'ಯುವ' ಚಿತ್ರದಲ್ಲಿ 'ಅಪ್ಪು' ಛಾಯೆ; ಚಿಕ್ಕಪ್ಪನ 'ಯುವರತ್ನ' ಚಿತ್ರಕ್ಕೂ ಲಿಂಕ್ ಇದ್ಯಾ?
ಯುವ ರಾಜ್‌ಕುಮಾರ್ ನಟನೆಯ 'ಯುವ' ಚಿತ್ರದ ಟ್ರೈಲರ್ ರಿಲೀಸ್ ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳು ಪದೇ ಪದೆ ಅಣ್ಣಾವ್ರ ಮೊಮ್ಮಗನ ಆರ್ಭಟ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಫಿಕ್ಸ್ ಎನ್ನುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ಟೇಕಿಂಗ್, ಯುವ ರಾಜ್‌ಕುಮಾರ್ ಪವರ್‌ಫುಲ್ ಪರ್ಫಾರ್ಮನ್ಸ್ ಸೇರಿ ಟ್ರೈಲರ್ ಹಿಟ್ ಆಗಿದೆ.
ರಾಘಣ್ಣನ ಕಿರಿಮಗನನ್ನು ಚಿತ್ರರಂಗಕ್ಕೆ ಕರೆತರುವ ಆಸೆ ಪುನೀತ್ ರಾಜ್‌ಕುಮಾರ್ ಅವರಿಗಿತ್ತು. ಅದು ಈಡೇರುವ ಮುನ್ನವೇ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಸಾಕಷ್ಟು ಜನ ಅಭಿಮಾನಿಗಳು ನಟನಾಗಿ ಯುವ ರಾಜ್‌ಕುಮಾರ್ ಅವರಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಲು ಆರಂಭಿಸಿದ್ದಾರೆ. ಅದೇ ಕಾರಣಕ್ಕೆ 'ಯುವ' ಸಿನಿಮಾ ಮತ್ತಷ್ಟು ನಿರೀಕ್ಷೆ ಹುಟ್ಟಾಕಿದೆ. ಪುನೀತ್ ನಟನೆಯ 2 ಸಿನಿಮಾಗಳನ್ನು ನಿರ್ದೇಶಿಸಿದ್ದ ಸಂತೋಷ್ ಆನಂದ್ ರಾಮ್ 'ಯುವ' ಆಕ್ಷನ್ ಕಟ್ ಹೇಳಿರುವುದು ಬಹಳ ನಿರೀಕ್ಷೆ ಹುಟ್ಟಾಕ್ಕಿದೆ.

2002ರಲ್ಲಿ 'ಅಪ್ಪು' ಸಿನಿಮಾ ಮೂಲಕ ಪುನೀತ್ ರಾಜ್‌ಕುಮಾರ್ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಯುವ' ಆಗಿ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಎರಡು ಸಿನಿಮಾಗಳನ್ನು ಹೋಲಿಸಿ ನೋಡುತ್ತಿದ್ದಾರೆ. 'ಅಪ್ಪು' ಚಿತ್ರದಲ್ಲಿ ಪುನೀತ್ ಕಾಲೇಜು ಸ್ಟೂಡೆಂಟ್ ಆಗಿ ಕಾಣಿಸಿಕೊಂಡಿದ್ದರು. ಇಲ್ಲಿ 'ಯುವ' ಕಾಲೇಜ್ ಹೀರೊನೇ.
ಪುನೀತ್ ರಾಜ್‌ಕುಮಾರ್ ಸಿನಿಮಾಗಳಲ್ಲಿ ಸ್ಟಂಟ್ಸ್, ಡ್ಯಾನ್ಸ್ ಹೈಲೆಟ್ ಆಗುತ್ತಿತ್ತು. ಸಿಕ್ಕಾಪಟ್ಟೆ ಫಿಟ್ ಅಂಡ್ ಫೈನ್ ಆಗಿದ್ದರು ಅಪ್ಪು ದೇಹವನ್ನು ರಬ್ಬರ್ ರೀತಿ ಬಾಗಿಸಿ ಬಳುಕಿಸುತ್ತಿದ್ದರು. ಅದೇ ಕಾರಣಕ್ಕೆ ಸ್ಟಂಟ್ಸ್ ವಿಚಾರದಲ್ಲಿ ಅಪ್ಪು ಖದರ್ ನೋಡಿ ಪರಭಾಷಾ ಸೂಪರ್ ಸ್ಟಾರ್‌ಗಲೂ ಕೂಡ ಹುಬ್ಬೇರಿಸುತ್ತಿದ್ದರು. ಇನ್ನು ರೋಲಿಂಗ್ ಕಿಕ್ ಪುನೀತ್ ರಾಜ್‌ಕುಮಾರ್ ಸಿನಿಮಾ ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಹೆಚ್ಚು ಕಂಡುಬರುತಿತ್ತು. 'ಯುವ' ಚಿತ್ರದಲ್ಲೂ ಯುವ ರಾಜ್‌ಕುಮಾರ್ ಅದನ್ನು ಟ್ರೈ ಮಾಡಿ ಚಿಕ್ಕಪ್ಪನನ್ನು ನೆನಪಿಸಿದ್ದಾರೆ.
