'KGF' ಸರಣಿ ಬಳಿಕ 'ಧುರಂಧರ್' ಸರಣಿ ಗುದ್ದು; ಕನ್ನಡ ಚಿತ್ರರಂಗ ಕಲಿಯಬೇಕಾದ ಪಾಠ ಏನು?
ಭಾರತೀಯ ಚಿತ್ರರಂಗವೇ ಈಗ 'ಧುರಂಧರ್'-2 ಸಿನಿಮಾ ಗುಂಗಿನಲ್ಲಿದೆ. ನಿಂತ್ರು ಕುಂತ್ರು ಇದೇ ಚರ್ಚೆ. ಆದಿತ್ಯಧರ್ ನಿರ್ದೇಶನದ ಸಿನಿಮಾ ಹೊಸ ಸಂಚಲನ ಸೃಷ್ಟಿಸಿದೆ. ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಖ್ಯಾತ ಫಿಲ್ಮ್ ಮೇಕರ್ಸ್, ಸ್ಟಾರ್ಸ್ ಕೂಡ ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ. ಈ ಸಿನಿಮಾ ಬಾಲಿವುಡ್ ಮಾತ್ರವಲ್ಲ ಎಲ್ಲಾ ದಕ್ಷಿಣದ ಎಲ್ಲಾ ಚಿತ್ರರಂಗಗಳ ಮೇಲೆ ಪರಿಣಾಮ ಬೀರಲಿದೆ.
'ಧುರಂಧರ್' ಸಕ್ಸಸ್ ಸಿನಿಮಾ ಮೇಕಿಂಗ್ ಸಿದ್ಧಸೂತ್ರಕ್ಕೆ ಪೆಟ್ಟುಕೊಟ್ಟಿದೆ. ಈಗಾಗಲೇ 'ಬಾಹುಬಲಿ', 'KGF' ಸರಣಿ ಸಿನಿಮಾಗಳು ಕಮರ್ಷಿಯಲ್ ಸಿನಿಮಾ ಬುಡವನ್ನೇ ಅಲ್ಲಾಡಿಸಿಬಿಟ್ಟಿವೆ. ನಾಲ್ಕು ಸಾಂಗ್ಸ್, ನಾಲ್ಕು ಫೈಟ್ಸ್, ಒಂದು ಐಟಂ ಸಾಂಗ್ ಟ್ರೆಂಡ್ ನಿಧಾನವಾಗಿ ದೂರಾಗುತ್ತಿದೆ. ಫಿಲ್ಮ್ ಮೇಕರ್ಸ್ ದೊಡ್ಡದಾಗಿ ಯೋಚಿಸಬೇಕಾಗಿದೆ. ಇದೇ ಕಾರಣಕ್ಕೆ ಕೆಲ ನಿರ್ದೇಶಕರು ಮೂರ್ನಾಲ್ಕು ವರ್ಷಗಳಿಂದ ಸಿನಿಮಾ ನಿರ್ದೇಶನದಿಂದ ದೂರ ಉಳಿದುಬಿಟ್ಟಿದ್ದಾರೆ. ಪ್ರೇಕ್ಷಕರು ಯಾವಾಗ ಯಾವ ರೀತಿಯ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎನ್ನುವ ಅಂದಾಜು ಯಾರಿಗೂ ಸಿಗುತ್ತಿಲ್ಲ. ಓಟಿಟಿಯಲ್ಲಿ ದೇಶ ವಿದೇಶದ ಸಿನಿಮಾ, ವೆಬ್ ಸೀರಿಸ್ ನೋಡುವ ಇವತ್ತಿನ ಪ್ರೇಕ್ಷಕ ವರ್ಗವನ್ನು ಮೆಚ್ಚುಸುವುದ ನಿಜಕ್ಕೂ ಸವಾಲಿನ ಕೆಲಸ.

