'ಕಾಟೇರ' ಸಿನಿಮಾ ಯಾವಾಗ ನೋಡ್ತೀರಾ ಸರ್? ಅಭಿಮಾನಿ ಪ್ರಶ್ನೆಗೆ ಗೊಂದಲ ಮೂಡಿಸಿದ ಕಿಚ್ಚನ ಉತ್ತರ
ಸ್ಯಾಂಡಲ್‌ವುಡ್‌ನಲ್ಲೀಗ 'ಕಾಟೇರ'ನ ಕಿಚ್ಚು ಜೋರಾಗಿದೆ. ದರ್ಶನ್ ಅಭಿಮಾನಿಗಳು ಮಾತ್ರವಲ್ಲ ಎಲ್ಲರೂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. 18ನೇ ದಿನವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪರಭಾಷೆಯ ದೊಡ್ಡ ಸಿನಿಮಾಗಳ ಹಾವಳಿಗೂ ಜಗ್ಗದೇ 'ಕಾಟೇರ'ನ ಕಾರುಬಾರು ಮುಂದುವರೆದಿದೆ.
2 ವಾರಕ್ಕೆ ಸಿನಿಮಾ 158 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡದ ಆಪ್ತರೇ ಮಾಹಿತಿ ನೀಡಿದ್ದಾರೆ. ಇನ್ನು ಕರ್ನಾಟಕ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡ 'ಕಾಟೇರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶೀಘ್ರದಲ್ಲೇ ತೆಲುಗು, ತಮಿಳಿಗೂ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇದೆಲ್ಲದರ ನಡುವೆ ಇತ್ತೀಚೆಗೆ ನಟ ಸುದೀಪ್ ಕೂಡ ಸಿನಿಮಾ ವೀಕ್ಷಿಸುತ್ತಾರೆ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿದ್ದರು. ಇದೀಗ ಸ್ವತಃ ಸುದೀಪ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಅಭಿನಯ ಚಕ್ರವರ್ತಿ ಸುದೀಪ್ ಸದ್ಯ 'ಮ್ಯಾಕ್ಸ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮೋಷನ್ ಭಾಗವಾಗಿ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಜೊತೆ ಸುದೀಪ್ ಸಂಭಾಷಣೆ ನಡೆಸಿದ್ದಾರೆ. AskKichcha ಹ್ಯಾಷ್‌ಟ್ಯಾಗ್‌ನಲ್ಲಿ ನೆಟ್ಟಿಗರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಇದೇ ಸಂಭಾಷಣೆ ವೇಳೆ ಅಭಿಮಾನಿಯೊಬ್ಬರು 'ಕಾಟೇರ' ಸಿನಿಮಾ ಯಾವಾಗ ನೋಡ್ತೀರಾ ಸರ್? ಎಂದು ಕೇಳಿದ್ದಾರೆ. ಇದಕ್ಕೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
ಒಂದ್ಕಾಲದಲ್ಲಿ ಸುದೀಪ್ ಹಾಗೂ ದರ್ಶನ್ ಆತ್ಮೀಯ ಸ್ನೇಹಿತರಾಗಿದ್ದರು. ಸಣ್ಣ ವೈಮನಸ್ಸಿನಿಂದ ಇಬ್ಬರೂ ದೂರಾಗಿದ್ದು ಗೊತ್ತೇಯಿದೆ. ಈ ಬಗ್ಗೆ ಸ್ವತಃ ದರ್ಶನ್ ಟ್ವೀಟ್ ಮಾಡಿ ಹೇಳಿದ್ದರು. ಬಳಿಕ ಇಬ್ಬರು ಒಟ್ಟಿಗೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಆದರೆ ಸುದೀಪ್ ಮಾತ್ರ ಇನ್ನು ಸ್ನೇಹಿತನ ಕಡೆ ಕೈ ಚಾಚಿದ್ದಾರೆ. ಸಾಕಷ್ಟು ಸಂದರ್ಭಗಳಲ್ಲಿ ದರ್ಶನ್ ಕುರಿತಾದ ವಿಚಾರಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇನ್ನು ಇತ್ತೀಚೆಗೆ ಸಂಸದೆ, ನಟಿ ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರೂ ಭಾಗವಹಿಸಿದ್ದರು.

ಇನ್ನು ಹೊಸಪೇಟೆ ಘಟನೆ ಬಗ್ಗೆ ದರ್ಶನ್ ಬೆಂಬಲಕ್ಕೆ ಸುದೀಪ್ ನಿಂತಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ದರ್ಶನ್ ಕೂಡ ಧನ್ಯವಾದ ತಿಳಿಸಿದ್ದರು. ಸದ್ಯ 'ಕಾಟೇರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣದಲ್ಲಿ ಸುದೀಪ್ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಹೇಳಿದ್ದಾರೆ ಎಂದು ನಿರ್ದೇಶಕ ತರುಣ್ ಸುಧೀರ್ ಇತ್ತೀಚೆಗೆ ಹೇಳಿದ್ದರು.
ಇದೀಗ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಆದರೆ ಸುದೀಪ್ ಉತ್ತರ ಮಾತ್ರ ಕೊಂಚ ಗೊಂದಲ ಸೃಷ್ಟಿಸಿದೆ. ಇಂಗ್ಲೀಷ್‌ನಲ್ಲಿ ಸುದೀಪ್ ಕೊಟ್ಟ ಉತ್ತರಕ್ಕೆ ಅರ್ಥ ತಿಳಿದುಕೊಳ್ಳಲು ಕೆಲವರು ಸುಸ್ತಾಗಿದ್ದಾರೆ. ಸಖತ್ ಟ್ರಿಕ್ಕಿಯಾಗಿ ಸುದೀಪ್ ಉತ್ತರಿಸಿದ್ದು ಸಿನಿಮಾ ನೋಡಿದ್ದಾರಾ? ಇಲ್ವಾ? ಎನ್ನುವ ಗೊಂದಲ ಸೃಷ್ಟಿಸಿದೆ. ಬೇಕಂತಲೇ ಸುದೀಪ್ ಈ ರೀತಿ ಉತ್ತರಿಸಿದ್ರಾ? ಎಂದು ಕೆಲವರು ತಲೆಕೆಡಿಸಿಕೊಂಡಿದ್ಧಾರೆ.
'ಮ್ಯಾಕ್ಸ್' ಸಿನಿಮಾ ವಿಚಾರಕ್ಕೆ ಬಂದರೆ ಚೆನ್ನೈನಲ್ಲಿ ಭರದಿಂದ ಚಿತ್ರೀಕರಣ ನಡೀತಿದೆ. ಮಹಾಬಲಿಪುರಂನಲ್ಲಿ ಸೆಟ್ ನಿರ್ಮಿಸಿ ಶೂಟಿಂಗ್ ಮಾಡಲಾಗುತ್ತಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಕನ್ನಡ ಕಲಾವಿದರು, ತಂತ್ರಜ್ಞರ ಜೊತೆಗೆ ತಮಿಳು ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.
ಕಲೈಪುಲಿ ಎಸ್. ತನು ಜೊತೆ ಸುದೀಪ್ 'ಮ್ಯಾಕ್ಸ್' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.


Click it and Unblock the Notifications











