»   » ಕಮಲ್‌ಹಾಸನ್‌, ವಸುಂಧರಾ ದಾಸ್‌ಗೆ ಏನೂ ಮಾಡಿದರೋ ಅದನ್ನೇ ನಾಗತಿಹಳ್ಳಿ, ದೀಪಾಲಿಗೂ ಧ್ಯಾನ್‌ಗೂ ಮಾಡಿದ್ದಾರೆ....

ಕಮಲ್‌ಹಾಸನ್‌, ವಸುಂಧರಾ ದಾಸ್‌ಗೆ ಏನೂ ಮಾಡಿದರೋ ಅದನ್ನೇ ನಾಗತಿಹಳ್ಳಿ, ದೀಪಾಲಿಗೂ ಧ್ಯಾನ್‌ಗೂ ಮಾಡಿದ್ದಾರೆ....

Posted By:
Subscribe to Filmibeat Kannada

*ಸುಂದರ್‌

ಅವನ ಹೆಸರು ಧ್ಯಾನ್‌.

ಮುದ್ದು ಮುಖದ ಮುಂಬಯಿ ಹುಡುಗ. ಬೆಂಗಳೂರಿನ ಆರಾಮ ಜೀವನ ಮತ್ತು ಮುಂಬಯಿಯ ಗೊಂದಲದ ಗೂಡಿನ ನಡುವಣ ವ್ಯತ್ಯಾಸ ಗುರುತಿಸಬಲ್ಲ ಜಾಣ್ಮೆ ಮೈಗೂಡಿಸಿಕೊಂಡಿರುವ ಶಾಣ್ಯಾ. ನಾಳೆಯ ನಿರೀಕ್ಷೆಯ ಜೊತೆಗೆ ನಿನ್ನೆಯ ಹೊರೆಗಳೂ ಹೆಗಲ ಮೇಲಿವೆ. ಎಲ್ಲವನ್ನೂ ಗೆಲ್ಲಬಲ್ಲೆ ಎಂಬ ಆತ್ಮವಿಶ್ವಾಸದ ಹಿಂದೆಯೇ ಹೀಗೆ ಹೇಳಿದವರೆಲ್ಲ ನೀರ ಮೇಲಣ ಗುಳ್ಳೆಯಂತೆ ಟುಸ್ಸೆಂದಿದ್ದಾರೆ ಅನ್ನುವುದೂ ಗೊತ್ತು.

ಆತನನ್ನು ಆರಿಸಿದ್ದು ನಾಗತಿಹಳ್ಳಿ ಚಂದ್ರಶೇಖರ್‌. ಬೆಂಗಳೂರಿನಲ್ಲೊಂದು ವಾಕ್‌ ಇನ್‌ ಇಂಟರ್‌ವ್ಯೂ ಇಟ್ಟುಕೊಂಡು, ಅಲ್ಲಿಗೆ ಬಂದ ನೂರಾರು ಅಭ್ಯರ್ಥಿಗಳನ್ನು ‘ವರಪರೀಕ್ಷೆಗೆ’ ಗುರಿಪಡಿಸಿ, ಕನ್ನಡದಲ್ಲಿ ಇನ್ನು ನಟರೇ ಸಿಗುವುದಿಲ್ಲ ಎನ್ನುವುದನ್ನು ಖಚಿತ ಮಾಡಿಕೊಂಡು ತಾನು ‘ಧ್ಯಾನ್‌’ನನ್ನು ಆರಿಸಬೇಕಾಯಿತು ಎಂದು ನಾಗತಿಹಳ್ಳಿ ಪತ್ರಿಕಾಗೋಷ್ಠಿಯಾಂದರಲ್ಲಿ ನುರಿತ ಅಧ್ಯಾಪಕರ ಶೈಲಿಯಲ್ಲಿ ಪಾಠ ಮಾಡಿದ್ದರು.

