Martin Box Office: ಅಧಿಕೃತವಾಗಿ 'ಮಾರ್ಟಿನ್' ಚಿತ್ರದ ಕಲೆಕ್ಷನ್ ಘೋಷಿಸಿದ ಚಿತ್ರತಂಡ
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ರಾಜ್ಯಾದ್ಯಂತ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗುತ್ತಿದೆ. ಆಕ್ಷನ್ ಎಂಟರ್‌ಟೈನರ್ ಸಿನಿಮಾ ಅಭಿಮಾನಿಗಳ ಮನಗೆದ್ದಿದೆ. ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ರು ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಇದೀಗ ಚಿತ್ರತಂಡ 'ಮಾರ್ಟಿನ್' ಚಿತ್ರದ ಎರಡು ದಿನಗಳ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿದೆ. ಎಪಿ ಅರ್ಜುನ್ ನಿರ್ದೇಶನದ ಚಿತ್ರದಲ್ಲಿ ಧ್ರುವ ಸರ್ಜಾ ಅಬ್ಬರಿಸಿ ಬೊಬ್ಬರಿದಿದ್ದಾರೆ. ಡಬಲ್ ರೋಲ್‌ನಲ್ಲಿ ಡಬಲ್ ಧಮಾಕಾ ಎಂಟರ್‌ಟೈನ್‌ಮೆಂಟ್ ಉಣಬಡಿಸಿದ್ದಾರೆ. ಬೇರೆ ಪಾತ್ರಗಳೆಲ್ಲಾ ಮಾರ್ಟಿನ್ ಹಾಗೂ ಅರ್ಜುನ್ ಎದುರು ಮಂಕಾಗಿಬಿಟ್ಟಿವೆ. ಮೊದಲಿನಿಂದ ಕೊನೆವರೆಗೆ ಆಗಾಗ್ಗೆ ಆಕ್ಷನ್ ಬಂದು ಪ್ರೇಕ್ಷಕರನ್ನು ರಂಜಿಸುತ್ತದೆ.

ಅಂದಾಜು 75 ಕೋಟಿ ರೂ. ಬಜೆಟ್‌ನಲ್ಲಿ 'ಮಾರ್ಟಿನ್' ಸಿನಿಮಾ ನಿರ್ಮಾಣವಾಗಿದೆ. ಕಲಾವಿದರಿಂದ ಸಂಭಾವನೆಯಾಗಿ ಅಂದಾಜು 20 ಕೋಟಿ ರೂ. ಹಣ ನೀಡಲಾಗಿದೆ. ಆಕ್ಷನ್ ಸೀಕ್ವೆನ್ಸ್ ಹಾಗೂ ಗ್ರಾಫಿಕ್ಸ್‌ಗಾಗಿ ಹೆಚ್ಚು ವ್ಯಯಿಸಲಾಗಿದೆ. ಬಹಳ ದೊಡ್ಡ ಸ್ಕೇಲ್‌ನಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಒಂದಷ್ಟು ನೆಗೆಟಿವ್ ಕಾಮೆಂಟ್ಸ್ ಹೊರತಾಗಿಯೂ 'ಮಾರ್ಟಿನ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಬಿ, ಸಿ ಸೆಂಟರ್‌ಗಳಲ್ಲಿ 'ಮಾರ್ಟಿನ್' ಸಿನಿಮಾ ನೋಡಲು ಜನ ಮುಗಿಬಿದ್ದಿದ್ದಾರೆ. ಮಂಡ್ಯ, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಇದು ಸಹಜವಾಗಿಯೇ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಕರ್ನಾಟಕ ಮಾತ್ರವಲ್ಲದೇ ಹೊಸ ರಾಜ್ಯಗಳಲ್ಲಿ ಕೂಡ ಧ್ರುವ ಸರ್ಜಾ 'ಮಾರ್ಟಿನ್' ಆರ್ಭಟ ಜೋರಾಗಿದೆ.
ಸತ್ಯಾ ಹೆಗಡೆ ಛಾಯಾಗ್ರಹಣ, ಮಣಿಶರ್ಮ ಸಂಗೀತ ಹಾಡುಗಳು 'ಮಾರ್ಟಿನ್' ಚಿತ್ರದಲ್ಲಿದೆ. ಇನ್ನು ರವಿಬಸ್ರೂರು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. 'ಮಾರ್ಟಿನ್' ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಒದಗಿಸಿದ್ದಾರೆ. ಇಂಟರ್‌ನ್ಯಾಷನಲ್ ಕ್ರೈಂ, ಮೆಡಿಕಲ್ ಮಾಫಿಯಾ ವಿಚಾರಗಳನ್ನು ಇಟ್ಟುಕೊಂಡು ಕಥೆ ಮಾಡಲಾಗಿದೆ.

