ಲೋಕಸಭಾ ಚುನಾವಣೆಯಲ್ಲಿ ಕೋಲ್ಕತ್ತಾದಿಂದ ಕಣಕ್ಕಿಳಿದು ಗೆದ್ದ ರವಿಚಂದ್ರನ್ ಚಿತ್ರದ ನಾಯಕಿ..!
ಸಿನಿಮಾ ಮತ್ತು ರಾಜಕೀಯ.. ಒಂದೇ ನಾಣ್ಯದ ಎರಡು ಮುಖ. ಇಲ್ಲಿಯವರೆಗೆ ಅನೇಕ ತಾರೆಯರು ರಾಜಕೀಯಕ್ಕೆ ಧುಮುಕಿದ್ದಾರೆ. ಬಿದ್ದು, ಎದ್ದು, ಗೆದ್ದು ಬಂದಿದ್ದಾರೆ. ಇನ್ನೂ ಕೆಲವರು ಇತಿಹಾಸವನ್ನೂ ಸೃಷ್ಟಿಸಿದ್ದಾರೆ. ಆ ಪೈಕಿ ರಚನಾ ಬ್ಯಾನರ್ಜಿ ಕೂಡ ಒಬ್ಬರು.
ಹೌದು, ರಚನಾ ಬ್ಯಾನರ್ಜಿ.. ಈ ಹೆಸರು ಕೇಳಿದ ತಕ್ಷಣ ಬೆಂಗಾಳ್‌ನವರನ್ನ ಹೊರತು ಪಡಿಸಿದರೆ ಅನೇಕರಲ್ಲಿ ಯಾರು ಈಕೆ ಎಂಬ ಪ್ರಶ್ನೆ ಮೂಡಬಹುದು. ಅದು ಸಹಜ ಕೂಡ. ಯಾಕೆಂದರೆ.. ಆಧುನಿಕ ಕಾಲಘಟ್ಟದ ಚಿತ್ರ ಪ್ರೇಕ್ಷಕರಿಗೆ ರಚನಾ ಬ್ಯಾನರ್ಜಿ ಅಪರಿಚಿತರು. ಆದರೆ..ಎರಡೂವರೆ ದಶಕದ ಹಿಂದೆ ಇದೇ ರಚನಾ ಬ್ಯಾನರ್ಜಿಗೆ ಕೇವಲ ಬೆಂಗಾಳದಲ್ಲಿ ಅಷ್ಟೇ ಅಲ್ಲ ನಾಲ್ಕು ದಿಕ್ಕಿನಲ್ಲಿರುವ ಚಿತ್ರರಂಗದಲ್ಲಿ ಕೂಡ ಚಿನ್ನದ ಬೇಡಿಕೆ ಇತ್ತು.