ಆದರೆ, ಧ್ಯಾನ್‌ನನ್ನು ನಾಗತಿಹಳ್ಳಿ ಆರಿಸಿದ್ದು ಬೇರೆಯೇ ಕಾರಣಕ್ಕೆ. ಮುಂಬಯಿಯ ಹುಡುಗನಾದರೆ ಮೈಲೇಜ್‌ ಹೆಚ್ಚಿಗೆ ಸಿಗುತ್ತದೆ ಎನ್ನುವುದು ಅವರ ಒಳ ಉದ್ದೇಶವಾಗಿತ್ತು ಅನ್ನೋದನ್ನೂ ಅವರ ಗೆಳೆಯರೇ ಹೇಳುತ್ತಾರೆ. ಅದು ಇದೀಗ ಫಲಿಸಿದೆ ಕೂಡ. ಧ್ಯಾನ್‌ ಯಾರ ಕೈಗೂ ಸಿಕ್ಕದೆ, ಯಾರ ಮಾತಿಗೂ ಬಲಿಯಾಗದೆ ಬಂದ ದಾರಿಯ ಹಿಡಿದು ಮುಂಬೈ ಸೇರಿದ್ದಾನೆ. ಸಂದರ್ಶನಕ್ಕಾಗಿ ಕಾದು ಕುಳಿತವರಿಗೆ ಸಿಕ್ಕಿದ್ದು ದರ್ಶನ ಭಾಗ್ಯ ಮಾತ್ರ.

ಇದೇ ನಾಗತಿಹಳ್ಳಿಯ ನಾಯಕಿ ‘ದೀಪಾಲಿ’ ವಿಚಾರದಲ್ಲೂ ನಿಜವಾಯಿತು. ಆಕೆಯನ್ನು ಅಮೆರಿಕಾದಲ್ಲೇ ಸಂದರ್ಶಿಸಲು ಯತ್ನಿಸಿದ ಲೋಕನಾಥ್‌ ತಂಡದಲ್ಲಿದ್ದ ಒಬ್ಬರಿಗೆ ಸಿಕ್ಕ ಉತ್ತರ ಇದು : ‘ಸಿನಿಮಾ ಬಿಡುಗಡೆಯಾಗುವ ತನಕ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳಬೇಡ ಅಂತ ನಾಚಂ (ನಾಗತಿಹಳ್ಳಿ ಚಂದ್ರಶೇಖರ್‌) ಹೇಳಿದ್ದಾರೆ’ ಅಂದಳಾಕೆ. ಅದೇ ಕಾರಣಕ್ಕೆ ಒಂದು ಸೀರಿಯಲ್ಲಿನಲ್ಲಿ ನಟಿಸುವ ಅವಕಾಶವನ್ನೂ ಆಕೆ ಕಳೆದುಕೊಳ್ಳಬೇಕಾಯಿತು.

ಅಂದರೆ ಕಮಲ್‌ಹಾಸನ್‌ ವಸುಂಧರಾ ದಾಸ್‌ಗೆ ಏನೂ ಮಾಡಿದರೋ ಅದನ್ನೇ ನಾಚಂ, ದೀಪಾಲಿಗೂ ಧ್ಯಾನ್‌ಗೂ ಮಾಡಿದರು. ನಾಚಂ ಮಾಡಿದ್ದು ತಪ್ಪಲ್ಲದೇ ಇರಬಹುದು. ಆದರೆ ಒಬ್ಬ ನಟ- ನಟಿ ಜನಪ್ರಿಯತೆ, ಪ್ರಚಾರ ಗಿಟ್ಟಿಸುವುದಕ್ಕೆ ಅವಕಾಶವಿರುವುದು ಬಿಡುಗಡೆಗೆ ಮೊದಲೇ. ಒಮ್ಮೆ ಚಿತ್ರ ಬಿಡುಗಡೆಯಾಯಿತೆಂದರೆ ಆತನ - ಆಕೆಯ ಸತ್ವ ಬಯಲಾಗುತ್ತದೆ. ಸತ್ವಶಾಲಿಯಾದರೂ ಚಿತ್ರ ಸೋತರೆ ಸೋತುಹೋಗುತ್ತಾನೆ.

