Martin: ಸದ್ದಿಲ್ಲದೇ ದಾಖಲೆ ಬರೆದ 'ಮಾರ್ಟಿನ್': ಜಾರ್ಜಿಯಾ ಜೊತೆ ಧ್ರುವ ಥೈಯತಕ್ಕ.. ರಿಲೀಸ್ ಡೇಟ್ ಫಿಕ್ಸ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬೇಜಾನ್ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು ಹಾಡುಗಳು ಚಿತ್ರೀಕರಣ ನಡೀತಿದೆ. ಕಳೆದ ವರ್ಷ ಬಿಡುಗಡೆಯಾದ ಟೀಸರ್ ಹೊಸ ದಾಖಲೆ ಬರೆದಿದ್ದು ಸದ್ಯ ಸಿನಿಮಾ ನೋಡೋಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮಾರ್ಟಿನ್' ಆರ್ಭಟಕ್ಕೆ ದಿನಗಣನೆ ಶುರುವಾಗಿದೆ.
ಎ. ಪಿ ಅರ್ಜುನ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 2ನೇ ಸಿನಿಮಾ 'ಮಾರ್ಟಿನ್'. ಈ ಹಿಂದೆ 'ಅದ್ಧೂರಿ' ಚಿತ್ರದಲ್ಲಿ ಈ ಜೋಡಿ ರೊಮ್ಯಾಂಟಿಕ್ ಸ್ಟೋರಿ ಹೇಳಿತ್ತು. ಈ ಬಾರಿ ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರುತ್ತಿದೆ. ಚಿತ್ರದಲ್ಲಿ ವೈಭವಿ ಶಾಂಡಿಲ್ಯ ಹಾಗೂ ಅನ್ವೇಶಿ ಜೈನ್ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಹೈವೋಲ್ಟೇಜ್ ಆಕ್ಷನ್ ಸಿನಿಮಾ ತೆರೆಗೆ ಬರುತ್ತಿದೆ.

ಕಾಶ್ಮೀರ, ಮುಂಬೈ, ಮಂಗಳೂರು, ಹೈದರಾಬಾದ್, ವೈಜಾಗ್‌ನಲ್ಲಿ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ನಡೆದಿದೆ. ಅರ್ಜುನ್ ಸರ್ಜಾ ಚಿತ್ರಕ್ಕೆ ಕತೆ ಬರೆದಿದ್ದು ಮೋಕೊಬೋಟ್ ಕ್ಯಾಮರಾ ಬಳಿಸಿ ಚಿತ್ರೀಕರಣ ನಡೆಸಲಾಗಿದೆ. ಉದಯ್ ಕೆ. ಮೆಹ್ತಾ ನಿರ್ಮಾಣದ ಬಹಳ ದುಬಾರಿ ಸಿನಿಮಾ ಇದಾಗಲಿದೆ. ಆಕ್ಷನ್ ಪ್ಯಾಕ್ಡ್ 'ಮಾರ್ಟಿನ್' ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇದೆ. ಇದೀಗ ಟೀಸರ್ 80 ಲಕ್ಷಕ್ಕೂ ಅಧಿಲ ವೀವ್ಸ್ ಸಾಧಿಸಿರುವ ಟೀಸರ್ 10 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡು ಸದ್ದು ಮಾಡ್ತಿದೆ.
ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಇದರೊಟ್ಟಿಗೆ ಇತ್ತೀಚೆಗೆ ಚಿತ್ರದ ಸ್ಪೆಷಲ್ ಸಾಂಗ್ ಶೂಟ್ ಮುಕ್ತಾಯವಾಗಿದೆ. ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಈ ಬಿಂದಾಸ್ ನಂಬರ್ ಶೂಟ್ ಮಾಡಲಾಗಿದೆ. ಧ್ರುವ ಜೊತೆ ಜಾರ್ಜಿಯಾ ಆಂಡ್ರಿಯಾನಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಆಕೆಯ ಮೊದಲ ಸಿನಿಮಾ. ಮಣಿಶರ್ಮಾ ಟ್ಯೂನ್ ಹಾಕಿರುವ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ. 300ಕ್ಕೂ ಹೆಚ್ಚು ಫಾರಿನ್ ಡ್ಯಾನ್ಸರ್ಸ್ ಹಾಡಿನಲ್ಲಿ ಕುಣಿದಿದ್ದಾರೆ. 3. 5 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಈ ಸಾಂಗ್ ಸೆರೆಹಿಡಿಯಲಾಗಿದೆ. ಇನ್ನು 2 ಸಾಂಗ್ ಶೂಟಿಂಗ್ ಬಾಕಿಯಿದೆ.
'ಮಾರ್ಟಿನ್' ಚಿತ್ರಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಇದೆ. ಇನ್ನು ರಾಮ್‌ಲಕ್ಷ್ಮಣ್ ಹಾಗೂ ರವಿವರ್ಮಾ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಿದ್ದಾರೆ. ಚೇಸಿಂಗ್, ಆಕ್ಷನ್ ಸನ್ನಿವೇಶಗಳನ್ನು ಬಹಳ ರೋಚಕವಾಗಿ ಸೆರೆಹಿಡಿಯಲಾಗಿದೆ. ಧ್ರುವ ಸಿಕ್ಕಾಪಟ್ಟೆ ರಿಸ್ಕ್ ತಗೊಂಡು ನಟಿಸಿದ್ದಾರೆ. ಇನ್ನು 2 ಸಾಂಗ್ ಶೂಟಿಂಗ್ ನಡೆಯಬೇಕಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.
'ಮಾರ್ಟಿನ್' ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು ಕಾಜೇಜು ಎಪಿಸೋಡ್ ಕೂಡ ಇದೆ ಎನ್ನಲಾಗುತ್ತಿದೆ. ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ಧ್ರುವ ಸರ್ಜಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪೆಷಲ್ ಸಾಂಗ್‌ನಲ್ಲೂ ಅದೇ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಬೇರೆ ಬೇರೆ ಶೇಡ್‌ಗಳಿರುವ ಪಾತ್ರದಲ್ಲಿ ಆಕ್ಷನ್ ಪ್ರಿನ್ಸ್ ಅಬ್ಬರಿಸಿದ್ದಾರೆ. ಇನ್ನು ವಿದೇಶ ಬಾಡಿ ಬಿಲ್ಡರ್‌ಗಳ ಜೊತೆ ಮತ್ತೊಮ್ಮೆ ಧ್ರುವ ಸರ್ಜಾ ಗುದ್ದಾಡಿದ್ದಾರೆ. ಟೀಸರ್‌ನ ಅದರ ಸಣ್ಣ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಆರಂಭದಲ್ಲೇ 'ಮಾರ್ಟಿನ್' ಥಿಯೇಟರ್ ಅಂಗಳಕ್ಕೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿತ್ತು. ಡಿಸೆಂಬರ್‌ನಲ್ಲಿ 22ಕ್ಕೆ ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.


Click it and Unblock the Notifications