ಬಾಲಿವುಡ್ ಕೂಡ ಆಕ್ಷನ್, ಫಾರಿನ ಲೋಕೇಶ್, ಡ್ಯುಯೆಟ್, ಐಟಂ ಸಾಂಗ್ ಇರುವ ಸಿನಿಮಾಗಳನ್ನು ಮಾಡಿ ಮಾಡಿ ಹಳ್ಳಿ ಹಿಡಿದಿತ್ತು. 'ಛಾವ', 'ಧುರಂಧರ್' ಸರಣಿ ರೀತಿಯ ಸಿನಿಮಾಗಳು ಮತ್ತೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡಿದೆ. ಇದಲ್ಲ ನಮ್ಮ ಸಿನಿಮಾ, ಇದಲ್ಲ ನಮ್ಮ ಪ್ರೇಕ್ಷಕರಿಗೆ ಬೇಕಿರುವುದು ಎಂದು ತೋರಿಸಿಕೊಟ್ಟಿವೆ. 'ಧುರಂಧರ್' ಸರಣಿ ಸಿನಿಮಾಗಳನ್ನು ನೋಡಿ ಫಿಲ್ಮ್ ಮೇಕರ್ಸ್ ಶಾಕ್ ಆಗಿದ್ದಾರೆ. ಈ ಚಿತ್ರದ ಬೆಂಚ್‌ಮಾರ್ಕ್ ಅನ್ನು ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಂತ ಎಲ್ಲರೂ ಅದೇ ಸಿನಿಮಾಗಳನ್ನು ಮಾಡೋಕೆ ಸಾಧ್ಯವಿಲ್ಲ. ಆದಿತ್ಯಧರ್ ರೀತಿ ಸ್ಪೈ ಆಕ್ಷನ್ ಸಿನಿಮಾಗಳನ್ನು ನಮ್ಮ ಮೂಲದ ಕಥೆಗಳನ್ನು ಹೆಕ್ಕಿ ತೆಗೆಯಬೇಕಿದೆ. ಅದಕ್ಕೆ 'ಕಾಂತಾರ' ಸರಣಿ ಉತ್ತಮ ಉದಾಹರಣೆ.
ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳನ್ನು ಪ್ರೇಕ್ಷಕರು ಒಪ್ಪಲ್ಲ. ದೊಡ್ಡ ಪರದೆಯಲ್ಲಿ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವ ಸಿನಿಮಾಗಳು ಬೇಕಿದೆ. ಅದೇ ಕಾರಣಕ್ಕೆ 500 ಕೋಟಿ, 1000 ಕೋಟಿ ರೂ. ಬಜೆಟ್‌ನಲ್ಲಿ(ಟಾಕ್ಸಿಕ್, ಅಟ್ಲಿ- ಅಲ್ಲು ಅರ್ಜುನ್ ಸಿನಿಮಾ, ವಾರಣಾಸಿ) ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನಗಳು ಶುರುವಾಗಿದೆ. ಇಂತಹ ಸಿನಿಮಾಗಳ ನಡುವೆ ಸಣ್ಣ ಬಜೆಟ್ ಸಿನಿಮಾಗಳನ್ನು ಮಾಡಿ ಗೆಲ್ಲುವುದು ಸುಲಭವಲ್ಲ. ಅದಕ್ಕೆ ನಿರ್ದೇಶಕರು ಸರ್ಕಸ್ ಮಾಡಬೇಕಿದೆ. ಇವತ್ತಿಗೂ 'ಮ್ಯಾಕ್ಸ್', 'ಲವ್ ಮಾಕ್ಟೇಲ್', 'ಸು ಫ್ರಂ ಸೋ' ರೀತಿಯ ಚಿಕ್ಕ ಸಿನಿಮಾಗಳನ್ನು ಜನ ನೋಡಲು ಸಿದ್ಧರಿದ್ದಾರೆ. ಆದರೆ ಇಂತಹ ಸಿನಿಮಾಗಳನ್ನು ಮಾಡಲು ನಮ್ಮ ಹಳೇ ನಿರ್ದೇಶಕರಿಗೆ ಸಾಧ್ಯವಾಗ್ತಿಲ್ಲ.

ಕನ್ನಡದಲ್ಲೇ ದುನಿಯಾ ಸೂರಿ, ನರ್ತನ್, ಪವನ್ ಒಡೆಯರ್, ಯೋಗರಾಜ್ ಭಟ್, ಸಂತೋಷ್ ಆನಂದ್ ರಾಮ್, ತರುಣ್ ಸುಧೀರ್ ರೀತಿಯ ನಿರ್ದೇಶಕರು ಒಂದು ಸಿನಿಮಾ ಶುರು ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಇವತ್ತು ಸಿನಿಮಾ ಮೇಕಿಂಗ್ ಅಷ್ಟು ಕಷ್ಟವಾಗಿಬಿಟ್ಟಿದೆ. ಈ ವರ್ಷದ ಬಹುನಿರೀಕ್ಷಿತ ಕನ್ನಡ ಸಿನಿಮಾ ಯಾವ್ದು ಅಂದ್ರೆ 'ಟಾಕ್ಸಿಕ್' ಬಿಟ್ಟು ಬೇರೆ ಹೆಸರು ನೆನಪಾಗುತ್ತಿಲ್ಲ. 'ಧುರಂಧರ್- 2' ಬೆನ್ನಲ್ಲೇ ಟಾಲಿವುಡ್ ಹೀರೊಗಳು ಅಚ್ಚರಿಗೊಂಡಿದ್ದಾರಂತೆ. ತಮ್ಮ ಸಿನಿಮಾ ಕಥೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಮುಂದಾಗಿದ್ದಾರೆ ಎಂದು ಚರ್ಚೆ ಶುರುವಾಗಿದೆ.
