'ನೀವು ಆರೋಗ್ಯವಾಗಿದ್ದೀರಾ ಎಂದು ಕೇಳಲ್ಲ, ಅನೇಕ ಬಾರಿ ನನಗೂ ನೋವಾಗಿದ್ದು ಇದೆ'-ಪ್ರಿಯಾಂಕ ಉಪೇಂದ್ರ...!
ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ.
ಹಾಗಂಥ ಎಲ್ಲರೂ ಈ ಸಾಲಿಗೆ ಸೇರಿದವರು ಇರಲ್ಲ. ಅನೇಕರು ಸಹಜ ಸೌಂದರ್ಯಕ್ಕೆ ಸರಳ ಸಾಧನೆಗಳ ಮೊರೆ ಹೋಗುತ್ತಾರೆ. ಆದರೂ ಕೂಡ ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್‌ಗಳ ಏರುಪೇರಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸ ಕಾಣಿಸುತ್ತೆ. ಇದನ್ನರಿಯದ ಅನೇಕರು ಸುಖಾ ಸುಮ್ಮನೆ ಸೆಲೆಬ್ರೀಟಿಗಳಿಗೆ ಪ್ರಶ್ನೆಗಳನ್ನು ಮಾಡುತ್ತಾರೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯವನ್ನು ಟೀಕಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರಿಯಾಂಕ ಉಪೇಂದ್ರ ತಮಗಾದ ಅನುಭವವನ್ನು ನಿಮ್ಮ' ಫಿಲ್ಮಿ ಬೀಟ್ ಕನ್ನಡ'ದ ಜೊತೆ ಹಂಚಿಕೊಂಡಿದ್ದಾರೆ.

