'ಚೀಪ್' ಅಲ್ಲ 'ಟ್ರೋಲ್' ; ಕೊನೆ ಕ್ಷಣದಲ್ಲಿ 'UI'ನಲ್ಲಿ ಬದಲಾವಣೆ, ಕಾಡುತ್ತಿದೆ ಹೀಗೊಂದು ಅನುಮಾನ..!
'ಟ್ರೋಲ್' ಹಾಡು ಮೂಲಕ ನಮ್ಮ ನಡುವೆ ಇರುವ ಅನೇಕರ ಬದುಕಿನ ಪಾಡುಗಳಿಗೆ ಉಪೇಂದ್ರ ತಮ್ಮದೇ ಶೈಲಿಯ ಬಣ್ಣಗಳನ್ನ ಚೆಲ್ಲಿದಾರೆ ಎಂಬ ಭಾವನೆ , ಹಾಡನ್ನ ಕೇಳಿದಾಗ ಬರುವುದು ಸಹಜ. ಆದರೆ.. ಇದೇ ಸಮಯದಲ್ಲಿ ಹಾಡಿನ ಸಂಪೂರ್ಣ ಸಾಹಿತ್ಯವನ್ನ,ಕನ್ನಡ ಚಿತ್ರರಂಗದ ಬುದ್ದಿವಂತ ಕೊನೆ ಕ್ಷಣದಲ್ಲಿ ಬದಲಿಸಿದರಾ ಎಂಬ ಅನುಮಾನ ಸದ್ಯಕ್ಕೆ ಅನೇಕರಿಗೆ ಕಾಡ್ತಿದೆ.
ಹೌದು, ನಿಮಗೆ ನೆನಪಿದ್ದರೆ.. ಫೆಬ್ರವರಿ 14ಕ್ಕೆ ತಮ್ಮ 'ಯುಐ' ಚಿತ್ರದ ಮೊದಲ ಹಾಡಿನ ಚಿಕ್ಕ ತುಣುಕನ್ನ ಉಪೇಂದ್ರ ಬಿಟ್ಟಿದ್ದರು. 26ಕ್ಕೆ ಸಂಪೂರ್ಣ ಹಾಡನ್ನ ಕನ್ನಡಿಗರ ಮಡಿಲಿಗೆ ಹಾಕುವ ಭರವಸೆಯನ್ನೂ ನೀಡಿದ್ದರು. 'ನಂದು ತುಂಬ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬ ಚಿಕ್ಕದು. ಇವನಿಗಿಂತ ಅವನ್ದು ದೊಡ್ಡದು. ಎಲ್ಲ ಚೀಪ್ ಚೀಪ್' ಎಂದಿದ್ದರು.

ಉಪ್ಪಿಯ ಈ ಸಾಲು ಸಹಜವಾಗಿ ಕುತೂಹಲ ಕೆರಳಿಸಿತ್ತು. 'ದೊಡ್ಡ' ಹಾಗೂ 'ಚಿಕ್ಕ' ಮ್ಯಾಟರ್ ಅನೇಕರ ತಲೆಯನ್ನೂ ಕೆಡಿಸಿತ್ತು. ಈ ಕಾರಣಕ್ಕೆ ಫೆಬ್ರವರಿ 26 ರ ಶುಭ ಮುಂಜಾನೆಗಾಗಿ, ಜಾತಕ ಪಕ್ಷಿಯಂತೆ ಕಾದು ಕುಂತಿದ್ದವರು ಒಬ್ಬಿಬ್ಬರಲ್ಲ. ಆದರೆ ದುರಾದೃಷ್ಟ 26ಕ್ಕೆ ಮಾತ್ರ ಆ 'ಭರವಸೆಯ ಬೆಳಕು' ಕಾಣಲಿಲ್ಲ. ಹೀಗಾಗಿ ಅನೇಕರು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಹಾಡನ್ನ ಬಿಡುಗಡೆ ಮಾಡದೇ ಇರುವ ಹಿಂದಿನ ಕಾರಣವನ್ನ ದಯವಿಟ್ಟು ವಿವರಿಸಿ ಎಂದು ಮನವಿ ಪತ್ರವನ್ನೂ ಸಲ್ಲಿಸಿದ್ದರು.
ಆ ಮನವಿಗೆ ಒಂದು ವಾರದ ಬಳಿಕ ಮನ್ನಣೆ ಸಿಕ್ಕಿದೆ. ಯು ಐ ಹಾಡು ಬಿಡುಗಡೆಯಾಗಿದೆ. ಆದರೆ ಇಲ್ಲಿ 'ಚೀಪ್' ಸಾಹಿತ್ಯ ಇಲ್ಲ. ಇರುವುದು 'ಟ್ರೊಲ್' ಸಾಲುಗಳು. ಇನ್ನೂ ಉಪೇಂದ್ರ ಬುದ್ದಿವಂತ ನಿರ್ದೇಶಕ ಮಾತ್ರ ಅಲ್ಲ. ಕಾಲಕ್ಕೆ ತಕ್ಕಂತೆ ಅಪಡೇಟೆಡ್ ಆಗಿರುವ ನಿರ್ದೇಶಕ ಕೂಡ ಹೌದು.

