ಶೋಭಿತಾಗೆ ಮದುವೆ ಇಷ್ಟ ಇರ್ಲಿಲ್ವಾ, ಆಪ್ತಸ್ನೇಹಿತೆಗೆ ಎರಡು ಮನೆ ಅಡ್ರೆಸ್ ಕೊಟ್ಟಿದ್ದೇಕೆ ?
ಮದುವೆಗೆ ಭಾರತದಲ್ಲಿ ಎಲ್ಲಲ್ಲದ ಪ್ರಾಮುಖ್ಯತೆ ಇದೆ. ಮದುವೆ ಎಂದರೆ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತೆ. ಇನ್ನೂ ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಸೆಲೆಬ್ರಿಟಿಗಳು ಕೂಡ ಇದರಿಂದ ಹೊರತಾಗಿಲ್ಲ. ಹೋದಲ್ಲಿ ಬಂದಲ್ಲಿ ಮದ್ವೆಯ ಕುರಿತ ಪ್ರಶ್ನೆಯನ್ನೇ ಕೇಳುತ್ತಾರೆ.
ಇನ್ನು ಹೆಣ್ಣು ಹೆತ್ತವರಿಗೆ ತಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ವರನ ಜೊತೆ ಮದುವೆ ಮಾಡಿ ಕೊಡುವ ಕನಸು ಇರುತ್ತೆ. ಅದರಂತೆಯೇ ಮಗಳಿಗೆ ತಕ್ಕ ಹುಡುಗನನ್ನು ಹುಡುಕುತ್ತಾರೆ. ಆದರೆ, ಕೆಲವೊಮ್ಮೆ ಮದ್ವೆಗೆ ಒತ್ತಡವನ್ನು ಹಾಕುತ್ತಾರೆ. ಹುಡುಗಿಗೆ ಮನಸಿಲ್ಲದಿದ್ದರೂ ಕೂಡ ಮದುವೆ ಮಾಡುತ್ತಾರೆ. ಆತ್ಮಹತ್ಯೆಗೆ ಶರಣಾದ ಶೋಭಿತಾ ಅವರಿಗೆ ಕೂಡ ಮದುವೆ ಮಾಡಿಕೊಳ್ಳುವ ಮನಸು ಇರಲಿಲ್ಲವಾ ? ಗೊತ್ತಿಲ್ಲ. ಆದರೆ ಈ ಚರ್ಚೆಯನ್ನು ಸದ್ಯ ಅವರ ಸ್ನೇಹಿತೆ ವೀಣಾ ರಾವ್ ಹುಟ್ಟು ಹಾಕಿದ್ದಾರೆ.

ಹೌದು, ಶೋಭಿತಾ ಆತ್ಮಹತ್ಯೆಯ ನಂತರ ಅನೇಕರು ಶೋಭಿತಾ ಅವರ ದಾಂಪತ್ಯ ಜೀವನದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ದಾಂಪತ್ಯದಲ್ಲಿ ಸಮಸ್ಯೆ ಇದ್ದಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಕೂಡ ಈ ದಿಸೆಯಲ್ಲಿ ತನಿಖೆಯನ್ನು ಮಾಡಿದ್ಧಾರೆ. ದಾಂಪತ್ಯದಲ್ಲಿ ಯಾವ ಸಮಸ್ಯೆ ಇರಲಿಲ್ಲ, ಖಿನ್ನತೆಯಿಂದ ಆತ್ಮಹತ್ಯೆಗೆ ಶೋಭಿತಾ ಶರಣಾಗಿರಬಹುದು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ. ಇದರ ನಡುವೆ ಶೋಭಿತಾ ಅವರ ಜೊತೆ ಹದಿನೈದು ವರ್ಷಗಳಿಂದ ಒಡನಾಟವನ್ನು ಹೊಂದಿದ್ದ ಅವರ ಸ್ನೇಹಿತೆ ವೀಣಾ ರಾವ್ ಮಾತನಾಡಿದ್ದಾರೆ. ಶೋಭಿತಾಗೆ ಮದ್ವೆಗಿಂತ ತಮ್ಮ ವೃತ್ತಿಯ ಕಡೆ ಹೆಚ್ಚು ಒಲವು ಇತ್ತು ಎಂದಿದ್ದಾರೆ.
ಈ ಕುರಿತು 'ನ್ಯೂಸ್ ಫಸ್ಟ್' ಕನ್ನಡ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವೀಣಾ ರಾವ್, ಶೋಭಿತಾ ಕೊನೆಯ ಪ್ರಾಜೆಕ್ಟ್‌ನಲ್ಲಿ ನಾನು ಆಕೆ ಜೊತೆ ಕೆಲಸ ಮಾಡಿದ್ದೇ ಆ ಸಮಯದಲ್ಲಿಯೇ ಈ ಮದುವೆಯ ಕುರಿತು ಮಾತುಕತೆ ಶುರುವಾಗಿತ್ತು ಎಂದಿರುವ ವೀಣಾ ರಾವ್ ಸಾಮಾನ್ಯವಾಗಿ ಹೆಣ್ಣುಮಕ್ಕಳು ಕೆಲಸ ಮತ್ತು ವೃತ್ತಿಯ ಕಾರಣದಿಂದ ಮದ್ವೆ ಮಾಡಿಕೊಳ್ಳಲು ಯೋಚನೆ ಮಾಡುತ್ತಾರೆ, ಮದುವೆ ಮಾಡಿಕೊಂಡರೆ ಅವಕಾಶಗಳ ಕೊರತೆ ಎದುರಾಗಬಹುದು ಎನ್ನುವ ಆಲೋಚನೆ ಮಾಡುತ್ತಾರೆ. ಈ ತರಹದ ಪ್ರಶ್ನೆ ಶೋಭಿತಾಗೆ ಕೂಡ ಕಾಡುತ್ತಿತ್ತು. ಆದರೆ ಶೋಭಿತಾ ಮನೆಯಲ್ಲಿ ಎಲ್ಲರು ಇದು ಮದ್ವೆಗೆ ಸರಿಯಾದ ವಯಸ್ಸು ಮದುವೆಯಾಗು ಎಂದು ಹೇಳಿ ಮದುವೆ ಮಾಡಿಸಿದರು ಎಂದಿದ್ದಾರೆ. ಮದುವೆಯಾದ ಹುಡುಗ ಅವರ ಭಾವನ ಸಂಬಂಧಿಕರೇ ಹೀಗಾಗಿ ಮದುವೆ ಮಾಡಿದರು ಎಂದಿದ್ದಾರೆ.