'ಫಿಲ್ಮಿ ಬೀಟ್ ಕನ್ನಡ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾಂಕ ಉಪೇಂದ್ರ, ನನ್ನ ಇಲ್ಲಿಯವರೆಗಿನ ವೃತ್ತಿ ಬದುಕಿನ ಪ್ರಯಾಣದಲ್ಲಿ ನಾನು ಪಾಸಿಟಿವ್‌ಗಿಂತ ನೆಗೆಟಿವ್ ಕಾಮೆಂಟ್‌ಗಳನ್ನು ಕೇಳಿದ್ದೇನೆ ಎಂದಿರುವ ಪ್ರಿಯಾಂಕ ಕೆಲವರು ದಪ್ಪ ಆಗಿದ್ದಾರೆ ಎನ್ನುತ್ತಾರೆ. ಇನ್ನೂ ಕೆಲವರು ಸಣ್ಣ ಆಗಿದ್ದಾರೆ ಎನ್ನುತ್ತಾರೆ. ಮತ್ತೊಬ್ಬರು ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದರೆ ಇನ್ನೊಬ್ಬರು ಸರ್ಜರಿಯಿಂದ ದೇಹದಾಕಾರ ಬದಲಾಗಿದೆ ಎನ್ನುವ ಮಾತುಗಳನ್ನಾಡುತ್ತಾರೆ ಎಂದಿದ್ದಾರೆ.
ಆದರೆ ವಾಸ್ತವದಲ್ಲಿ ನಮ್ಮ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತಿರುತ್ತವೆ. ಆದರೆ ಇದನ್ನು ಅರಿಯದೇ ಅನೇಕರು ಬಾಯಿಗೆ ಬಂದಂತೆ ಕಾಮೆಂಟ್ ಮಾಡುತ್ತಾರೆ. ಇದರಿಂದ ಅನೇಕ ಬಾರಿ ನೋವಾಗಿದ್ದು ಇದೆ ಎಂದಿರುವ ಪ್ರಿಯಾಂಕ ಉಪೇಂದ್ರ ಒಮ್ಮೊಮ್ಮೆ ನಾವು ಚಿತ್ರದ ಕಾಸ್ಟೂಮ್ ಮತ್ತು ಮೇಕಪ್ ಹಾಕಿಕೊಂಡಾಗ ಒಂದು ರೀತಿ ಕಾಣಿಸಿಕೊಳ್ಳುತ್ತೇವೆ, ಇನ್ನೊಂದು ಸಲ ಮೇಕಪ್ ಇಲ್ಲದೇ ಮತ್ತೊಂದು ರೀತಿ ಕಾಣಿಸಿಕೊಳ್ಳುತ್ತೇವೆ, ಎಲ್ಲರಿಗೆ ದಪ್ಪ-ಸಣ್ಣ ಅನ್ನುವುದೇ ದೊಡ್ಡ ಚರ್ಚೆಯಾಗುತ್ತೆ ಹೊರತು ನೀವು ಆರೋಗ್ಯವಾಗಿದ್ದೀರಾ ಎಂದು ಯಾರು ಕೇಳುವುದಿಲ್ಲ ಎಂದು ತಮ್ಮದ ನೋವನ್ನು ಹೊರ ಹಾಕಿದ್ದಾರೆ. ಒಂದೊಂದು ಸಲ ನಮಗೆ ಹುಷಾರಿರುವುದಿಲ್ಲ. ಇದರಿಂದ ಒಂದೊಂದು ಸಲ ದಪ್ಪ ಆಗುತ್ತೇವೆ. ಕೆಲವೊಮ್ಮೆ ಸಣ್ಣ ಆಗುತ್ತೇವೆ. ಟಿನೇಜ್ ಅವರಲ್ಲ ನಾವು. ನಮ್ಮ ದೇಹದಲ್ಲಿ ಬದಲಾಗುತ್ತದೆ ಎಂದು ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.
ಮುಂದುವರೆದು ಪ್ರತಿಯೊಬ್ಬರಿಗೂ ಕೂಡ ಅವರದೇ ಆದ ದೇಹರಚನೆ ಇರುತ್ತೆ, ತುಂಬಾ ಸಣ್ಣಗಿರುವವರು ಆರೋಗ್ಯವಾಗಿದ್ದಾರೆ ಎಂದು ಹೇಳಲು ಆಗುವುದಿಲ್ಲ. ಈಗ ಸಣ್ಣ ಇರುವುದು ದೊಡ್ಡ ವಿಚಾರವಾಗಿದೆ. ಚಿಕ್ಕ ಮಕ್ಕಳು ಸಹ ಊಟ ಬಿಟ್ಟು ಸಣ್ಣ ಇರಲು ಇಷ್ಟಪಡುತ್ತವೆ. ಆದರೆ ಅವರಿಗೆ ಆರೋಗ್ಯವಾಗಿರು ಅಂತಾ ಯಾರೂ ಹೇಳಲ್ಲ. ದೇಹ ರಚನೆ ಇರುವುದೇ ಹೀಗೆ ಎನ್ನುವ ಪಾಸಿಟಿವ್ ಆಲೋಚನೆ ಎಲ್ಲರಿಗೂ ಬರಬೇಕು ಎಂದು ಹೇಳಿದ್ದಾರೆ. ಇನ್ನೂ ನನ್ನ ಖುಷಿಗೆ ನಾನು ನನಗೆ ಇಷ್ಟದ ಬಟ್ಟೆಯನ್ನು ಹಾಕಿಕೊಳ್ಳುತ್ತೇನೆ, ವೆಸ್ಟರ್ನ್ ಡ್ರೆಸ್ ಹಾಕಿದರೂ ಹೇಳುತ್ತಾರೆ. ಇಂಡಿಯನ್ ಡ್ರೆಸ್ ಹಾಕಿದರೂ ಹೇಳುತ್ತಾರೆ. ಒಟ್ಟಾರೆ ಏನೋ ಒಂದು ಹೇಳುತ್ತಲೇ ಇರುತ್ತಾರೆ. ನೆಗೆಟಿವ್ ಕಾ ಮೆಂಟ್‌ಗಳಿಗೆ ನನಗೆ ಏನೂ ಬೇಜಾರುಗುವುದಿಲ್ಲ. ಇದರ ಜೊತೆಗೆ ಕೆಲವರು ಒಳ್ಳೆಯ ಮೆಸೇಜ್‌ಗಳನ್ನು ಸಹ ಕಳುಹಿಸುತ್ತಾರೆ. ಕೆಟ್ಟ ಮೆಸೇಜ್‌ಗಳು ಬರುತ್ತಲೇ ಇರುತ್ತದೆ ಅಂತವರನ್ನು ಬ್ಲಾಕ್ ಮಾಡುತ್ತೇವೆ ಎಂದು ಕೂಡ ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.

ಅಂದ್ಹಾಗೇ ಪ್ರಿಯಾಂಕ ಉಪೇಂದ್ರ ಅಭಿನಯದ ಉಗ್ರಾವತಾರ ನವೆಂಬರ್ ಎರಡರಂದು ಬಿಡುಗಡೆಯಾಗಿದೆ. ಕ್ಯಾಪ್ಚರ್, 'ಡಿಟೆಕ್ಟಿವ್ ತೀಕ್ಷ್ಣ, ಲೈಫ್ ಇಸ್ ಬ್ಯೂಟಿಫುಲ್ ಸೇರಿ ಅನೇಕ ಚಿತ್ರಗಳು ಪ್ರಿಯಾಂಕ ಉಪೇಂದ್ರ ಅವರ ಕೈಯಲ್ಲಿವೆ.


Click it and Unblock the Notifications