ಹೀಗಾಗಿ ಸಮಾಜದ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವ ಉಪೇಂದ್ರ, ಸದ್ಯಕ್ಕೆ ಎಲ್ಲರ ಬಾಯಲ್ಲಿ ನಲಿದಾಡುತ್ತಿರುವ ಪದಪುಂಜಗಳನ್ನು ಬಳಸಿ, 'ಟ್ರೆಂಡ್ ' ನ್ನೇ ತಮ್ಮ ಚಿತ್ರಕ್ಕೆ 'ಟ್ರಂಪ್ ಕಾರ್ಡ್' ನನ್ನಾಗಿ ಬಳಿಸಿಕೊಂಡರಾ ಗೊತ್ತ್ ಇಲ್ಲ. ಆದರೆ ಈ ಅನುಮಾನ ಸದ್ಯಕ್ಕೆ ಉಪೇಂದ್ರ ಅಭಿಮಾನಿಗಳಿಗಷ್ಟೇ ಅಲ್ಲ ಕನ್ನಡದ ಕಲಾರಸಿಕರಿಗೆ ಕಾಡ್ತಿದೆ.
ಹಾಗಂಥ ಚೀಪ್ ಹಾಡನ್ನ ಉಪೇಂದ್ರ ತಮ್ಮ ಚಿತ್ರದಿಂದನೇ ಕೈ ಬಿಟ್ಟಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯ ಇಲ್ಲ. ಯಾಕೆಂದರೆ ಸದ್ಯದ 'ಟ್ರೆಂಡ್' ನ ತಮ್ಮ ಯುಐ ಚಿತ್ರದ 'ಬ್ರ್ಯಾಂಡ್' ಅಂಬಾಸಿಡರ್ ನಾಗಿ ಮಾಡಿ, ಅಖಂಡ 'ಭಾರತ'ದೆಲ್ಲೆಡೆ 'ಟಾಕ್ ಆಫ್ ದಿ ಟೌನ್' ಆಗಿರುವ ಉಪೇಂದ್ರ 'ಚೀಪ್' ಸಾಂಗ್ ನ ಮುಂದಿನ ದಿನಗಳಲ್ಲಿ ಬಿಡಬಹುದು. ಈ ಹಾಡು ಆ ಹಾಡು ಎರಡು ಬೇರೆ ಬೇರೆ ಇರಬಹುದು. ಈ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯ ಕೂಡ ಸದ್ಯಕ್ಕೆ ವ್ಯಕ್ತವಾಗ್ತಿದೆ.
ಒಟ್ಟಿನಲ್ಲಿ ಉಪೇಂದ್ರ ಏನೇ ಮಾಡಿದರೂ ಅಲ್ಲಿ 'ವಿಶೇಷತೆ-ವಿಭಿನ್ನತೆ' ಇದ್ದೇ ಇರುತ್ತೆ. 'ಯುಐ' ಚಿತ್ರದ ಈ ಹಾಡಿನ ಮೂಲಕ ಇದು ಇನ್ನೊಮ್ಮೆ ಸಾಬೀತಾಗಿದೆ. ಭಾಷೆಯ ಭೇದ-ಭಾವ ಇಲ್ಲದೆ ಯುಐ ಚಿತ್ರದ 'ಟ್ರೋಲ್' ಹಾಡು ಎಲ್ಲರ 'ಹೃದಯ'ವನ್ನ ಗೆಲ್ತಿದೆ.


Click it and Unblock the Notifications











