ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಾಲಿವುಡ್ ಎಂಟ್ರಿ ಖಚಿತ!
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಇದೇ ಶುಕ್ರವಾರ(ಅಕ್ಟೋಬರ್ 11) ತೆರೆಗಪ್ಪಳಿಸಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸದ್ಯ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಅಂದಾಜು 6 ಕೋಟಿ ರೂ. ಬಜೆಟ್‌ನಲ್ಲಿ ಈ ಸಾಂಗ್ ಮೂಡಿ ಬಂದಿದೆ. 'ಮಾರ್ಟಿನ್ ಆಂಥೆಮ್' ನೋಡಿ ಆಕ್ಷನ್ ಪ್ರಿನ್ಸ್ ಫ್ಯಾನ್ಸ್ ಫಿದಾ ಆಗಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧ್ರುವ ಸರ್ಜಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. 'ಮಾರ್ಟಿನ್' ಚಿತ್ರದ ಮತ್ತೊಂದು ಸ್ಯಾಂಪಲ್ ರಿವೀಲ್ ಆಗುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆ ಬಾಲಿವುಡ್ ಕಡೆಯಿಂದ ಏನಾದರೂ ಸರ್‌ಪ್ರೈಸ್ ಬರುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಬಹಳ ಹಿಂದೆಯೇ ಧ್ರುವ ಸರ್ಜಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು.

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ವಾರ್-2' ಸಿನಿಮಾ ನಿರ್ಮಾಣ ಆಗುತ್ತಿದೆ. ಹೃತಿಕ್ ರೋಷನ್ ಎದುರು ತೆಲುಗು ನಟ ಜ್ಯೂ. ಎನ್‌ಟಿಆರ್ ಕೂಡ ಅಬ್ಬರಿಸುತ್ತಿದ್ದಾರೆ. ಇದೆಲ್ಲದರ ನಡುವೆ ಧ್ರುವ ಸರ್ಜಾ ಚಿತ್ರದಲ್ಲಿ ತಾರಕ್ ಸಹೋದರನ ಪಾತ್ರ ಮಾಡುತ್ತಾರೆ ಎಂದು ಗುಲ್ಲಾಗಿತ್ತು. ಆದರೆ ಈ ಬಗ್ಗೆ ಖಚಿತ ಮಾಹಿತಿ ಮಾತ್ರ ಸಿಕ್ಕಿರಲಿಲ್ಲ. ಸದ್ಯ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಅದಕ್ಕೆ ಕಾರಣ ಕೂಡ ಇದೆ.
5 ವರ್ಷಗಳ ಹಿಂದೆ 'ವಾರ್' ಸಿನಿಮಾ ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸಿದ್ದಾರ್ಥ್ ಆನಂದ್ ನಿರ್ದೇಶನ ಚಿತ್ರದಲ್ಲಿ ಹೃತಿಕ್ ಜೊತೆ ಟೈಗರ್ ಶ್ರಾಫ್ ಗನ್ ಹಿಡಿದು ದರ್ಬಾರ್ ನಡೆಸಿದ್ದರು. ಅಂದಾಜು 170 ಕೋಟಿ ರೂ. ಬಜೆಟ್ ಸಿನಿಮಾ 475 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಸದ್ಯ ಅಯಾನ್ ಮುಖರ್ಜಿ ಈ ಆಕ್ಷನ್ ಥ್ರಿಲ್ಲರ್ ಸೀಕ್ವೆಲ್ ಕಟ್ಟಿಕೊಡುತ್ತಿದ್ದಾರೆ.
ಹೃತಿಕ್ ಜೊತೆ ಈಗಾಗಲೇ ತಾರಕ್ ಕೂಡ ನಟಿಸಲು ಆರಂಭಿಸಿದ್ದಾರೆ. ಎರಡು ಶೆಡ್ಯೂಲ್ ಶೂಟಿಂಗ್ ಸಹ ಮುಕ್ತಾಯವಾಗಿದೆ. 'ವಾರ್-2' ಚಿತ್ರದಲ್ಲಿ ನಟಿಸುವ ಬಗ್ಗೆ ಇತ್ತೀಚೆಗೆ ಧ್ರುವ ಸರ್ಜಾಗೆ ಪ್ರಶ್ನೆ ಎದುರಾಗಿತ್ತು. 'ಮಾರ್ಟಿನ್' ಸಿನಿಮಾ ಪ್ರಚಾರಕ್ಕಾಗಿ ನೀಡುತ್ತಿರುವ ಸಂದರ್ಶನಗಳಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಕೇಳಿದ ಪ್ರಶ್ನೆಗೆ ನೇರವಾಗಿ ಯಾವುದೇ ಉತ್ತರ ನೀಡಿಲ್ಲ. ಇಲ್ಲ ಎಂದು ಕೂಡ ಹೇಳಿಲ್ಲ.

'ವಾರ್-2' ಚಿತ್ರದಲ್ಲಿ ನಟಿಸುವ ಬಗ್ಗೆ ಎದುರಾದ ಪ್ರಶ್ನೆಗೆ "ಎಲ್ಲಾ ಖಚಿತವಾದ ಮೇಲೆ ಹೇಳ್ತೀನಿ. ಮುಂದೆ ನೋಡೋಣ ಏನಾಗುತ್ತದೆ" ಎಂದು ಧ್ರುವ ಪ್ರತಿಕ್ರಿಯಿಸಿದ್ದಾರೆ. ಅಲ್ಲಿಗೆ ಆಕ್ಷನ್ ಪ್ರಿನ್ಸ್ ಬಾಲಿವುಡ್ ಎಂಟ್ರಿ ಬಗ್ಗೆ ಮಾತುಕತೆ ನಡೆಯುತ್ತಿರುವುದು ನಿಜ, ಅದರಲ್ಲೂ 'ವಾರ್-2' ಚಿತ್ರದಲ್ಲಿ ನಟಿಸಲು ಬುಲಾಬ್ ಬಂದಿರುವುದು ಖಚಿತ ಎನ್ನುವಂತಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.
ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹಾಗಾಗಿ ಇದೇ ಸಮಯದಲ್ಲೇ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ 'ವಾರ್-2' ಚಿತ್ರದಲ್ಲಿ ಧ್ರುವ ನಟಿಸೋ ಬಗ್ಗೆ ಮಾಹಿತಿ ನೀಡುತ್ತಾ? ಎನ್ನುವ ನಿರೀಕ್ಷೆ ಕೆಲವರಲ್ಲಿದೆ. ಸದ್ಯ ಧ್ರುವ 'ಮಾರ್ಟಿನ್' ಸಿನಿಮಾ ಪ್ರಚಾರದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚಿತ್ರದ ಸುದ್ದಿಗೋಷ್ಠಿ ನಡೆದಿತ್ತು. ಅರ್ಜುನ್ ಸರ್ಜಾ ಕೂಡ ಈ ವೇಳೆ ಸಾಥ್ ನೀಡಿದ್ದರು.
ಡಿಸೆಂಬರ್‌ನಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ತೆರೆಗೆ ಬರಲಿದೆ. ಜೋಗಿ ಪ್ರೇಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಈ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗುತ್ತಿದೆ. ಮತ್ತಷ್ಟು ಕಥೆಗಳನ್ನು ಧ್ರುವ ಕೇಳುತ್ತಿದ್ದು ಶೀಘ್ರದಲ್ಲೇ ಹೊಸ ಸಿನಿಮಾ ಅಪ್‌ಡೇಟ್ ಸಿಗಲಿದೆ.


Click it and Unblock the Notifications











