ಹುಟ್ಟುಹಬ್ಬದಂದೇ 'ನೆನಪಿರಲಿ' ಪ್ರೇಮ್‌ಗೆ ಬಿಗ್ ಶಾಕ್ ನೀಡಿದ ಶ್ರುತಿ ನಾಯ್ಡು ; ಅವತ್ತು ನಾಯ್ಡು ಮೇಡಂ ಮಾಡಿದ್ದು ಸರೀನಾ ?
ಆ ಭಾಷೆ ಈ ಭಾಷೆ ಅಂತಲ್ಲ. ಭಾರತದ ಚಿತ್ರರಂಗದಲ್ಲಿ ಅನೇಕರು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಚಿತ್ರಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕಳ್ಳತನಕ್ಕೆ ಇಳಿಯುತ್ತಾರೆ. ಕೆಲವರು ಪ್ರೇರಣೆಯ ಗೀತೆಯನ್ನು ಹಾಡುತ್ತಾ ಬೇರೆ ಚಿತ್ರದ ಸನ್ನಿವೇಶಗಳನ್ನು ಯಥಾವತ್ತಾಗಿ ನಕಲು ಮಾಡಿದರೆ ಇನ್ನು ಹಲವರು ಯಾರ ಅಳುಕಿಲ್ಲದೇ ಬೇರೆಯವರ ಕೃತಿಯನ್ನು ಕದ್ದು ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಬಿಲ್ಡಪ್ಪು ಕೊಡುತ್ತಾರೆ.
ಹೀಗೆ ಕದಿಯುವ ಮನೋವ್ಯಾದಿ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಹಲವರು ಬೇರೆ ಭಾಷೆಯಲ್ಲಿ ಗಮನ ಸೆಳೆದ ಪೋಸ್ಟರ್‌ಗಳನ್ನು ಕೂಡ ತಮ್ಮದೇ ವಿನ್ಯಾಸವೆನ್ನುವಂತೆ ತೋರ್ಪಡಿಸುತ್ತಾರೆ. ಮತ್ತೂ ಕೆಲವರು ನಮ್ಮನ್ಯಾರು ಕೇಳ್ತಾರೆ ಎಂಬ ಮನೋಭಾವದಲ್ಲಿ ಯಾರ ಅಪ್ಪಣೆಯನ್ನು ಪಡೆಯದೇ ಬೇರೆ ಯಾರದ್ದೋ ಚಿತ್ರದ ಹಾಡು, ಆ ಚಿತ್ರದಲ್ಲಿ ಉಪಯೋಗವಾದ ವಸ್ತು, ಚಿತ್ರದ ಸನ್ನಿವೇಶಕ್ಕೆ ಬಳಸಿಕೊಳ್ಳಲಾದ ಪ್ರಾಪರ್ಟಿಗಳನ್ನೆಲ್ಲ ಬಳಸಿಕೊಂಡು ವಿವಾದಕ್ಕೆ ಗುರಿಯಾಗುತ್ತಾರೆ. ನೆನಪಿರಲಿ ಪ್ರೇಮ್ ಅಭಿನಯದ ಹೊಸ ಚಿತ್ರ ಸದ್ಯ ಇಂತಹದ್ದೇ ಒಂದು ವಿವಾದಕ್ಕೆ ಸಿಲುಕಿದೆ.

ಹೌದು, ಅಸಲಿಗೆ ಇಂದು ನೆನಪಿರಲಿ ಪ್ರೇಮ್ ಅವರಿಗೆ ಬರ್ತ್ ಡೇ ಸಂಭ್ರಮ. ಈ ಸಂಭ್ರಮ ಇನ್ನು ಹೆಚ್ಚಿಸಲು 'ಸ್ಪಾರ್ಕ್' ಚಿತ್ರತಂಡ ಪ್ರೇಮ ಅವರ ಲುಕ್‌ನ ಅನಾವರಣ ಮಾಡಿದೆ. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಪ್ರೇಮ್ ವಿಶೇಷವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಚಿತ್ರದ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮತ್ತು ಅವರ ತಂಡ ನೆನಪಿರಲಿ ಪ್ರೇಮ್ ಅವರಿಗೆ ನೆನಪಿನಲ್ಲಿರಲಿ ಎಂದು ಫೋಸ್ಟರ್‌ನ ತುಂಬಾ ಪ್ರೀತಿಯಿಂದ ಬಿಡುಗಡೆ ಮಾಡಿದೆ.
