ಕನ್ನಡದವಳಾಗಿ ಕನ್ನಡದಲ್ಲೇ ನನಗೆ ಅವಕಾಶ ಸಿಕ್ತಿಲ್ಲ, ಮನದ ನೋವು ಹಂಚಿಕೊಂಡ ದಿಯಾ ಖುಷಿ
ಕನ್ನಡ ಚಿತ್ರರಂಗದಲ್ಲಿ ಇರುವುದೇ ಬೆರಳಣಿಕೆಯಷ್ಟು ನಾಯಕಿಯರು. ಆ ಪೈಕಿ ಕೆಲವರು ಪರಭಾಷೆಗೆ ವಲಸೆ ಹೋಗಿದ್ದಾರೆ. ಇನ್ನು ಕೆಲವರು ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಆದರೆ .. ''ಹಿತ್ತಲ ಗಿಡ ಮದ್ದಲ್ಲ'' ಅನ್ನೋ ಹಂಗೆ ನಮ್ಮ ನೆಲದ ನಾಯಕಿಯರಿಗೆ ನಮ್ಮವರೇ ಅವಕಾಶ ಕೊಡುವುದಿಲ್ಲ. ಬದಲಿಗೆ ಎಲ್ಲೆಲ್ಲಿಂದಲೋ ನಾಯಕಿಯರನ್ನು ಕರೆದುಕೊಂಡು ಬಂದು ಅವಕಾಶ ಕೊಡುತ್ತಾರೆ. ಅವರಲ್ಲಿ ಪ್ರತಿಭೆ ಇದೆಯಾ ಇಲ್ಲವಾ..?
ಚಿತ್ರಕ್ಕೆ ಆ ಪಾತ್ರಕ್ಕೆ ಅವರು ಸೂಕ್ತವಾಗ್ತಾರಾ ? ಒಟ್ನಲ್ಲಿ ಹೊರಗಡೆ ಹೊಳೆಯುತ್ತಿರುವರಿಗೆ ಇಲ್ಲಿ ಬೆಲೆ ಎನ್ನುವಂತಾಗಿದೆ. ನಿಜಕ್ಕೂ ಕಲೆ ಹೊಂದಿರುವವರಿಗೆ ಬೆಲೆ ಇಲ್ಲದಂತಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಖುಷಿ ರವಿ. ಹೌದು .. ಖುಷಿ ರವಿ ..ಕನ್ನಡದಲ್ಲಿರುವ ಕೆಲವೇ ಕೆಲ ಪ್ರತಿಭಾವಂತ ನಾಯಕಿಯರಲ್ಲಿ ಒಬ್ಬರು.

'ದಿಯಾ' ಚಿತ್ರದ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ, ದಿಯಾ ಖುಷಿ ಎಂದೇ ಖ್ಯಾತರಾದ ಖುಷಿಯ ಖುಷಿ ಸದ್ಯ ಭಂಗವಾಗಿದೆ. ನೆಮ್ಮದಿ ಕೂಡ ಇಲ್ಲದಂತಾಗುತ್ತಿದೆ. ಯಾಕೆಂದರೆ.. ಕನ್ನಡ ಚಿತ್ರರಂಗದವರ ಕಣ್ಣಿಗೆ ಖುಷಿ ಕಾಣ್ತಿಲ್ಲ. ಅವಕಾಶಗಳನ್ನು ನೀಡುತ್ತಿಲ್ಲ.
ಖುದ್ದು ಈ ವಿಚಾರವನ್ನು ಮಾಧ್ಯಮದವರ ಮುಂದೆ ಹೇಳಿಕೊಂಡಿರುವ ಖುಷಿ 'ಅಯ್ಯನ ಮನೆ' ವೆಬ್ ಸರಣಿ ಮಾಡಿದೆ ಅದು ತುಂಬಾ ಚೆನ್ನಾಗಿ ಹೋಯ್ತು, ಬೇರೆ ಬೇರೆ ಭಾಷೆಗಳಿಗೆ ಕೂಡ ಡಬ್ ಆಯ್ತು, ಆದರೂ.. ಅದ್ಯಾಕೋ ಕನ್ನಡದಲ್ಲಿ ಅವಕಾಶ ಎನ್ನುವುದೇ ನನಗೆ ಮರಿಚೀಕೆಯಾಗಿದೆ ಎಂದು ಹೇಳಿದ್ದಾರೆ.
