"ಇಂಡಿಯನ್ ಟಾಯ್ಲೆಟ್‌ನಲ್ಲಿ ಕೂತುಕೊಳ್ಳುವುದಕ್ಕೆ ಆಗಲ್ಲ" ಎಂದ ದಾಸ; ಬಳ್ಳಾರಿ ಜೈಲ್‌ನಲ್ಲಿ ಇಟ್ಟಿರುವ ಬೇಡಿಕೆ ಏನು??
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ರನ್ನು ಬಳ್ಳಾರಿ ಜೈಲ್‌ಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಕುಳ್ಳ ಸೀನನ ಜೊತೆಯಿದ್ದ ಫೋಟೋ ವೈರಲ್ ಆಗಿತ್ತು. ಅಲ್ಲಿಂದ ಈ ಪೋಟೋ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಆ ಬಳಿಕ ದರ್ಶನ್‌ರನ್ನು ಬಳ್ಳಾರಿ ಜೈಲ್‌ಗೆ ಶಿಫ್ಟ್ ಮಾಡಲಾಗಿತ್ತು.
ದರ್ಶನ್ ಬಳ್ಳಾರಿ ಜೈಲ್‌ಗೆ ಬಂದು ಈಗಾಗಲೇ 48 ಗಂಟೆಗಳ ಮೇಲಾಗಿದೆ. ಈ ಸಂಬಂಧ ಅಲ್ಲಿ ದರ್ಶನ್‌ರನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ. ಏನೇನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಅನ್ನೋದನ್ನು ಡಿಐಜಿ ಶೇಷ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮತ್ತೆ ತಪ್ಪುಗಳು ಮರು ಕಳಿಸದ ಹಾಗೇ ಏನೆಲ್ಲ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಹೇಳಿದ್ದಾರೆ. ಇದೇ ಕೆಲವು ವಿಷಯಕ್ಕೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ದರ್ಶನ್ ಬಳ್ಳಾರಿ ಜೈಲ್‌ನಲ್ಲಿ ಇದ್ದಾರೆಂದು ಡ್ರೋನ್ ಹಾಗೂ ವಿಡಿಯೋವನ್ನು ಜೈಲಿನೊಳಗೆ ಝೂಮ್ ಮಾಡುವಂತೆ ಇಲ್ಲ ಎಂದು ಹೇಳಿದ್ದಾರೆ. "ಝೂಮ್ ಔಟ್ ಮಾಡುವುದು. ಜೈಲ್ ಇದು. ಅದರ ಕಂಪ್ಲೀಟ್ ಭಾಗ ಹೀಗಿದೆ ಅಂತ ತೋರಿಸುವುದು ತಪ್ಪು. ದಯವಿಟ್ಟು ಮಾಡುವುದಕ್ಕೆ ಹೋಗಬೇಡಿ. ನಮ್ಮನ್ನು ಕೇಳಿ ನಾವು ಹೇಳುತ್ತೇವೆ. ನಾವು ನಿಮಗೆ ಸುಳ್ಳು ಹೇಳುವುದಕ್ಕೆ ಹೋಗುವುದಿಲ್ಲ. " ಎಂದು ಡಿಐಜಿ ಶೇಷ ಹೇಳಿದ್ದಾರೆ.
ಇದೇ ವೇಳೆ ದರ್ಶನ್ ಜೈಲಿನಲ್ಲಿ ಎಲ್ಲಿ ಇರಿಸಿದ್ದಾರೆ. ಅವರೊಂದಿಗೆ ಯಾರೆಲ್ಲ ಇದ್ದಾರೆ ಅನ್ನೋದನ್ನು ಹೇಳಿದ್ದಾರೆ. "ಅವರನ್ನು ಇಟ್ಟಿರುವ ಜಾಗ ಹೇಗಿದೆ ಅಂದರೆ, ಸೆಲ್‌ಗಳಿದ್ದಾವೆ. ಆ ಸೆಲ್‌ಗಳಲ್ಲಿ ನಾವು ಸಂಖ್ಯೆಯನ್ನು ಕಡಿಮೆ ಮಾಡಿದ್ದೇವೆ. 15 ಸೆಲ್‌ಗಳಲ್ಲಿ ಬೇರೆ ಬೇರೆ ಸೆಲ್‌ಗಳಲ್ಲಿ ಕೇವಲ ನಾಲ್ಕು ಜನ ಬಂಧಿಗಳು ಮಾತ್ರ ಇದ್ದಾರೆ. ಇವರನ್ನು ಅಷ್ಟೂ ಜನರಿಂದ ಬೇರೆ ಮಾಡಿ ಇಟ್ಟಿದ್ದೀವಿ. ಸಿಂಗಲ್ ಸೆಲ್‌ನಲ್ಲಿ ಇಟ್ಟಿದ್ದೇವೆ." ಎಂದು ತಿಳಿಸಿದ್ದಾರೆ.

