿಮಾ 'ಮಾರ್ಟಿನ್'. ಈ ಮಾಸ್ ಚಿತ್ರದ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಇನ್ನು ಬಾಲಿವುಡ್ ಬೆಡಗಿ ವೈಭವಿ ಶಾಂಡಿಲ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಅನ್ವೇಶಿ ಜೈನ್, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಸಾಧುಕೋಕಿಲ ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ಚಿತ್ರದ ಆಕ್ಷನ್ ಪ್ಯಾಕ್ಡ್ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕನ್ನಡ ಮಾತ್ರವಲ್ಲದೇ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ಮಾರ್ಟಿನ್' ಟೀಸರ್ ಪರಭಾಷಿಕರ ಗಮನ ಸೆಳೆದಿದ್ದು ಸುಳ್ಳಲ್ಲ. ಸರ್ಜುನ್ ಸರ್ಜಾ ಚಿತ್ರಕ್ಕೆ ಕಥೆ ಬರೆದಿರುವುದು ವಿಶೇಷ.
ಬಹಳ ಅದ್ಧೂರಿಯಾಗಿ 'ಮಾರ್ಟಿನ್' ಸಿನಿಮಾ ನಿರ್ಮಾಣವಾಗಿದೆ. ಹೈವೋಲ್ಟೇಜ್ ಆಕ್ಷನ್ ಹಾಗೂ ಚೇಸಿಂಗ್ ದೃಶ್ಯಗಳು ಚಿತ್ರದಲ್ಲಿದೆ. ಪ್ಯಾನ್ ಇಂಡಿಯಾ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಪ್ರಮೋಷನ್, ಮಾರ್ಕೆಟಿಂಗ್ ಹಾಗೂ ರಿಲೀಸ್ ಪ್ಲ್ಯಾನ್ ನಡೀತಿದೆ. 'ಪೊಗರು' ಬಳಿಕ ಧ್ರುವ ಸರ್ಜಾ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅಭಿಮಾನಿಗಳು 'ಮಾರ್ಟಿನ್' ಚಿತ್ರಕ್ಕಾಗಿ ಕಾದು ಕಾದು ಸುಸ್ತಾಗಿದ್ದಾರೆ.
ಸದ್ಯ ಚಿತ್ರದ ಆಡಿಯೋ ರೈಟ್ಸ್ ಮಾರಾಟ ಆಗಿರುವುದರಿಂದ ಶೀಘ್ರದಲ್ಲೇ ಒಂದೊಂದೇ ಲಿರಿಕಲ್ ವಿಡಿಯೋ ಸಾಂಗ್ಸ್ ಹೊರಬರುವ ನಿರೀಕ್ಷೆಯಿದೆ. ಸಂಕ್ರಾಂತಿಗೆ ಮೊದಲ ಹಾಡು ಬಂದರೂ ಅಚ್ಚರಿ ಪಡಬೇಕಿಲ್ಲ. ಮಂಗಳೂರು, ಬೆಂಗಳೂರು, ಹೈದರಾಬಾದ್, ಕಾಶ್ಮೀರ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.
ಈ ಹಿಂದೆ ಧ್ರುವ- ಅರ್ಜುನ್ 'ಅದ್ಧೂರಿ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 'ಕಿಸ್' ಬಳಿಕ ನಿರ್ದೇಶಕರು ಈ 'ಮಾರ್ಟಿನ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ. ಇನ್ನು ಅಂದಾಜು ಮೀರಿ ಚಿತ್ರಕ್ಕೆ ಬಂಡವಾಳ ಹೂಡಿರುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.


Click it and Unblock the Notifications











