ನನ್ನ ಬಂಧನವಾಗಿಲ್ಲ, ಇದೆಲ್ಲಾ ಅವರ ಕೈವಾಡ; ಫಿಲ್ಮಿಬೀಟ್‌ಗೆ ಸುಧಾಕರ್ ಗೌಡ ಸ್ಪಷ್ಟನೆ
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸುಧಾಕರ್ ಗೌಡ ಕೂಡ ಚಿತ್ರದ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಧ್ರುವ ಸರ್ಜಾ ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಆತ ಕ್ಷಮೆ ಕೇಳಿ ವಿಡಿಯೋ ಮಾಡಿದ್ದರು.
'ಮಾರ್ಟಿನ್' ಸಿನಿಮಾ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಕೆಲವರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಇತ್ತೀಚೆಗೆ ಮತ್ತೊಂದು ವೀಡಿಯೋ ಮಾಡಿ ಸುಧಾಕರ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸುಧಾಕರ್ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗುಲ್ಲಾಗಿತ್ತು. ಹಲ್ಲೆ ಪ್ರಕರಣವೊಂದರಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೆಲ್ಲಾ ಸುಳ್ಳು ಎಂದು ಸುಧಾಕರ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಾಮಿಡಿ ವೀಡಿಯೋಗಳಿಂದ ಸುಧಾಕರ್ ಗೌಡ ಜನಪ್ರಿಯತೆ ಸಾಧಿಸಿದ್ದರು. ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಖಾತೆಗಳಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿರುವ ಸುಧಾಕರ್ ಗೌಡ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಹಲ್ಲೆ ಪ್ರಕರಣವೊಂದರಲ್ಲಿ ಸುಧಾಕರ್ ಗೌಡ ಹೆಸರು ಕೇಳಿಬಂದಿತ್ತು. 'ಮಾರ್ಟಿನ್' ಸಿನಿಮಾ ವಿಚಾರದಲ್ಲಿ ವಿವಾದ ಸೃಷ್ಟಿಸಿಕೊಳ್ಳುತ್ತಿದ್ದಂತೆ ಧ್ರುವ ಸರ್ಜಾ ಫ್ಯಾನ್ಸ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು ಎನ್ನಲಾಗಿತ್ತು.
ಪೊಲೀಸರು ಸುಧಾಕರ್ ಬಳಿ ಅಪಾಲಜಿ ಪತ್ರ ಬರೆಸಿಕೊಂಡು 'ಮಾರ್ಟಿನ್' ಸಿನಿಮಾ ರಿವ್ಯೂ ವೀಡಿಯೋ ಡಿಲೀಟ್ ಮಾಡಿಸಿದ್ದಾರೆ. ಹಲ್ಲೆ ಪ್ರಕರಣದಲ್ಲಿ ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದೆಲ್ಲಾ ಕಟ್ಟುಕತೆ ಎಂದು ಸುಧಾಕರ್ ತಿಳಿಸಿದ್ದಾರೆ.
ದೂರವಾಣಿ ಮೂಲಕ ಫಿಲ್ಮಿಬೀಟ್ ಕನ್ನಡಕ್ಕೆ ಯೂಟ್ಯೂಬರ್ ಸುಧಾಕರ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. "ನನ್ನ ಬಂಧನವಾಗಿದೆ ಎನ್ನುವುದು ಸುಳ್ಳು. ಒಂದು ವೇಳೆ ನಾನು ಬಂಧನವಾಗಿದ್ದರೆ ನಿಮ್ಮ ಜೊತೆ ಮಾತನಾಡಲು ಹೇಗೆ ಸಾಧ್ಯವಾಗುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ.
ನನಗೆ ಬೆದರಿಕೆ ಕರೆಗಳನ್ನು ಮಾಡುತ್ತಿರುವ ತಂಡದವರು ಇಂತಾದೊಂದು ಸುಳ್ಳು ಸುದ್ದಿ ತೇಲಿಬಿಟ್ಟಿದ್ದಾರೆ. ನಾನು ಪೊಲೀಸ್ ಠಾಣೆಯಲ್ಲಿ ಇರುವ ಯಾವುದಾದರೂ ಫೋಟೊ ಇದ್ಯಾ ಹೇಳಿ? ನನಗೆ ಬಂದಿದ್ದ ಬೆದರಿಕೆ ಕರೆಗಳ ಬಗ್ಗೆ ನಾನು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದೆ. ಅದನ್ನು ನೋಡಿ ನನ್ನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ಸುದ್ದಿ ಹರಡಿದ್ದಾರೆ.
ನಾನು ಅವರ ವಿರುದ್ಧ ದೂರು ನೀಡಿರುವುದಕ್ಕೆ ನನ್ನ ಬಳಿ ದಾಖಲೆ ಇದೆ. ನಾನು ಬಂಧನವಾಗಿಲ್ಲ. ಅದೆಲ್ಲಾ ಸುಳ್ಳು ವದಂತಿ ಅಷ್ಟೇ ಎಂದು ಸುಧಾಕರ್ ಗೌಡ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