ಆದರೆ ಈಗ ಈ ಸ್ಪಾರ್ಕ್ ಚಿತ್ರದಲ್ಲಿನ ನೆನಪಿರಲಿ ಪ್ರೇಮ್ ಅವರ ಈ ಲುಕ್ ಕನ್ನಡದ ಕಿರುತೆರೆಯಲ್ಲಿ ಕೌಟಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ನಿರ್ಮಾಪಕಿ ಶ್ರುತಿ ನಾಯ್ಡು ಅವರ ಕಣ್ಣನ್ನು ಕೆಂಪಾಗಿಸಿದೆ. ಈ ಮೂಲಕ ಸ್ಟಾರ್ಕ್ ಚಿತ್ರ ವಿವಾದಕ್ಕೆ ಸಿಲುಕಿದೆ.
ಶ್ರುತಿ ನಾಯ್ಡು ಅವರ ವಾದದ ಪ್ರಕಾರ ಪ್ರೀಮಿಯರ್ ಪದ್ಮಿನಿ ಚಿತ್ರದ ನಿರ್ದೇಶಕ ಮತ್ತು ಖ್ಯಾತ ಖಳನಾಯಕ ರಮೇಶ್ ಇಂದಿರಾ ಅವರ ಫೋಟೊವನ್ನು ಸ್ಪಾರ್ಕ್ ಚಿತ್ರತಂಡ ಪರವಾನಗಿ ಪಡೆಯದೇ ಬಳಸಿದೆ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ಶ್ರುತಿ ನಾಯ್ಡು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕಾನೂನು ಸಮರವನ್ನು ಕೂಡ ಸಾರಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಶ್ರುತಿ ನಾಯ್ಡು ಎಲ್ಲರಿಗೂ ನಮಸ್ಕಾರ, ಈ ಚಿತ್ರ ತಂಡದವರು ತುಂಬಾ ಅನೈತಿಕವಾಗಿ ನಡೆದುಕೊಂಡಿದ್ದಾರೆ. ನಟನ ಅನುಮತಿಯನ್ನು ಪಡೆಯದೇ ತಮ್ಮ ಚಿತ್ರದ ಪೋಸ್ಟರ್‌ನಲ್ಲಿ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಭೀಮಾ ಚಿತ್ರದಲ್ಲಿ ರಮೇಶ್ ಇಂದಿರಾ ಅವರು ನಿರ್ವಹಿಸಿದ್ದ ರಾಜಕಾರಣಿಯ ಪಾತ್ರದ ಭಾವಚಿತ್ರವನ್ನು, ಇಲ್ಲಿ ಉಪಯೋಗಿಸಲಾಗಿದೆ ಎಂದಿರುವ ಶ್ರುತಿ ನಾಯ್ಡು ಈ ನಿರ್ದಿಷ್ಟ ಫೋಟೊವನ್ನು ಭೀಮಾ ಚಿತ್ರಕ್ಕೆ ಮಾತ್ರ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ. ರಮೇಶ್ ಇಂದಿರಾ ಪರವಾಗಿ ನಾವು ಚಿತ್ರತಂಡ ಮತ್ತು ಪ್ರೇಮ್ ಅವರಿಗೆ ನೋಟಿಸ್ ಕಳುಹಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ವಿಪರ್ಯಾಸ ಅಂದರೆ ನೆನಪಿರಲಿ ಪ್ರೇಮ್ ಮತ್ತು ಸ್ಪಾರ್ಕ್ ತಂಡದ ವಿರುದ್ಧ ಅನುಮತಿಯನ್ನು ಪಡೆಯದೇ ಕೇವಲ ಒಂದು ಫೋಟೊ ಬಳಸಿದ್ದಕ್ಕೆ ಕಿಡಿ ಕಾರುತ್ತಿರುವ ಶ್ರುತಿ ನಾಯ್ಡು, ಕೆಲ ವರ್ಷಗಳ ಹಿಂದೆ ಖ್ಯಾತ ಲೇಖಕ, ಕಾದಂಬರಿಕಾರ ವಸುಧೇಂದ್ರ ಅವರ ಕಥೆಯನ್ನು ಹೇಳದೇ ಕೇಳದೇ ಎತ್ತಿಕೊಂಡು ಪ್ರೀಮಿಯರ್ ಪದ್ಮಿನಿ ಸಿನಿಮಾ ಮಾಡಿದ ಅಪಕೀರ್ತಿಗೆ ಗುರಿಯಾಗಿದ್ದರು. ಇದೇ ರಮೇಶ್ ಇಂದಿರಾ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದರು. ನವರಸನಾಯಕ ಜಗ್ಗೇಶ್ ಮತ್ತು ಪ್ರಮೋದ್ ಅಭಿನಯಿಸಿದ್ದ ಈ ಚಿತ್ರ ಈ ಕೃತಿಚೌರ್ಯ ಆರೋಪದಿಂದನೇ ಆ ಕಾಲಕ್ಕೆ ವ್ಯಾಪಕ ಸದ್ದು ಮಾಡಿತ್ತು.