ಅದೇನೇ ಇರಲಿ, ಧ್ಯಾನ್‌ ನನ್ನ ಪ್ರೀತಿಯ ಹುಡುಗಿ ಕ್ಯಾಸೆಟ್‌ ಬಿಡುಗಡೆಗೆ ಬೆಂಗಳೂರಿಗೆ ಬಂದಿದ್ದ. ಬಿಡುಗಡೆಯ ನಂತರ ಮಾತನಾಡಿಸಿದ ಪತ್ರಕರ್ತರ ಜೊತೆ ಮಾತನಾಡಿದ. ಆ ಮಾತಿನ ಸಾರ ಇಂತಿದೆ:

* ಏನು ಮಾಡಬೇಕು ಅಂತ ನಿಮ್ಮಾಸೆ?

ಅವಕಾಶ ಸಿಕ್ಕರೆ ಮತ್ತಷ್ಟು ನಟನೆ. ಇಲ್ಲದಿದ್ದರೆ ಓದು. ಅದೂ ದಕ್ಕದಿದ್ದರೆ ಜೀವನ!

  • ಕಲಾವಿದನಾಗುವ ಬಗ್ಗೆ ಏನನ್ನಿಸುತ್ತೇ?
ವ್ಯಾಪಾರಿಯ ಮಗ ನಾನು. ವ್ಯಾಪಾರವೂ ಒಂದು ಕಲೆ. ಆದರೆ ಕಲೆ ವ್ಯಾಪಾರವಲ್ಲ.
  • ಏನು ನಿಮ್ಮ ಹಿನ್ನೆಲೆ
ಹಾಡುತ್ತೇನೆ ಖುಷಿಗೆ, ಬೇಸರಕ್ಕೆ, ಒಳಗುದಿಗೆ, ಬೇಗುದಿಗೆ!
  • ಗೆಲ್ಲುತ್ತೀರಾ?
ಗೆಲ್ಲುವುದು ಸೋಲುವುದು ನನ್ನ ಕೈಲಿಲ್ಲ. ಪ್ರಯತ್ನ ನನ್ನದು, ಫಲ ಅವನದು.
  • ಯಾರು ನಿಮ್ಮ ಗಾಡ್‌ಫಾದರ್‌?
ಇನ್ನೂ ಅಂಥವರನ್ನು ಕಂಡಿಲ್ಲ.
  • ಏನನ್ನಿಸಿತು ಕ್ಯಾಮರಾ ಎದುರಿಸಿದಾಗ?
ನನಗೆ ಕ್ಯಾಮರಾ ಹೊಸದಲ್ಲ, ನಟನೆಯೂ ಹೊಸದಲ್ಲ. ಕನ್ನಡ ಮಾತ್ರ ಹೊಸದು.
  • ಈ ಮೊದಲು ನಟಿಸಿದ್ದಿರಾ?
ಇಲ್ಲ. ನಟಿಸಿದ್ದೇನೆ. ನನ್ನದೇ ತಾಳಕ್ಕೆ, ನನ್ನದೇ ರಾಗಕ್ಕೆ...
  • ಕನ್ನಡ ಬರುತ್ತಾ?
ಅರ್ಥಕೂಡಾ ಆಗಲ್ಲ... ಬರೋದು ಇನ್ನೂ ದೂರ...!
  • ಇಲ್ಲಿಗೇ ಬರ್ತೀರಾ ..? ಅಲ್ಲೇ ಇರ್ತೀರಾ..?
ಕರೆದರೆ ಬಂದೇನು... ಒಲಿದರೆ ಇಲ್ಲೇ ನಿಂದೇನು, ಮೆಚ್ಚಿದರೆ ಮನೆಮಗನಾದೇನು...
  • ಏನು ನಿಮ್ಮ ನಿಜ ನಾಮಧೇಯ?
ಸಮೀರ.... ಅಂದರೆ ಗಾಳಿ... ಕನ್ನಡದ ಮಟ್ಟಿಗೆ ನಾನು ಹೊಸಗಾಳಿ.
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada