ಮೇಘನಾಗೆ ಗಂಡು ಮಗು ಆಗುತ್ತೆ ಅಂತ ಸರ್ಜಾ ಕುಟುಂಬಕ್ಕೆ ಮೊದಲೇ ತಿಳಿದಿತ್ತೇ?
ಎಲ್ಲರ ನಿರೀಕ್ಷೆಯಂತೆ ಚಿರಂಜೀವಿ ಸರ್ಜಾ-ಮೇಘನಾ ರಾಜ್ ದಂಪತಿಗೆ ಗಂಡು ಮಗು ಜನಿಸಿದೆ. ಮನೆ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಕುಟುಂಬಕ್ಕೆ ಆ ಮಗು ಹುಟ್ಟಿನಿಂದಲೇ ಸಂತಸ ಹೊತ್ತು ತಂದಿದೆ. ಆದ್ರೆ ಮೇಘನಾಗೆ ಗಂಡು ಮಗು ಆಗುತ್ತೆ ಅಂತ ಸರ್ಜಾ ಕುಟುಂಬಕ್ಕೆ ಮೊದಲೇ ತಿಳಿದಿತ್ತೇ.......? ಇಂತಹದೊಂದು ಪ್ರಶ್ನೆಯೊಂದು ಈಗ ಚರ್ಚೆಯಾಗಿದೆ.
ಐದು ತಿಂಗಳ ಹಿಂದೆ ಚಿರು ಸರ್ಜಾ ಇನ್ನಿಲ್ಲ ಎಂಬ ಸುದ್ದಿ ತಿಳಿದ ಇಡೀ ಅಭಿಮಾನಿ ಬಳಗ ಶೋಕಸಾಗರದಲ್ಲಿ ಮುಳುಗಿತ್ತು. ಚಿರು ಇನ್ನು ನೆನಪು ಮಾತ್ರ ಎಂದು ಅಳುತ್ತಿದ್ದ ಸಮಯದಲ್ಲಿ ಮೇಘನಾ ರಾಜ್ ಹೊಟ್ಟೆಯಲ್ಲಿ ಚಿರು ಸರ್ಜಾ ಮತ್ತೆ ಹುಟ್ಟಿ ಬರುತ್ತಿದ್ದಾರೆ ಎಂಬ ವಿಚಾರವೂ ಹೊರಬಿತ್ತು. ಮೇಘನಾ ಗರ್ಭಿಣಿ ಎನ್ನುವ ವಿಚಾರ ಅಲ್ಲಿಯವರೆಗೂ ಸರ್ಜಾ ಕುಟುಂಬಕ್ಕೆ ಬಿಟ್ಟು ಹೊರಗಡೆ ಯಾರಿಗೂ ಗೊತ್ತಿರಲಿಲ್ಲ.
ಆ ಕ್ಷಣದಿಂದ ಹೆರಿಗೆ ಆಗುವವರೆಗೂ ಜೂನಿಯರ್ ಚಿರಂಜೀವಿ ಬರ್ತಾನೆ ಎಂದು ಕುಟುಂಬ, ಅಭಿಮಾನಿ ಬಳಗ ಕಾದು ಕುಂತಿತ್ತು. ನಿರೀಕ್ಷೆಯಂತೆ ಮೇಘನಾ ರಾಜ್‌ಗೆ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿರು ಸರ್ಜಾ ದಂಪತಿಗೆ ಗಂಡು ಮಗು ಆಗುತ್ತೆ ಎಂಬ ವಿಚಾರದ ಬಗ್ಗೆ ಬಲವಾಗಿ ನಂಬಿಕೆ ಹುಟ್ಟಿಸಿದ ಮೂರು ಪ್ರಮುಖ ಘಟನೆಗಳು ನೆನಪಿರಬಹುದು. ಮುಂದೆ ಓದಿ....

ಚಿರು ಸಾವಿನ ದಿನವೇ ತಾರಾ ಹೇಳಿದ್ದರು!
ಮೇಘನಾ ರಾಜ್ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಮೇಘನಾ ಹೊಟ್ಟೆಯಲ್ಲಿ ಚಿರು ಸರ್ಜಾ ಮತ್ತೆ ಹುಟ್ಟಿ ಬರಲಿ ಎಂದು ಕೋಟ್ಯಾಂತರ ಅಭಿಮಾನಿಗಳಲ್ಲಿ ಆಸೆ ವ್ಯಕ್ತಪಡಿಸಿದ್ದರು. ಚಿರಂಜೀವಿ ಸರ್ಜಾ ವಿಧಿವಶರಾಗಿದ್ದ ದಿನವೇ ಹಿರಿಯ ನಟಿ ತಾರಾ ಇಂತಹದೊಂದು ನಂಬಿಕೆಯನ್ನು ಹೊರಹಾಕಿದ್ದರು. 'ಮೇಘನಾ ರಾಜ್ ಹೊಟ್ಟೆಯಲ್ಲಿ ಪುಟ್ಟ ಚಿರಂಜೀವಿ ಮತ್ತೆ ಬರ್ತಿದ್ದಾನೆ' ಎಂದು ಭಾವುಕರಾಗಿದ್ದರು.

ಧ್ರುವ ಸಹ 'ಜ್ಯೂನಿಯರ್ ಬರ್ತಿದ್ದಾನೆ' ಎಂದಿದ್ದರು
ಅಕ್ಟೋಬರ್ 17 ರಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದ ಧ್ರುವ ಸರ್ಜಾ, ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವೇಳೆ ''ಜೂನಿಯರ್ ಚಿರು ಶೀಘ್ರದಲ್ಲಿ ಬರ್ತಿದ್ದಾನೆ.....'' ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ನೋಡಿದ ಬಳಿಕ ಮೇಘನಾ ಅವರಿಗೆ ಗಂಡು ಮಗು ಆಗಲಿ ಎಂದು ಆಸೆ ಇಟ್ಟುಕೊಂಡಿದ್ದವರ ನಂಬಿಕೆ ಹೆಚ್ಚಾಯಿತು.

ಸೀಮಂತದಲ್ಲೂ ಜೂನಿಯರ್ ಸ್ವಾಗತಿಸಿದ ಅರ್ಜುನ್ ಸರ್ಜಾ
ಈ ಹಿಂದೆ ಮೇಘನಾ ರಾಜ್ ಅವರಿಗೆ ಸೀಮಂತ ಮಾಡಿದ ಸಂದರ್ಭದಲ್ಲಿ ವಿಶೇಷವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕೇಕ್ ಕತ್ತರಿಸಿ ಚಿರು ಸರ್ಜಾ ಮಗುವಿಗೆ ಸ್ವಾಗತ ಕೋರಲಾಗಿತ್ತು. ಈ ಸಂದರ್ಭದಲ್ಲಿ ನಟ ಅರ್ಜುನ್ ಸರ್ಜಾ ಅವರು ''ಹ್ಯಾಪಿ ವೆಲ್ ಕಮ್ ಚಿರು, ಹ್ಯಾಪಿ ವೆಲ್ ಕಮ್ ಜೂನಿಯರ್ ಚಿರು....'' ಎಂದು ಹೇಳಿದ್ದನ್ನು ಸ್ಮರಿಸಬಹುದು.
Recommended Video

ಜೂನಿಯರ್ ಚಿರು ಆಗಮನ ಮೊದಲೇ ತಿಳಿದಿತ್ತೆ?
ಚಿರು ಸರ್ಜಾ ಅವರನ್ನು ಕಳೆದುಕೊಂಡ ಕುಟುಂಬ ಆಗಲಿ ಅಥವಾ ಅವರ ಅಭಿಮಾನಿಗಳಾಗಲಿ ಮೇಘನಾ ರಾಜ್ ಹೊಟ್ಟೆಯಲ್ಲಿ ಮತ್ತೆ ಚಿರು ಸರ್ಜಾ ಹುಟ್ಟಿ ಬರಲಿ, ಅಥವಾ ಬರ್ತಾನೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ಆದ್ರೆ, ಗಂಡು ಮಗು ಎಂದು ಖಚಿತವಾಗಿ ಮೊದಲೇ ತಿಳಿದಿದ್ದರೇ ಎಂಬ ವಿಷಯವೂ ಚರ್ಚೆಯಲ್ಲಿದೆ.


Click it and Unblock the Notifications