ಆ ಕಾಲದಲ್ಲಿ ಅಂದರೆ ಹೆಚ್ಚು ಕಡಿಮೆ ಆರು ವರ್ಷದ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದ ವಸುಧೇಂದ್ರ ಅವರು ಸಿನಿಮಾದಲ್ಲಿರುವ ನಂಜುಂಡಿ ಪಾತ್ರ ನನ್ನ ವರ್ಣಮಯ ಪುಸ್ತಕದಲ್ಲಿರುವ ಪ್ರಬಂಧ ನಂಜುಂಡಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದರು. ನಿರ್ದೇಶಕರು ಮೊದಲಿಗೆ ನನ್ನನ್ನು ಭೇಟಿಯಾಗಿ, ನನ್ನ ಎರಡು ಪ್ರಬಂಧಗಳನ್ನು ಬಳಸಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದರು.
ಅದಕ್ಕೆ ಸಂಭಾವನೆಯನ್ನೂ ನಿಗದಿಪಡಿಸಲಾಗಿತ್ತು. ನಂತರ ಕರಾರು ಪತ್ರವನ್ನು ಶುಭ ದಿನದಂದು ಮಾಡಿಕೊಳ್ಳೋಣ ಎಂದು ಹೇಳಿ ಹೋದವರು ಮತ್ತೆ ವಾಪಾಸಾಗಲಿಲ್ಲ ಎಂದು ಹೇಳಿದ್ದ ವಸುಧೇಂದ್ರ ಸಿನಿಮಾ ಬಿಡುಗಡೆಗೆ ಮುಂಚೆ ಕರೆ ಮಾಡಿ, 'ಸಿನಿಮಾ ಮಾಡಿಬಿಟ್ಟೆ ಸಾರ್. ಆ ಪ್ರಬಂಧದ ಪ್ರೇರಣೆ ನನಗೆ ಸಾಕಷ್ಟಿದೆ. ಅದನ್ನು ಟೈಟಲ್ ಕಾರ್ಡ್ನಲ್ಲಿ ಹಾಕಬಹುದೇ?' ಎಂದು ವಿಚಾರಿಸಿದ್ದರು ಎಂದು ಹೇಳಿದ್ದರು.
ಮುಂದುವರೆದು ನನ್ನ ಒಪ್ಪಿಗೆ ಇಲ್ಲದೆ ಸಿನಿಮಾ ಆಗಿರುವುದು ನನಗೆ ಇಷ್ಟವಾಗಲಿಲ್ಲ. ಪ್ರೇರಣೆಯನ್ನು ಪಡೆದುಕೊಂಡಿದ್ದರೆ ನನಗೆ ಸಮಸ್ಯೆಯಿಲ್ಲ. ಆದರೆ ಪ್ರಬಂಧದ ದೃಶ್ಯಗಳನ್ನು ತೆಗೆದುಕೊಳ್ಳುವಂತಿಲ್ಲ. ಯಾವುದೋ ಮತ್ತೊಂದು ಕಥೆಯ ಭಾಗವಾಗಿ ನನ್ನ ಪಾತ್ರಗಳು ಬರುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದೆ ಎಂದು ಹೇಳಿದ್ದ ವಸುಧೇಂದ್ರ ಚಿತ್ರದ ಬಿಡುಗಡೆಯ ನಂತರ ಬಹುತೇಕ ನಂಜುಂಡಿ ಪಾತ್ರದ ದೃಶ್ಯಗಳು ನನ್ನ ಪ್ರಬಂಧದಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದರು.
ಆ ನಂತರ ಸಿನಿಮಾದ ಬಹುತೇಕ ಮಂದಿಗೆ ಲೇಖಕರು ಮತ್ತು ಕಥೆಗಾರರ ಬಗ್ಗೆ ಇರುವ ಅಲಕ್ಷ್ಯ ಈ ಘಟನೆಯಿಂದ ಗೊತ್ತಾಗುತ್ತದೆ ಎಂದು ಕಿಡಿ ಕಾರಿದ್ದ ವಸುಧೇಂದ್ರ, ಇಲ್ಲಿ ಸಮಸ್ಯೆ ಇರುವುದು ಹಣದ್ದಲ್ಲ. ಅಂತಹ ದೊಡ್ಡ ಹಣದ ವ್ಯವಹಾರ ಸಾಹಿತಿಗಳ ಮಧ್ಯೆ ನಡೆಯುವುದಿಲ್ಲ. ಆದರೆ ಯಾವುದೋ ನನಗೆ ಒಪ್ಪಿಗೆಯಾಗದ ಅಸೂಕ್ಷ್ಮ ಕಥೆಯ ಚಿತ್ರವೊಂದರ ಭಾಗವಾಗಿ ನನ್ನ ಪಾತ್ರಗಳನ್ನು ಬಳಸಿಕೊಳ್ಳುವುದನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದರು.