ಯಾಕೆ ಹೀಗಾಗ್ತಿದೆ ಎಂದು ನನಗೂ ಕೂಡ ಗೊತ್ತಿಲ್ಲ, ಆದರೆ ನನಗೆ ಪರಭಾಷೆಗಳಿಂದ ಅವಕಾಶಗಳು ಬರುತ್ತಿವೆ ಆದರೆ ಕನ್ನಡದಲ್ಲಿ ಒಂದೊಳ್ಳೆಯ ಕಥೆಯನ್ನು ನಾನು ತುಂಬಾ ದಿನಗಳಿಂದ ಕೇಳಿಯೇ ಇಲ್ಲ ಎಂದು ಹೇಳಿರುವ ಖುಷಿ ರವಿ ಪರಭಾಷೆಯಿಂದ ಅವಕಾಶ ಬರುತ್ತಿದೆ ಎನ್ನುವುದಕ್ಕೆ ಖುಷಿ ಪಡಬೇಕಾ ನಮ್ಮಲ್ಲಿ ಅವಕಾಶ ಸಿಕ್ತಿಲ್ಲ ಎಂದು ದುಖ ಪಡಬೇಕಾ ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ 'ನ್ಯೂಸ್ ಫಸ್ಟ್' ಕನ್ನಡ ವಾಹಿನಿ ಜೊತೆ ಕೂಡ ಮಾತನಾಡಿರುವ ಖುಷಿ ರವಿ, ಇದು ಕೇವಲ ನನ್ನೊಬ್ಬಳ ಕಥೆ ಮಾತ್ರ ಅಲ್ಲ, ಚಿತ್ರರಂಗದಲ್ಲಿರುವ ನನ್ನ ಅನೇಕ ಸ್ನೇಹಿತೆಯರ ಕಥೆ ಕೂಡ ಹೌದು ಎಂದು ಹೇಳಿದ್ದಾರೆ. ನಮ್ಮಲ್ಲಿ ಬರಹಗಾರರ ಕೊರತೆ ಇದೆ, ಆ ಕೊರತೆಯಿಂದ ಒಳ್ಳೊಳ್ಳೆಯ ಕಥೆಗಳು.. ಪಾತ್ರಗಳು ಸೃಷ್ಟಿಯಾಗುತ್ತಿಲ್ಲ.. ಅದರಿಂದನೇ ಈ ಸಮಸ್ಯೆಯಾಗುತ್ತಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಬೇರೆ ಭಾಷೆಗಳಿಂದ ನನಗೆ ಅವಕಾಶಗಳು ಬರುತ್ತಿವೆ. ಹಾಗಂಥ ನಾನು ಕನ್ನಡವನ್ನು ಕಡೆಗಣಿಸಲಾರೆ ಯಾಕೆಂದರೆ ಕನ್ನಡ ನನ್ನ ಭಾಷೆ, ಕನ್ನಡಕ್ಕೆ ನನ್ನ ಮೊದಲ ಆಧ್ಯತೆ ಎಂದು ಹೇಳಿದ್ದಾರೆ. ಪರಭಾಷೆಯಲ್ಲಿ ಅವರು ಹೇಳಿದಂತೆ ನಾವು ಕೇಳಬೇಕು, ಅವರು ಹೇಳಿದಂತೆ ಅಭಿನಯಿಸಬೇಕು, ನಮ್ಮಲ್ಲಿರುವ ಸ್ವಾತಂತ್ರ್ಯ ನಮಗೆ ಅಲ್ಲಿ ಸಿಗುವುದಿಲ್ಲ ಎಂದು ಕೂಡ ಹೇಳಿದ್ಧಾರೆ.
ಇನ್ನು 'ಅಯ್ಯನ ಮನೆ' ಚಿತ್ರದಿಂದ ನನಗೆ ತೆಲುಗು ಮತ್ತು ತಮಿಳಿನಿಂದ ಸಾಕಷ್ಟು ಅವಕಾಶಗಳು ಬರುತ್ತಿವೆ ಎಂದು ಹೇಳಿರುವ ಖುಷಿ ರವಿ, 'ಅಯ್ಯನ ಮನೆ' ಚಿತ್ರ ಎಲ್ಲಾ ಭಾಷೆಯವರನ್ನು ತಲುಪುತ್ತೆ, ಇಷ್ಟೊಂದು ಒಳ್ಳೆಯ ಹೆಸರು ಬರುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಅವಕಾಶ ನೀಡಿದ ನಿರ್ದೇಶಕ ರಮೇಶ್ ಇಂದಿರಾ ಮತ್ತು ತಂಡಕ್ಕೆ ಧನ್ಯವಾದ ಹೇಳಿದ್ದಾರೆ.
ಅಂದ್ಹಾಗೇ ಖುಷಿ ರವಿ ಸದ್ಯ ''ಸನ್ ಆಫ್ ಮುತ್ತಣ್ಣ'' ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಸಹೋದರ ಪ್ರಣಂ ದೇವರಾಜ್ ಅಭಿನಯದ ಈ ಚಿತ್ರದ ಹಾಡು ನಿನ್ನೆ { ಜುಲೈ 20 } ಬಿಡುಗಡೆ ಆಯ್ತು. ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಖುಷಿ ರವಿ ತಮ್ಮ ಈ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಈ ಆಗಸ್ಟ್ 22ರಂದು ತೆರೆಗೆ ಬರಲಿದೆ.


Click it and Unblock the Notifications