ದರ್ಶನ್ ಹಾಗೂ ಇತರ ಕೈದಿಗಳು ಇರುವ ಸೆಲ್‌ಗಳ ಕಾರಿಡಾರ್‌ಗೆ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಅವರ ಚಲನ ವಲನಗಳನ್ನು ಸೆರೆ ಹಿಡಿಯಲಾಗುತ್ತಿದೆ. "ಅಷ್ಟೂ ಕಾರಿಡಾರ್ ಹಾಗೂ ಸೆಲ್‌ಗಳ ಮೂವ್ಮೆಂಟ್ ಎಲ್ಲವನ್ನೂ ಕೂಡ ಸೆರೆ ಹಿಡಿಯಲಾಗುತ್ತಿದೆ. ಮೂರು ಸಿಸಿಟಿವಿ ಕ್ಯಾಮರಾಗಳಿವೆ. ಇದರಲ್ಲಿ ಎಲ್ಲವೂ ಕೂಡ ಮಾನಿಟರ್ ಆಗುತ್ತಿದೆ. ಪ್ರತಿದಿನ ಫೂಟೇಜ್ ಅನ್ನು ಸೇವ್ ಮಾಡಬೇಕು ಅಂತ ಹೇಳಿದ್ದೇನೆ. ಜೊತೆಗೆ ನಮ್ಮ ಇಬ್ಬರು ಸ್ಟಾಫ್‌ಗಳು 24 ಗಂಟೆ ಬಾಡಿ ಒನ್ ಕ್ಯಾಮರಾ ಹಿಡಿದು, ಯಾರೇ ಬಂದರೂ ಮೂವ್ಮೆಂಟ್ ಅನ್ನು ಸೆರೆ ಹಿಡಿಯುತ್ತಾರೆ." ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ದರ್ಶನ್ ಭೇಟಿ ಮಾಡಿದ್ದ ಡಿಐಜಿ ಶೇಷ ಅವರಿಗೆ ಒಂದು ಮನವಿ ಮಾಡಿದ್ದಾರೆ. ಅವರಿಗೆ ಬೆನ್ನು ನೋವು ಇರುವುದರಿಂದ ಇಂಡಿಯನ್ ಟಾಯ್ಲೆಟ್ ಕಷ್ಟ ಆಗುತ್ತಿದ್ದು, ಸರ್ಜಿಕಲ್ ಚೇರ್‌ಗೆ ಮನವಿ ಮಾಡಿಕೊಂಡಿದ್ದಾರಂತೆ. "ರೂಮ್‌ನಲ್ಲಿ ಒಂದು ಬಿಜಾನ ಇದೆ. ಒಂದು ತಟ್ಟೆಯಿದೆ. ಒಂದು ಚೊಂಬು ಇದೆ. ಒಂದು ಲೋಟ ಇದೆ. ಹೊದ್ದುಕೊಳ್ಳುವುದಕ್ಕೆ ಹೊದಿಕೆಯಿದೆ. ಅವರಿಗೆ ಬೆನ್ನು ನೋವು ಇದೆಯಂತೆ. ನಮ್ಮ ಬಳಿ ಇರುವುದು ಇಂಡಿಯನ್ ಟಾಯ್ಲೆಟ್. ಕೂತುಕೊಳ್ಳುವುದಕ್ಕೆ ಆಗಲ್ಲ. ಮೋಷನ್ ಮಾಡುವುದಕ್ಕೆ ಆಗುವುದಿಲ್ಲ. ಆರೋಗ್ಯ ಸಮಸ್ಯೆಯಿದೆ. ಸರ್ಜಿಕಲ್ ಚೇರ್ ಕೊಡಿಸಿ ನನಗೆ ಅಂತ ರಿಕ್ವೆಸ್ಟ್ ಮಾಡಿದ್ದಾರೆ. ಮೊದಲು ಮೆಡಿಕಲ್ ರೆಕಾರ್ಡ್ ಅನ್ನು ಪರಿಶೀಲನೆ ಮಾಡಿ, ಆಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ." ಎಂದು ಡಿಐಜಿ ಶೇಷ ಹೇಳಿದ್ದಾರೆ.


Click it and Unblock the Notifications











