'ಕಾಂತಾರ- 1', 'ಇಡ್ಲಿ ಕಡೇ' ಹಾಗೂ 'OG' ಸೆನ್ಸಾರ್ ಕಥೆ ಏನಾಯ್ತು? ರನ್ ಟೈಮ್ ಎಷ್ಟೆಷ್ಟು?
ದಸರಾ ಸಂಭ್ರಮದಲ್ಲಿ ಸಿನಿಮಾ ಬಾಕ್ಸಾಫೀಶ್ ಶೇಕ್ ಆಗಲಿದೆ. 3 ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಈಗಾಗಲೇ ಟ್ರೈಲರ್‌ಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಕನ್ನಡದ 'ಕಾಂತಾರ- 1' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ತೆರೆಗಪ್ಪಳಿಸುತ್ತಿದೆ. ಹಾಗಾಗಿ ತಮಿಳಿನ 'ಇಡ್ಲಿ ಕಡೇ' ಹಾಗೂ ತೆಲುಗಿನ 'OG' ಚಿತ್ರಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಎದುರಾಗಲಿದೆ.
ನಾಡಹಬ್ಬದ ಸಂಭ್ರಮದ ಜೊತೆಗೆ ಶಾಲಾ, ಕಾಲೇಜುಗಳ ರಜೆ ಕೂಡ 3 ಸಿನಿಮಾಗಳಿಗೆ ವರವಾಗಲಿದೆ. ಅಂದಹಾಗೆ 3 ವರ್ಷಗಳ ಹಿಂದೆ ದಸರಾ ಸಂಭ್ರಮದಲ್ಲೇ ಬಂದು 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇನ್ನು ಧನುಷ್ ನಿರ್ದೇಶಿಸಿ ನಟಿಸಿರುವ 'ಇಡ್ಲಿ ಕಡೇ' ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಸೆಳೆಯುವ ಸುಳಿವು ನೀಡಿದೆ. ಮತ್ತೊಂದು ಕಡೆ ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಈ ವಾರವೇ ಬಿಡುಗಡೆ ಆಗಲಿದೆ.

ಟ್ರೈಲರ್ ಬರುವವರೆಗೂ 'OG' ಸಿನಿಮಾ ಅಷ್ಟೇನು ಕುತೂಹಲ ಮೂಡಿಸಿರಲಿಲ್ಲ. ಟ್ರೈಲರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು ಫಸ್ಟ್ ಡೇ ಸಿನಿಮಾ ನೋಡುವ ಮನಸ್ಸು ಮಾಡಿದ್ದಾರೆ. ಈ ಚಿತ್ರಕ್ಕೆ ಸುಜಿತ್ ಆಕ್ಷನ್ ಕಟ್ ಹೇಳಿದ್ದಾರೆ. ಡಿವಿವಿ ದಾನಯ್ಯ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ 'OG' ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಇನ್ನು 3 ಸಿನಿಮಾಗಳು ಸೆನ್ಸಾರ್ ಕೆಲಸಗಳನ್ನು ಮುಗಿಸಿ ಬಿಡುಗಡೆಗೆ ಅಣಿಯಾಗಿವೆ. ಚಿತ್ರಗಳ ಕಾಲಾವಧಿ ಎಷ್ಟಿರಲಿದೆ ಎನ್ನುವುದು ರಿವೀಲ್ ಆಗಿದೆ.
ಕಾಂತಾರ-1 ಸೆನ್ಸಾರ್
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕನ್ನಡದ 'ಕಾಂತಾರ'- 1 ಚಿತ್ರವನ್ನು ಇತ್ತೀಚೆಗೆ ಸೆನ್ಸಾರ್ ಮಂಡಳಿ ಸದಸ್ಯರು ವೀಕ್ಷಿಸಿದ್ದರು. ಬಳಿಕ ಚಪ್ಪಾಳೆ ತಟ್ಟಿ ತಂಡವನ್ನು ಅಭಿನಂದಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಜಯರಾಂ, ಗುಲ್ಶನ್ ದೇವಯ್ಯ, ಪ್ರಮೋದ್ ಶೆಟ್ಟಿ ಚಿತ್ರದಲ್ಲಿ ನಟಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ.

