ವಿಜಯಲಕ್ಷ್ಮಿ ದರ್ಶನ್ ಕ್ರೈಸ್ತ ಧರ್ಮಕ್ಕೆ ಮಾತಾಂತರಗೊಂಡಿದ್ದಾರಾ? ವೈರಲ್ ಮಾಡ್ತಿರೋ ಫೋಟೋದ ಕಥೆಯೇನು?
ಕಳೆದೆರಡು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಯುದ್ಧ ಆರಂಭ ಆಗುವ ಮುನ್ಸೂಚನೆ ಸಿಗುತ್ತಿದೆ. ತಣ್ಣಗಿದ್ದ ಇಬ್ಬರು ಸೂಪರ್‌ಸ್ಟಾರ್ ಅಭಿಮಾನಿಗಳು ರೊಚ್ಚಿಗೆದ್ದು ವಾಗ್ಯುದ್ಧಕ್ಕೆ ಧುಮುಕುವ ಲಕ್ಷಣಗಳು ದಟ್ಟವಾಗಿವೆ. ಇದಕ್ಕೆ ಇಬ್ಬರು ಸೂಪರ್‌ಸ್ಟಾರ್‌ಗಳು ಹಾಗೂ ಅವರ ಆಪ್ತರು ಕೊಡುತ್ತಿರುವ ಏಟು-ತಿರುಗೇಟುಗಳೇ ಕಾರಣ ಅಲ್ಲದೆ ಮತ್ತೇನೂ ಇಲ್ಲ.
ಡಿಸೆಂಬರ್ 20ರಂದು ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ಕೊಟ್ಟ ಹೇಳಿಕೆಗಳು, ಅತ್ತ ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ತಿರುಗೇಟು ಕೊಡಲು ಬಳಸಿದ ಪದಗಳು ಇಬ್ಬರು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿವೆ. ಸೋಶಿಯಲ್ ಮೀಡಿಯಾದಲ್ಲಿ ನಿಧಾನವಾಗಿ ಫ್ಯಾನ್ಸ್‌ಗಳು ಒಬ್ಬರ ಮೇಲೊಬ್ಬರು ಕೆಸರು ಎರಚಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಇವರಿಬ್ಬರ ಡೈಲಾಗ್ ವಾರ್‌ನ ಪರಿಣಾಮ ಸುಳ್ಳುಗಳ ಕಂತೆಗಳೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡಿದೆ.

ಇಬ್ಬರ ಅಭಿಮಾನಿಗಳು ಫೋಟೋ, ವಿಡಿಯೋಗಳನ್ನು ಇಟ್ಕೊಂಡು ಬೇಡ ಸುದ್ದಿಗಳನ್ನು ವೈರಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಥಿಯೇಟರ್ ವಿಸಿಟ್ ಹಾಕಿದ್ದ ವೇಳೆ ಅರಿಶಿಣ-ಕುಂಕುಮವನ್ನು ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದರು. ಇದನ್ನೇ ಇಟ್ಟುಕೊಂಡು ಕೆಲವು ಮಂದಿ ವಿಜಯಲಕ್ಷ್ಮಿ ಹಿಂದೂ ಧರ್ಮದ ಮೇಲೆ ನಂಬಿಕೆಯಿಲ್ಲ. ಅವರು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆಂದು ಕೆಲವು ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ಅಸಲಿಗೆ ಏನಿದು ವಿಷಯ? ನೆಟ್ಟಿಗರು ಶೇರ್ ಮಾಡುತ್ತಿರುವ ಫೋಟೊದಲ್ಲಿ ಏನಿದೆ? ಇದರ ಅಸಲಿಯತ್ತೇನು? ತಿಳಿಯುವುದಕ್ಕೆ ಮುಂದೆ ಓದಿ.
ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ 'ಮಾರ್ಕ್' ಪ್ರೀ ರಿಲೀಸ್ ಈವೆಂಟ್‌ನಲ್ಲಿ ಭಾಗಿಯಾಗಿದ್ದರು. ಆವೇಳೆ ತನ್ನ ಅಭಿಮಾನಿಗಳನ್ನು ಉದ್ದೇಶಿಸಿ ಕೆಲವು ಹೇಳಿಕೆ ಕೊಟ್ಟಿದ್ದರು. "ಡಿಸೆಂಬರ್ 25ಕ್ಕೆ 'ಮಾರ್ಕ್' ರಿಲೀಸ್ ಆಗುತ್ತಿದೆ. ಈ ವೇಳೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ. ಈ ವೇದಿಕೆ ಮೇಲೆ ನಿಂತು ಹೇಳ್ತಾ ಇದ್ದೀನಿ, ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ" ಎಂದು ಸುದೀಪ್ ಹೇಳಿದ್ದರು.