ಎದುರಿಗೆ ಬರುತ್ತಿರುವ ಕಾರಿನ ಗಾಜಿನ ಮೇಲೆ ಜಿಗಿದು ಒಳಗಿದ್ದವರನ್ನು ಒದೆಯುವ ಫ್ರೇಮ್ ಕೂಡ 'ಯುವ' ಟ್ರೈಲರ್‌ನಲ್ಲಿ ಹೈಲೆಟ್ ಆಗಿದೆ. ಸ್ಟಂಟ್ ಮಾಸ್ಟರ್ ಅರ್ಜುನ್ ರಾಜಾ ಈ ಫೈಟ್ ಕಂಪೋಸ್ ಮಾಡಿದ್ದಾರೆ. ಇದೇ ರೀತಿಯ ಸ್ಟಂಟ್ ಹಲವು ಸಿನಿಮಾಗಳಲ್ಲಿ ನೋಡಬಹುದು. 'ಗೂಗ್ಲಿ' ಚಿತ್ರದಲ್ಲಿ ಯಶ್ ಕೂಡ ಇಂತದ್ದೇ ಸ್ಟಂಟ್ಸ್ ಮಾಡಿದ್ದರು. ಕೆಲವರು ಎರಡು ಹೋಲಿಸಿ ನೋಡುತ್ತಿದ್ದಾರೆ. ಅಸಲಿ ಸಂಗತಿ ಏನು ಅಂದ್ರೆ ಬಹಳ ಹಿಂದೆಯೇ 'ಆಕಾಶ್' ಚಿತ್ರದಲ್ಲಿ ಪುನೀತ್ ಸೇಮ್ ಇದೇ ಸ್ಟಂಟ್ ಮಾಡಿದ್ದರು.
'ಯುವ' ಸಿನಿಮಾ ಟ್ರೈಲರ್ ಗಮನಿಸಿದವರಿಗೆ ಮತ್ತೊಂದು ವಿಚಾರವೂ ಗಮನಕ್ಕೆ ಬರುತ್ತದೆ. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ರೆಫರೆನ್ಸ್ ಕೂಡ ಇಟ್ಟಂತೆ ಕಾಣುತ್ತಿದೆ. 'ಯುವರತ್ನ' ಚಿತ್ರದಲ್ಲಿ ಪುನೀತ್ ರಗ್ಬಿ ಆಡುವ ಸನ್ನಿವೇಶವೊಂದಿತ್ತು. ಅದಕ್ಕೂ 'ಯುವ' ಚಿತ್ರಕ್ಕೂ ಏನೋ ಲಿಂಗ್ ಇದೆ ಎಂದು ಅಭಿಮಾನಿಗಳು ಕಲ್ಪಿಸಿಕೊಳ್ಳುತ್ತಿದ್ದಾರೆ. ಸನ್ನಿವೇಶವೊಂದರಲ್ಲಿ ಪುನೀತ್ ಫೋಟೊ ಕೂಡ ತೋರಿಸುವಂತೆ ಕಾಣುತ್ತಿದೆ. ಅಂದ್ರೆ ಚಿತ್ರದಲ್ಲಿ ಯಾವುದೋ ರೂಪದಲ್ಲಿ ಅಪ್ಪುನ ಕರೆತರಲು ಪ್ರಯತ್ನಿಸಿರುವಂತೆ ಕಾಣುತ್ತಿದೆ. ಆರ್‌ಕೆ ಕಾಲೇಜ್‌ನಲ್ಲಿ 'ಯುವರತ್ನ' ಜ್ಯೂನಿಯರ್ ಆಗಿ 'ಯುವ' ಇರ್ತಾನಾ? ಅಥವಾ 'ಯುವ'ಗೆ 'ಯುವರತ್ನ' ರೋಲ್ ಮಾಡೆಲ್ ಆಗಿರ್ತಾನಾ? ಎಂದು ಅಭಿಮಾನಿಗಳು ಕಲ್ಪಿಸಿಕೊಳ್ಳುತ್ತಿದ್ದಾರೆ.
ಬ್ಯಾಗ್ ಲಾಕರ್ ರೂಮ್‌ನಲ್ಲಿ ಯುವ ರಾಜ್‌ಕುಮಾರ್ ಕುಳಿತ ಫ್ರೇಮ್ 'ಯುವರತ್ನ' ಚಿತ್ರದ ರಗ್ಬಿ ಎಪಿಸೋಡ್ ನೆನೆಪಿಸುವುದು ಸುಳ್ಳಲ್ಲ. ಹಾಗಾದ್ರೆ 'ಯುವ' ಚಿತ್ರದಲ್ಲಿ ಕೂಡ ರಗ್ಬಿ ಎಪಿಸೋಡ್ ಇದ್ಯಾ? ಎನ್ನುವ ಕುತೂಹಲವೂ ಮೂಡಿದೆ. ಈ ಚಿತ್ರದ ಮೂಲಕ ಪುನೀತ್‌ಗೆ ತ್ರಿಬ್ಯೂಟ್ ನೀಡುವ ಪ್ರಯತ್ನ ನಡೆದಿದ್ಯಾ? ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಪುನೀತ್ ರಾಜ್‌ಕುಮಾರ್ ರೀತಿಯಲ್ಲೇ ಯುವ ರಾಜ್‌ಕುಮಾರ್ ಕೂಡ ಯಾವುದೇ ಡ್ಯೂಪ್ ಇಲ್ಲದೇ ಭರ್ಜರಿ ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಹೊತ್ತು ಬರುತ್ತಿದ್ದಾರೆ.


Click it and Unblock the Notifications











