ಪಂಜಾಬಿ ಹುಡುಗಿ ಜೊತೆ ಕನ್ನಡದ ಹುಡುಗನ 'ಬರ್ಫಿ'
ಕನ್ನಡದಲ್ಲಿ ಸಾಕಷ್ಟು ಲವ್ ಸ್ಟೋರಿಗಳು ಬಂದು ಹೋಗಿವೆ. ಆದರೆ ಪಂಜಾಬಿ ಹುಡುಗಿ ಜೊತೆಗಿನ ಕನ್ನಡದ ಹುಡುಗನ ಲವ್ ಸ್ಟೋರಿ ಅಪರೂಪದ ಕಥಾವಸ್ತು ಎನ್ನಬಹುದು. ಈ ರೀತಿಯ ಭಲ್ಲೆ ಭಲ್ಲೆ ಸ್ಟೋರಿಯನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ ನಿರ್ದೇಶಕ ಶೇಖರ್.
ಪಂಜಾಬಿ ಹುಡುಗಿ, ಕನ್ನಡದ ಹುಡುಗನ ಸುಂದರ ಪ್ರೇಮ ಕಥೆಯುಳ್ಳ 'ಬರ್ಫಿ' ಚಿತ್ರದ ಮೊದಲ ಪ್ರತಿ ಈಗಾಗಲೇ ಹೊರಬಂದಿದೆ. ಸೆನ್ಸಾರ್ ಮನೆಗೆ ಹೋಗಲು ರೆಡಿಯಾಗಿ ನಿಂತಿದೆ. 'ಅಮೃತವಾಣಿ' ಹಾಗೂ 'ಪೆರೋಲ್'ನಂಥ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜಶೇಖರ್ ಸಾಕಷ್ಟು ಪ್ರಿಪೇರ್ ಆಗಿ ಈ ಚಿತ್ರವನ್ನು ನಿರೂಪಿಸಿದ್ದಾರೆ.
ಅದಕ್ಕನುಗುಣವಾಗಿ ಅರ್ಜುನ್ ಜನ್ಯ ಸುಂದರವಾದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಆಗಸ್ಟ್ ತಿಂಗಳಲ್ಲಿ ಕನ್ನಡ ಚಿತ್ರರಸಿಕರು ಥಿಯೇಟರುಗಳಲ್ಲಿ 'ಬರ್ಫಿ' ಸವಿಯಬಹುದು. ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ ಛಾಯಾಗ್ರಣ, ಅರ್ಜುನ್ ಜನ್ಯ ಸಂಗೀತ, ಬಿ.ಎ. ಮಧು ಸಂಭಾಷಣೆ, ಜಯಂತ್ ಕಾಯ್ಕಿಣಿ, ಕವಿರಾಜ್, ಬಾಹುಬಲಿ, ಹೃದಯಶಿವ ಸಾಹಿತ್ಯ, ಕೆ.ಎಂ. ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ಎಸ್ ಬಾಹುಬಲಿ ಸಹಕಾರ ನಿರ್ದೇಶನ, ಹರ್ಷ, ಕಂಬಿರಾಜ್ ನೃತ್ಯ ನಿರ್ದೇಶನವಿದೆ.ಈ ಚಿತ್ರವು ಬಾಲಿವುಡ್ ನಲ್ಲಿ ಬಿಡುಗಡೆಯಾಗಿರುವ 'ಬರ್ಫಿ' ರೀಮೇಕ್ ಅಲ್ಲವೆಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ನಿರ್ದೇಶಕ ರಾಜಶೇಖರ್ ಪ್ರಕಾರ, ಈ ಚಿತ್ರವು ಸ್ವೀಟ್ ರೊಮ್ಯಾಂಟಿಕ್ ಲವ್ ಸ್ಟೋರಿ. ಮುಖ್ಯವಾಗಿ ಕಾಲೇಜ್ ಹುಡುಗರಿಗೆ ಇಷ್ಟವಾಗಬಹುದಾದ ಕಥೆ ಇದಾಗಿದ್ದರೂ ಎಲ್ಲಾ ವರ್ಗದವರೂ ನೋಡಿ ಖುಷಿಪಡಬಹುದಾದ ಚಿತ್ರವಾಗಿ 'ಬರ್ಫಿ' ಮೂಡಿಬರಲಿದೆ ಎಂದಿದ್ದಾರೆ. ಈ ಚಿತ್ರವನ್ನು ಭಾರಿ ಬಜೆಟ್ ಹಾಕಿ ನಿರ್ಮಿಸಲಾಗುತ್ತಿದೆ ಎಂಬ ಗುಟ್ಟನ್ನೂ ರಟ್ಟು ಮಾಡಿದ್ದಾರೆ ರಾಜಶೇಖರ್.
ದಿಗಂತ್, ಭಾಮಾ, ಸುಧಾ ಬೆಳವಾಡಿ, ಜೈ ಜಗದೀಶ್, ಹರೀಶ್ ರಾಜ್, ದಿಲೀಪ್ ರಾಜ್, ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್, ಶಂಕರ್ ಭಟ್, ಸಂಯುಕ್ತ ಬೆಳವಾಡಿ, ಇಂದ್ರಜಿತ್ ಲಂಕೇಶ್ ಮೊದಲಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