ಕಿಚ್ಚನ ರೊಚ್ಚಿಗೆದ್ದ ಕಿಚ್ಚಿನ ಡೈಲಾಗ್‌ಗಳನ್ನು ನೋಡಿ ದರ್ಶನ್ ಅಭಿಮಾನಿಗಳು ಕಿಡಿಕಾರುವುದಕ್ಕೆ ಶುರು ಮಾಡಿದ್ದರು. ಅದಕ್ಕೆ ವಿಜಯಲಕ್ಷ್ಮಿ ದರ್ಶನ್ ದಾವಣಗೆರೆ ಗೀತಾಂಜಲಿ ಚಿತ್ರ ಮಂದಿರಕ್ಕೆ ಬಂದಾಗ ತುಪ್ಪ ಸುರಿದಿದ್ದರು. ಅಭಿಮಾನಿಗಳ ಸಮ್ಮುಖದಲ್ಲಿ "ದರ್ಶನ್ ಇಲ್ಲದೆ ಇರುವಾಗ ಕೆಲವೊಬ್ಬರು ಏನೇನೋ ಮಾತಾಡ್ತಿದ್ದಾರೆ. ವೇದಿಕೆ ಮೇಲೆ , ಚಾನೆಲ್‌ಗಳಲ್ಲಿ ಕೂತ್ಕೊಂಡು ಏನೇನೋ ಹೇಳ್ತಿದ್ದಾರೆ. ದರ್ಶನ್ ಇದ್ದಾಗ ಅವರೆಲ್ಲ ಬೆಂಗಳೂರಿನಲ್ಲಿ ಇರ್ತಾರೋ ಇಲ್ವೋ ಅನ್ನೋದೆ ಗೊತ್ತಾಗೋದಿಲ್ಲ" ಎಂದು ವ್ಯಂಗ್ಯವಾಗಿ ತಿರುಗೇಟು ಕೊಟ್ಟಿದ್ದರು.
ಇಷ್ಟೇ ಆಗಿದ್ದು, ಕಿಚ್ಚ ಅಭಿಮಾನಿಗಳು ಕಣ್ಣು ಕೆಂಪು ಮಾಡಿಕೊಂಡಿದ್ದಾರೆ. ಅದರ ಪರಿಣಾಮ ಸೋಶಿಯಲ್ ಮೀಡಿಯಾದಲ್ಲಿ ಎದ್ದು ಕಾಣುತ್ತಿದೆ. ಎಕ್ಸ್‌ನಲ್ಲಿ ಕೆಲವರು ವಿಜಯಲಕ್ಷ್ಮಿಯವರ ಫೋಟೊಗಳನ್ನು, ವಿಡಿಯೋಗಳನ್ನು ಹಂಚಿಕೊಂಡು ಈ ಕಿತ್ತಾಟಕ್ಕೆ ಬೇರೆ ಆಯಾಮ ಕೊಡುತ್ತಿದ್ದಾರೆ. ಅದರಲ್ಲೂ ಥಿಯೇಟರ್ ವಿಸಿಟ್ ವೇಳೆ ವಿಜಯಲಕ್ಷ್ಮಿ ದರ್ಶನ್ ಅರಿಶಿಣ-ಕುಂಕುಮವನ್ನು ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದರು. ಆ ವಿಡಿಯೋವನ್ನು ಶೇರ್ ಮಾಡಿ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲ ಎಂದು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಈ ವಿಡಿಯೋಗೆ ಇನ್ನು ಕೆಲವರು ಬೇರೆಯದೇ ಬಣ್ಣ ಬಳಿಯುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಫೋನ್‌ನ ಬ್ಯಾಕ್ ಕವರ್‌ನಲ್ಲಿ ಕ್ರಿಶ್ವಿಯನ್ ಧರ್ಮದ ಚಿಹ್ನೆ ಇರುವ ಫೋಟೊವನ್ನು ಶೇರ್ ಮಾಡುತ್ತಿದ್ದಾರೆ. ಈ ಫೋಟೊವನ್ನು ಶೇರ್ ಮಾಡಿ ನೇರವಾಗಿ ವಿಷಯ ಹೇಳದೇ ಹೋದರೂ, ಅವರಿಗೆ ಕ್ರೈಸ್ತ ಧರ್ಮದ ಬಗ್ಗೆ ಒಲವು ಇದೆಯೆಂದು ಸಾಬೀತು ಮಾಡುವುದಕ್ಕೆ ಹೊರಟಂತೆ ಕಾಣುತ್ತಿದೆ. ಸದ್ಯ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಶುರುವಾಗಿದೆ. ಆದರೆ, ಇಂತಹ ಚಿಹ್ನೆಗಳಿರುವ ಫೋನ್ ಕವರ್‌ಗಳನ್ನು ಬಳಸೋದು ಈಗ ಟ್ರೆಂಡ್ ಆಗಿದೆ. ಹಾಗಾಗಿ ಯಾರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ.
ಒಟ್ನಲ್ಲಿ ಕಿಚ್ಚ ಸುದೀಪ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರ ಏಟು-ಎದಿರೇಟು ಮುಂದಿನ ದಿನಗಳಲ್ಲಿ ಇನ್ಯಾವ ರೂಪ ಪಡೆದುಕೊಳ್ಳುತ್ತೋ? ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಬೆಂಬಲಿಸುವ ಭರಾಟೆಯಲ್ಲಿ ಇನ್ಯಾವ ಮಟ್ಟಕ್ಕೆ ಇಳಿಯುತ್ತಾರೋ? ಪರಸ್ಪರ ಕೆಸರು ಎರಚಿಕೊಳ್ಳುವ ಈ ಆಟದಲ್ಲಿ ಯಾರ ಮಾನಹಾನಿಯಾಗುತ್ತೋ? ಮತ್ತೆ ಫ್ಯಾನ್ಸ್ ವಾರ್ ಶುರುವಾಗುತ್ತೋ? ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.


Click it and Unblock the Notifications