ಪಾಕಿಸ್ತಾನ ಸೇನೆಯಿಂದ ಬಂಧನಕ್ಕೊಳಗಾದ ಭಾರತೀಯನ ಕಥೆಯೊಂದಿಗೆ 'ಮಾರ್ಟಿನ್' ಸಿನಿಮಾ ಆರಂಭವಾಗುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳುವ ಆತನಿಗೆ ತಾನು ಯಾರು? ತನ್ನ ಹಿನ್ನೆಲೆ ಏನು ಎನ್ನುವುದು ನೆನಪಿರುವುದಿಲ್ಲ. ತಾನು ಯಾರು ಎನ್ನುವ ಹುಡುಕಾಟದಲ್ಲಿ ಇನ್ನುಳಿದ ಕಥೆ ಸಾಗುತ್ತದೆ. ಮಾರ್ಟಿನ್ ಯಾರು? ಅರ್ಜುನ್ ಯಾರು? ಎನ್ನುವುದನ್ನು ತೆರೆಮೇಲೆಯೇ ನೋಡಬೇಕು.
ಶುಕ್ರವಾರ 'ಮಾರ್ಟಿನ್' ಸಿನಿಮಾ ಮಾರ್ನಿಂಗ್ ಶೋ ಕೆಲವೆಡೆ ರದ್ದಾಗಿತ್ತು. ಟಿಕೆಟ್ ಬುಕ್ ಮಾಡಿಕೊಂಡಿದ್ದವರು ಬೇಸರಗೊಂಡರು. ಆದರೆ ಶನಿವಾರ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ಮೊದಲ ದಿನಕ್ಕಿಂತ 2ನೇ ದಿನ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. ಸದ್ಯ ಚಿತ್ರತಂಡವೇ ನೀಡಿರುವ ಮಾಹಿತಿ ಪ್ರಕಾರ ಮೊದಲ ದಿನ ಕರ್ನಾಟಕದಲ್ಲಿ ಸಿನಿಮಾ 9.1 ಕೋಟಿ ರೂ ಗ್ರಾಸ್ ಕಲೆಕ್ಷನ್ ಮಾಡಿತ್ತು. 2ನೇ ದಿನ 13.4 ಕೋಟಿ ರೂ. ಗಳಿಕೆಯಾಗಿದೆ.
ಒಟ್ಟಾರೆ ಮಾರ್ಟಿನ್ ಸಿನಿಮಾ ಕರ್ನಾಟದಲ್ಲಿ ಮೊದಲ ಎರಡು ದಿನಕ್ಕೆ 22.5 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದಂತಾಗಿದೆ. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಟಫ್ ಕಾಂಪಿಟೇಷನ್ ಇದೆ. ತಮಿಳಿನ 'ವೆಟ್ಟೆಯಾನ್' ಹಾಗೂ ಹಿಂದಿಯ 'ಜಿಗ್ರಾ' ಚಿತ್ರಗಳು ಕೂಡ ತೆರೆಕಂಡು ಪ್ರದರ್ಶನ ಕಾಣುತ್ತಿವೆ.
ಮೂರನೇ ದಿನವಾದ ಇಂದು(ಭಾನುವಾರ) 'ಮಾರ್ಟಿನ್' ಭರ್ಜರಿ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ. ನಾಳೆಯಿಂದ ಸಿನಿಮಾ ಗಳಿಕೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಜೊತೆಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಚಿಕ್ಕಣ್ಣ, ಅಚ್ಯುತ್‌ಕುಮಾರ್, ಅನ್ವೇಷಿ ಜೈನ್ ಬಣ್ಣ ಹಚ್ಚಿ ನಟಿಸಿದ್ದಾರೆ.


Click it and Unblock the Notifications