ಇನ್ನು ಶೋಭಿತಾ ಅವರ ಗಂಡ ಅರ್ಧ ವರ್ಷ ಯುಎಸ್ ಇನ್ನು ಅರ್ಧ ವರ್ಷ ಭಾರತದಲ್ಲಿ ಇರಬೇಕಿತ್ತು ಈ ಕಾರಣಕ್ಕೆ ನಾವೆಲ್ಲ ಸ್ನೇಹಿತೆಯರು ಶೋಭಿತಾಗೆ ನೀನು ಯುಎಸ್ ಹೋಗು ನಾವೆಲ್ಲ ಅಲ್ಲಿ ಬಂದು ನಿನ್ನನ್ನು ಭೇಟಿ ಮಾಡುತ್ತೇವೆ ಎಂದು ರೇಗಿಸುತ್ತಿದ್ದೇವು ಎಂದಿರುವ ವೀಣಾ ರಾವ್, ಇಲ್ಲಾ ಅಕ್ಕಾ ನನಗೆ ಬೆಂಗಳೂರು ತೊರೆದು ಹೋಗಲು ಇಷ್ಟ ಇಲ್ಲ ಎಂದು ಶೋಭಿತಾ ನನಗೆ ಹೇಳಿದ್ದಳು ಎಂದು ನೆನಪು ಮಾಡಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿರುವ ವೀಣಾ ರಾವ್ ಲಾಕ್ ಡೌನ್ ಸಮಯದಲ್ಲಿ ಬಹುಶಃ ಅವರು ಖಾಯಂ ಆಗಿ ಭಾರತಕ್ಕೆ ಮರಳಿದರು ಆದರೆ ಅವರ ಪತಿ ಹೈದ್ರಾಬಾದ್‌ನಲ್ಲಿ ಕೆಲಸಕ್ಕೆ ಇದ್ದುದ್ದರಿಂದ ಅಲ್ಲಿ ಶಿಫ್ಟ್ ಆದರು ಎಂದು ಹೇಳಿದ್ದಾರೆ. ಹೈದ್ರಾಬಾದ್‌ನಲ್ಲಿ ಶೋಭಿತಾಗೆ ಎರಡು ಮನೆ ಇತ್ತು ಅನ್ಸುತ್ತೆ ಯಾಕೆಂದರೆ ನನಗೆ ಅಲ್ಲಿನ ಎರಡು ಏರಿಯಾದ ಅಡ್ರೆಸ್ ಕೊಟ್ಟಿದ್ದಳು ಬಂದು ಭೇಟಿಯಾಗುವಂತೆ ಹೇಳಿದ್ದಳು ಎಂದಿದ್ದಾರೆ. ಆದರೆ ಹೋಗಲು ನನ್ನಿಂದ ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಇನ್ನು, ಎರಡು ವಾರದ ಹಿಂದೆಯಷ್ಟೇ ನಾನು ಶೋಭಿತಾಗೆ ಮೆಸೇಜ್ ಮಾಡಿದ್ದೇ ಆಗಲೂ ಕೂಡ ಆಕ್ಟಿಂಗ್ ಕುರಿತು ಮಾತುಗಳನ್ನಾಡಿದ್ದಳು ಎಂದಿರುವ ವೀಣಾ ರಾವ್ ಹೇಗೂ ಹೈದ್ರಾಬಾದ್‌ನಲ್ಲಿಯೇ ಇದ್ದೀಯಾ ತೆಲುಗು ಧಾರಾವಾಹಿಯಲ್ಲಿ ಟ್ರೈ ಮಾಡಿ ನೋಡು ಎಂದು ನಾನು ಹೇಳಿದ್ದೇ ಎಂದಿದ್ದಾರೆ. ಇಲ್ಲಿ ಅವಕಾಶ ಹುಡುಕಬೇಕು ಆದರೆ ನನಗೆ ಇಲ್ಲಿ ಯಾರು ಪರಿಚಯ ಇಲ್ಲ ಎಂದು ಶೋಭಿತಾ ಹೇಳಿದ್ದಳು ಮರು ದಿನ ಕರೆ ಮಾಡುವಂತೆ ಕೂಡ ಹೇಳಿದ್ದಳು ಎಂದಿದ್ದಾರೆ.


Click it and Unblock the Notifications











