ಪ್ರೇಮಿಗಳ ದಿನಾಚರಣೆಯ ವಿಶೇಷ; ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ ಸೂಪರ್ ಹಿಟ್ 'ದಿಯಾ'
ಸ್ಯಾಂಡಲ್ ವುಡ್ ನಲ್ಲಿ ಕಳೆದ ವರ್ಷ, 2020ರಲ್ಲಿ ರಿಲೀಸ್ ಆದ ದಿಯಾ ಸಿನಿಮಾ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೊಮ್ಯಾಂಟಿಕ್ ಫೀಲಿಂಗ್ ಸಿನಿಮಾಗೆ ಚಿತ್ರಪ್ರೇಕ್ಷಕರು ಫಿದಾ ಆಗಿದ್ದರು. ಚಿತ್ರಮಂದಿರಗಳ ಸಮಸ್ಯೆಯ ನಡುವೆಯೂ ದಿಯಾ ಗೆಲುವಿನ ನಗೆ ಬೀರಿತ್ತು.
ದಿಯಾ, ಆದಿ ಮತ್ತು ರೋಹಿತ್ ಪಾತ್ರಗಳು ಇನ್ನು ಪ್ರೇಕ್ಷಕರನ್ನು ಕಾಡುತ್ತಿವೆ. ಚಿತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬರ್ ನಾಯಕರಾಗಿ ಕಾಣಿಸಿಕೊಂಡರೇ, ನಾಯಕಿಯಾಗಿ ಖುಷಿ ರವಿ ಮಿಂಚಿದ್ದಾರೆ. ದಿಯಾ ಸಿನಿಮಾ ಅಶೋಕ್ ಸಾರಥ್ಯದಲ್ಲಿ ಮೂಡಿಬಂದಿದೆ.
ರಿಲೀಸ್ ಆಗಿ ಒಂದು ವರ್ಷ ಕಳೆದಿದೆ. ಮತ್ಯಾಕೆ ಪೀಠಿಕೆ ಅಂತಿರಾ? ಯಾಕೆಂದರೆ ಸೂಪರ್ ಹಿಟ್ ದಿಯಾ ಸಿನಿಮಾ ಮತ್ತೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಪ್ರೇಮಿಗಳ ದಿನಾಚರಣೆಯ ವಿಶೇಷವಾಗಿ ಸಿನಿಮಾವನ್ನು ರಿ ರಿಲೀಸ್ ಮಾಡಲು ಸಿನಿಮಾತಂಡ ತಯಾರಿ ನಡೆಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ಪೃಥ್ವಿ ಅಂಬರ್ ನೀವು ಗೆಲ್ಲಿಸಿದ ಸಿನಿಮಾ ದಿಯಾ ಸಿನಿಮಾ ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ಪ್ರೇಕ್ಷಕರ ಮತ್ತು ಚಿತ್ರಮಂದಿರಗಳ ಮಾಲಿಕರ ಬೇಡಿಕೆ ಮೇರೆಗೆ ಸಿನಿಮಾ ಮತ್ತೊಮ್ಮೆ ತೆರೆಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ನೋಡುವುದನ್ನು ಮಿಸ್ ಮಾಡಿಕೊಂಡವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ನೋಡಿ' ಎಂದು ಹೇಳಿದ್ದಾರೆ.
ಇತ್ತೀಚಿಗಷ್ಟೆ ಒಂದು ವರ್ಷ ಪೂರೈಸಿದ ಸಂಭ್ರಮ ಆಚರಿಸಿಕೊಂಡಿದ್ದ ದಿಯಾ ತಂಡ ಈಗ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದ ಸಮಯದಲ್ಲಿ ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ಪ್ರದರ್ಶನ ರದ್ದು ಮಾಡಬೇಕಾಯಿತು. ಬಳಿಕ ದಿಯಾ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆನ್ ಲೈನ್ ನಲ್ಲೂ ಜನ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದರು.
Recommended Video
ದಿಯಾ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಹ ಸಿನಿಮಾ ವೀಕ್ಷಿಸಿ ಸಂತಸ ಪಟ್ಟಿದ್ದಾರೆ. ಸದ್ಯ ದಿಯಾ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಹಿಂದಿ ರಿಮೇಕ್ ನಲ್ಲಿ ಆದಿ ಪಾತ್ರದಲ್ಲಿ ನಟ ಪೃಥ್ವಿ ಅಂಬರ್ ಅವರೇ ನಟಿಸುತ್ತಿದ್ದಾರೆ. ಉಳಿದಂತೆ ಕಲಾವಿದರ ಬಗ್ಗೆ ರಿವೀಲ್ ಮಾಡಿಲ್ಲ ಸಿನಿಮಾತಂಡ.


Click it and Unblock the Notifications