ಆ ಕಾಲದಲ್ಲಿಯೇ ಕೋಲ್ಕತ್ತಾದಿಂದ ಆಂಧ್ರಕ್ಕೆ ವಲಸೆ ಬಂದು ಮೋಹನ್ ಬಾಬು.. ಮೆಗಾ ಸ್ಟಾರ್ ಚಿರಂಜೀವಿ.. ಶ್ರೀಕಾಂತ್.. ಬಾಲಯ್ಯ.. ಹೀಗೆ ದೊಡ್ಡ ದೊಡ್ಡವರ ಜೊತೆ ತೆರೆಹಂಚಿಕೊಂಡಿದ್ದ ರಚನಾ, ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಅಭಿನಯಿಸಿದ್ದ ತೆಲುಗು ಚಿತ್ರದಲ್ಲಿ ನಾಯಕಿ ಪಾತ್ರವನ್ನೂ ನಿರ್ವಹಿಸಿದ್ದರು. ಇನ್ನೂ ತಮಿಳಿನಲ್ಲಿ ಪಾರ್ಥಿಬನ್ ಜೊತೆ ಎರಡು ಬಾರಿ ತೆರೆ ಹಂಚಿಕೊಂಡಿದ್ದ ರಚನಾ ಬಾಲಿವುಡ್‌ನಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಅಮಿತಾಬ್ ಬಚ್ಚನ್ ಅಭಿನಯದ ಸೂರ್ಯವಂಶಂ ಸಿನಿಮಾದಲ್ಲಿ ಕೂಡ ಆಕ್ಟ್ ಮಾಡಿದ್ದರು.
ಇನ್ನೂ 2000ನೇ ಇಸ್ವಿಯಲ್ಲಿ ಕನ್ನಡ ಚಿತ್ರರಂಗಕ್ಕೂ ಬಂದಿದ್ದ ರಚನಾ, ಕ್ರೇಜಿ ಸ್ಟಾರ್ ಡಾ.ವಿ.ರವಿಚಂದ್ರನ್ ಅವರ ಜೊತೆ ಎರಡೆರಡು ಬಾರಿ ನಟಿಸುವ ಅವಕಾಶವನ್ನ ಪಡೆದಿದ್ದರು. ಆ ಪೈಕಿ ಒಂದು ಚಿತ್ರದ ಹೆಸರು ಪ್ರೀತ್ಸು ತಪ್ಪೇನಿಲ್ಲ ಆದರೆ ಮತ್ತೊಂದು ಚಿತ್ರದ ಹೆಸರು ಉಸಿರೇ.

ಹೀಗೆ 04 ಭಾಷೆಯಲ್ಲಿ ತಮ್ಮ ಅಂದ-ಚೆಂದ ಮತ್ತು ಅಭಿನಯದಿಂದ ಮೋಡಿ ಮಾಡಿದ್ದ ರಚನಾ, ಕಾಲ ಉರುಳಿದಂತೆ ನಿರೂಪಕಿಯಾದರು. ಬೆಂಗಾಳಿ ಕಿರುತೆರೆಯ ಪ್ರಸಿದ್ಧ ಶೋ ದೀದಿ ನಂ 1ನ ಪ್ರಮುಖ ಭಾಗವಾದರು. ಇಂಥಾ ರಚನಾ ಬ್ಯಾನರ್ಜಿ ಸದ್ಯಕ್ಕೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ದಾಖಲೆ ಬರೆದಿದ್ದಾರೆ.
ಹೌದು, ಕೋಲ್ಕತ್ತಾದ ಹೂಗ್ಲಿ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪರ ಅಖಾಡಕ್ಕಿಳಿದು ಬಿಜೆಪಿಯ ಪ್ರಬಲ ಎದುರಾಳಿ ಲಾಕೆಟ್ ಚಟರ್ಜಿ ಅವರನ್ನ ಸೋಲಿಸಿದ್ದಾರೆ. 60.000 ಮತಗಳ ಅಂತರದಿಂದ ಗೆದ್ದು ರಣಕೇಕೆ ಹಾಕಿದ್ದಾರೆ. ವಿಶೇಷ ಅಂದರೆ ಲಾಕೆಟ್ ಚಟರ್ಜಿ ಕೂಡ ರಚನಾ ಬ್ಯಾನರ್ಜಿ ಅವರಂತೆಯೇ ಒಂದ್ಕಾಲದಲ್ಲಿ ಬೆಂಗಾಳಿ ಚಿತ್ರರಂಗದ ನಾಯಕಿ.

ಸದ್ಯಕ್ಕೆ ತೃಣಮೂಲ ಕಾಂಗ್ರೆಸ್ ನ ಬಾವುಟವನ್ನ ಹೂಗ್ಲಿಯಲ್ಲಿ ಹಾರಿಸಿದ ರಚನಾ ಬ್ಯಾನರ್ಜಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ವರ್ಷಾನು ವರ್ಷದ ನಂತರ ರಚನಾ ಬ್ಯಾನರ್ಜಿ ಹೆಸರು ಈ ಮೂಲಕ ದೇಶವ್ಯಾಪಿ ಮತ್ತೊಮ್ಮೆ ಸದ್ದು ಮಾಡುತ್ತಿದೆ.


Click it and Unblock the Notifications