ಇದು ಮತ್ತೊಬ್ಬ ಕಥೆಗಾರನಿಗೆ ಆಗಬಾರದೆಂಬ ಕಾಳಜಿಯೇ ಈ ವಿರೋಧದ ಉದ್ದೇಶ ಎನ್ನುವುದನ್ನು ಹೇಳಿದ್ದ ವಸುಧೇಂದ್ರ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸುವ ಹಪಹಪಿಯೂ ನನಗಿಲ್ಲ, ಯಾಕೆಂದರೆ ಈಗಾಗಲೇ ನನ್ನ ಪುಸ್ತಕಗಳು ಹಲವಾರು ಮುದ್ರಣಗಳನ್ನು ಕಂಡು ಓದುಗರ ಮನ್ನಣೆ ಗಳಿಸಿವೆ. ಅದಕ್ಕೆ ಸಿನಿಮಾ ಮಂದಿಯ ಮುದ್ರೆ ಬೇಕಿಲ್ಲ. ಈಗ ನನ್ನ ಸುದೀರ್ಘ ಪ್ರಬಂಧವನ್ನು ಮತ್ತೊಬ್ಬರು ಸಿನಿಮಾ ಮಾಡುವುದಕ್ಕೂ ಸಾಧ್ಯವಿಲ್ಲ, ಅದನ್ನು ಅರ್ಧಂಬರ್ಧ, ತಮ್ಮ ಮನಸ್ಸಿಗೆ ತೋಚಿದಂತೆ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಇಂತಹ ಘಟನೆಗಳು ಕನ್ನಡದಲ್ಲಿ ಮತ್ತೆ ನಡೆಯದಿರಲಿ ಎನ್ನುವುದಷ್ಟೇ ನನ್ನ ಕಳಕಳಿ' ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದರು.
ಹೀಗೆ ಅವತ್ತು ಕೃತಿಚೌರ್ಯದ ಆರೋಪವನ್ನೊತ್ತ ಶ್ರುತಿ ನಾಯ್ಡು ಇದೀಗ ತಮ್ಮ ಅಪ್ಪಣೆ ಇಲ್ಲದೇ ರಮೇಶ್ ಇಂದಿರಾ ಅವರ ಫೋಟೊವನ್ನು ಸ್ಪಾರ್ಕ್ ಎಂಬ ಚಿತ್ರದ ಫೋಟೊಶೂಟ್‌ನಲ್ಲಿ ಬಳಸಿಕೊಂಡಿದ್ದಕ್ಕೆ ಗರಂ ಆಗಿದ್ದಾರೆ. ಲೀಗಲ್ ನೋಟಿಸ್ ಕಳುಹಿಸುವುದಾಗಿ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನೆನಪಿರಲಿ ಪ್ರೇಮ್ ಆಗಲಿ ಅಥವಾ ಸ್ಪಾರ್ಕ್ ಚಿತ್ರತಂಡವಾಗಲಿ ಇನ್ನು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಅಂದ್ಹಾಗೇ ಸ್ಪಾರ್ಕ್ ಚಿತ್ರದ ನಿರ್ದೇಶಕರಾದ ಮಹಾಂತೇಶ್ ಹಂದ್ರಾಳ್ ಈ ಹಿಂದೆ ಚೇತನ್ ಕುಮಾರ್ ಬಳಗದಲ್ಲಿ ಗುರುತಿಸಿಕೊಂಡವರು. ʻಜೇಮ್ಸ್ʼ, ʻಭರಾಟೆʼ, ಸೇರಿದಂತೆ ಹಲವಾರು ಚಿತ್ರಗಳಿಗೆ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದವರು. ಈಗ ಸ್ಪಾರ್ಕ್ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ಧಾರೆ. ಚಿತ್ರದಲ್ಲಿ ನಿರಂಜನ್ ಗೆ ನಾಯಕಿಯಾಗಿ ರಚನಾ ಇಂದರ್ ಅಭಿನಯಿಸುತ್ತಿದ್ದಾರೆ.


Click it and Unblock the Notifications