'ಧುರಂಧರ್' ಸರಣಿ ನೋಡಿ ಎಲ್ಲರೂ ಸ್ಪೈ ಥ್ರಿಲ್ಲರ್ ಅಥವಾ ದೇಶಾಭಿಮಾನದ ಸಿನಿಮಾಗಳನ್ನು ಮಾಡಲು ಸಾಧ್ಯವಿಲ್ಲ. ಅದರಲ್ಲೂ ದಕ್ಷಿಣದಲ್ಲಿ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ, ಗಡಿ ರೇಖೆ, ಯುದ್ಧದಂತಹ ಘಟನೆಗಳನ್ನಿಟ್ಟುಕೊಂಡು ಸಿನಿಮಾ ಮಾಡುವುದು ಕಷ್ಟ ಕಷ್ಟ. ಅದು ಬಾಲಿವುಡ್ ಸಿನಿಮಾಗಳಿಗೆ ಮಾತ್ರ ಸೂಕ್ತ. ಇನ್ನುಳಿದಂತೆ ನಮ್ಮದೇ ಮಣ್ಣಿನ ಕಥೆಗಳನ್ನು ಸಿನಿಮಾ ಮಾಡಿ, ಪ್ರೇಕ್ಷಕರನ್ನು ಒಪ್ಪಿಸಿ ಗೆಲ್ಲಲು ಸಾಧ್ಯವಿದೆ. ಅದಕ್ಕೆ ಹೆಚ್ಚಿನ ಅಧ್ಯಯನ, ಸಂಶೋಧನೆ, ಕಸುವು ಬೇಕು. ಮಾಮೂಲಿ ಕಮರ್ಷಿಯಲ್ ಸಿನಿಮಾಗಳನ್ನು ಮಾಡುವವರು ಇಂತಹ ಪ್ರಯತ್ನ ಮಾಡುವುದು ಕಷ್ಟವೇ ಸರಿ.
ಇನ್ನು ಪ್ಯಾನ್ ಇಂಡಿಯಾ ಸಿನಿಮಾಗಳಿಗೂ 'ಧುರಂಧರ್' ಒಳ್ಳೆ ಪಾಠ ಕಲಿಸಿದೆ. 'ಬಾಹುಬಲಿ', 'KGF' ಸಿನಿಮಾಗಳನ್ನು ನೋಡಿ ಸುಖಾಸುಮ್ಮನೆ ಎರಡು ಭಾಗಗಳಾಗಿ ಕಥೆ ಹೇಳುವುದಲ್ಲ. ಕೆಲವರು ಆ ಸಿನಿಮಾಗಳನ್ನು ಕಾಪಿ ಮಾಡುವ ಸಾಹಸ ಕೂಡ ಮಾಡಿದ್ದರು. ಮೊದಲ ಭಾಗ ಹಿಟ್ ಆಯ್ತು ಎಂದು ಅದನ್ನೇ ಎನ್‌ಕ್ಯಾಶ್ ಮಾಡಿಕೊಂಡು ಎರಡ್ಮೂರು ವರ್ಷ ಪ್ರೇಕ್ಷಕರನ್ನು ಕಾಯಿಸಿ, ಬಜೆಟ್, ಸ್ಟಾರ್‌ಕಾಸ್ಟ್ ಹಿಗ್ಗಿಸಿ, ಹೀರೊ ಎಲಿವೇಷನ್ಸ್ ಹೆಚ್ಚಿಸಿ ಪಾರ್ಟ್-2 ಮಾಡುವುದಲ್ಲ. 4 ತಿಂಗಳ ಅಂತರದಲ್ಲಿ 'ಧುರಂಧರ್' ಸರಣಿ 2 ಚಿತ್ರಗಳು ಬಂದು ಗೆದ್ದಿವೆ. ಇನ್ನು ಮುಂದೆ ಸೀಕ್ವೆಲ್ ಸಿನಿಮಾ ಮಾಡುವವರು ಹೀಗೆ ಮಾಡುವುದು ಒಳಿತು.
ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ರೀತಿಯ ಕನ್ನಡ ಫಿಲ್ಮ್ ಮೇಕರ್ಸ್ ಪರಭಾಷೆಯತ್ತ ಮುಖ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಹಿನ್ನೆಡೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವ ಸಾಮರ್ಥ್ಯ ಇರುವ ಫಿಲ್ಮ್ ಮೇಕರ್ಸ್ ಇಲ್ಲದೇ ಸ್ಯಾಂಡಲ್‌ವುಡ್ ಬಡವಾಗುವುದು ಗ್ಯಾರಂಟಿ. ಇದನ್ನೆಲ್ಲಾ ಗಮನಿಸಿದರೆ ಕನ್ನಡ ಚಿತ್ರರಂಗದ ಸ್ಥಿತಿ ಯಾರಿಗೂ ಬೇಡ.


Click it and Unblock the Notifications