ಸೆನ್ಸಾರ್ ಸರ್ಟಿಫಿಕೇಟ್‌ನಲ್ಲಿ ಚಿತ್ರದ ಕಾಲಾವಧಿ ಎಷ್ಟು ಎನ್ನುವುದು ಬಹಿರಂಗವಾಗಿದೆ. ಒಟ್ಟು ಕಾಲಾವಧಿ 168.53 ನಿಮಿಷ. ಅಂದರೆ 2 ಗಂಟೆ 48 ನಿಮಿಷ 53 ಸೆಕೆಂಡ್‌ಗಳ ಸುದೀರ್ಘ ಅವಧಿಯ ಸಿನಿಮಾ ಇದು. ಈ ಬಾರಿ ತುಳುನಾಡಿನ ದೈವಗಳ ಕಥೆಯನ್ನು ಮತ್ತಷ್ಟು ಆಳಕ್ಕಿಳಿದು ರಿಷಬ್ ಶೆಟ್ಟಿ ಕಟ್ಟಿಕೊಡುತ್ತಿದ್ದಾರೆ. ತಾವೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿ ನಟಿಸಿದ್ದಾರೆ. ಈಗಾಗಲೇ ಟ್ರೈಲರ್‌ನಲ್ಲಿ ದೃಶ್ಯ ವೈಭವ ಕಂಡು ಸಿನಿರಸಿಕರು ಫಿದಾ ಆಗಿದ್ದಾರೆ.
ಪವನ್ 'OG' ರನ್‌ಟೈಮ್
ತೆಲುಗು ನಟ ಪವನ್ ಕಲ್ಯಾಣ್ ಈಗ ಆಂಧ್ರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಟಿಸಿರುವ ಕೊನೆಯ ಸಿನಿಮಾಗಳಲ್ಲಿ 'OG' ಕೂಡ ಒಂದು. ಮುಂದೆ ನಟಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಕೊನೆಯ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ಗುರುವಾರವೇ 'OG' ಸಿನಿಮಾ ತೆರೆಗಪ್ಪಳಿಸುತ್ತಿದೆ. ಪ್ರಿಯಾಂಕ ಮೋಹನ್, ಇಮ್ರಾನ್ ಹಶ್ಮಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಈಗಾಗಲೇ 'OG' ಚಿತ್ರ ಸೆನ್ಸಾರ್ ಮುಗಿಸಿದ್ದು 'ಎ' ಸರ್ಟಿಫಿಕೇಟ್ ಪಡೆದುಕೊಂಡಿದೆ. ಇನ್ನು ಚಿತ್ರದ ರನ್ ಟೈಮ್ 154.15 ನಿಮಿಷ. ಅಂದರೆ 2 ಗಂಟೆ 34 ನಿಮಿಷ ಎನ್ನುವುದು ಗೊತ್ತಾಗುತ್ತಿದೆ. ಗ್ಯಾಂಗ್‌ಸ್ಟರ್ ಚಿತ್ರವನ್ನು ಚಿಕ್ಕದಾಗಿ ಹೇಳಿ ಮುಗಿಸಲು ಸುಜಿತ್ ಮುಂದಾಗಿದ್ದಾರೆ.
'ಇಡ್ಲಿ ಕಡೇ' ಯು ಸರ್ಟಿಫಿಕೇಟ್
ವಿಪರ್ಯಾಸ ಅಂದರೆ ದಸರಾ ಸಂಭ್ರಮದಲ್ಲಿ ಬಿಡುಗಡೆ ಆಗುತ್ತಿರುವ 3 ಚಿತ್ರಗಳಿಗೆ 3 ವಿಭಿನ್ನ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. 'ಇಡ್ಲಿ ಕಡೇ' ಸಿನಿಮಾ ನೋಡಿ ಮಂಡಳಿ 'ಯು' ಸರ್ಟಿಫಿಕೇಟ್ ನೀಡಿದೆ. ಚಿತ್ರದಲ್ಲಿ ನಿತ್ಯಾ ಮೆನನ್, ಸಮುದ್ರ ಖನಿ, ರವಿಕಿರಣ್ ಸೇರಿ ದೊಡ್ಡ ತಾರಾಗಣವಿದೆ. ಈ ಚಿತ್ರದ ರನ್ ಟೈಮ್ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ 2 ಗಂಟೆ 30 ನಿಮಿಷಕ್ಕೂ ಅಧಿಕ ಎನ್ನುವ ಊಹಾಪೋಹ ಇದೆ.


Click it and Unblock the Notifications











