ಹುಲಿ-ಇಲಿ ; ದಿಗಂತ್‌ನ ಯಾಮಾರಿಸಿದ್ದು ಯಾರು ? ದೂದ್ ಪೇಡ ಯಾಮಾರಿದ್ದು ಹೇಗೆ..?
ಸ್ಯಾಂಡಲ್ ವುಡ್ ನಲ್ಲಿ ''ಹೆಸರು'' ಮಾಡೋದು ತುಂಬಾ ಈಸಿಯಲ್ಲ ಅನ್ನೋದು ಗೊತ್ತಿರೋ ವಿಚಾರನೇ. ಒಂದೆರಡು ಸಿನಿಮಾದಲ್ಲಿ ''ನೇಮ್- ಫೇಮ್'' ಸಿಗೋದು ಇಲ್ಲಿ ವಿರಳ. ಪ್ರಯತ್ನ ನಿರಂತರವಾಗಿ ಇದ್ದಾಗಲೇ ಸಾಧನೆಯ ಶಿಖರವನ್ನೇರಬಹುದು. ನೆಲೆಯೂರಬಹುದು. ಈ ಮಾತನ್ನ ಚೆನ್ನಾಗಿ ಅರ್ಥೈಸಿಕೊಂಡವರಲ್ಲಿ ''ದೂದ್ ಪೇಡಾ ದಿಗಂತ್'' ಕೂಡ ಒಬ್ಬರು.
ಹೌದು, ಗುಳಿಕೆನ್ನೆ ಚೆಲುವ ದಿಗಂತ್ ಕನ್ನಡ ಚಿತ್ರರಂಗಕ್ಕೆ ಬಂದು ''18 ವರ್ಷ''ಗಳಾಗಿವೆ. ಈ 18 ವರ್ಷದಲ್ಲಿ ದಿಗಂತ್ ಹಲವಾರು ''ಏರಿಳಿತ'' ಕಂಡಿದ್ದಾರೆ. ಗೆದ್ದಿದ್ದಾರೆ. ಬಿದ್ದಿದ್ದಾರೆ. ಸೋತಿದ್ದಾರೆ. ಆ ನಂತರ ಮತ್ತೆ ಮೈಕೊಡವಿ ಎದ್ದು ನಿಂತಿದ್ದಾರೆ ಕೂಡ.

ಇಂಥ ದಿಗಂತ್ ಗೆದ್ದಾಗ ಹಿಗ್ಗಲಿಲ್ಲ. ಸೋತಾಗ ಕುಗ್ಗಲಿಲ್ಲ. ಯಾಕೆಂದರೆ ದಿಗಂತ್ ಯಾವತ್ತೂ ತಾವೊಬ್ಬ ''ಸ್ಟಾರ್'' ಎಂಬ ಅಮಲನ್ನ ನೆತ್ತಿಗೇರಿಸಿಕೊಳ್ಳಲಿಲ್ಲ. ಬದಲಿಗೆ ತಾವೊಬ್ಬ ''ಪರ್ಫಾಮರ್'' ಎಂದೇ ಭಾವಿಸಿ, ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನ ಮಾಡಿದ್ದಾರೆ. ಸಿನಿಮಾ ಮೇಲಿನ ಪ್ರೀತಿಯಿಂದ ಚಿತ್ರವನ್ನ ಒಪ್ಪಿಕೊಂಡು ತಮ್ಮ ಕೆಲಸವನ್ನ ಅಚ್ಚು ಕಟ್ಟಾಗಿ ಮಾಡುತ್ತಾ ಬಂದಿದ್ದಾರೆ. ಆದರೆ ದಿಗಂತ್ ಅವರ ಈ ''ಪ್ರಾಮಾಣಿಕತೆ'' ಹಾಗೂ ''ಬದ್ಧತೆ''ಯನ್ನ ಕೆಲವರು ಇಲ್ಲಿ ''ಮಿಸ್ ಯೂಸ್'' ಮಾಡಿಕೊಂಡ ಉದಾಹರಣೆಗಳೂ ಕೂಡ ಇವೆ. ಇದಕ್ಕೆ ಸಾಕ್ಷಿ ಎನ್ನುವಂತೆ ದಿಗಂತ್ ತಮ್ಮ ಈ 18 ವರ್ಷದ ಸುಧೀರ್ಘ ವೃತ್ತಿ ಜೀವನದಲ್ಲಿ ಕಲಿತ ಕೆಲ ''ಪಾಠ''ಗಳನ್ನ ಹೇಳಿದ್ದಾರೆ.
ಹೌದು, ''ಮಿಸ್ ಕ್ಯಾಲಿಪೋರ್ನಿಯಾ''ದಿಂದ ''ಮಾರಿ ಗೋಲ್ಡ್'' ವರೆಗೆ ದಿಗಂತ್ ಗೆ ಚಿತ್ರರಂಗದಲ್ಲಿ ಅನೇಕ ಅನುಭವಗಳಾಗಿವೆ. ಕನ್ನಡ ಚಿತ್ರರಂಗದ ಹಿರಿಯ ಪತ್ರಕರ್ತ ಬಿ.ಗಣಪತಿ ಅವರ ಯುಟ್ಯೂಬ್ ಚಾನೆಲ್ ನಲ್ಲಿ ತಮ್ಮ ಮುಂಬರುವ ಚಿತ್ರ ಮಾರಿ ಗೋಲ್ಡ್ ''ಪ್ರಚಾರ''ದ ಸಮಯದಲ್ಲಿ ಮಾತನಾಡಿರುವ ದಿಗಂತ್ , ಕೆಲವರು ''ಅಂಗೈಯಲ್ಲಿಯೇ ಆಕಾಶ'' ತೋರಿಸಿ ನನ್ನ ನಂಬಿಸಿದವರು ಇದ್ದಾರೆ. ಟಿಪಿಕಲ್ ಗಾಂಧಿನಗರದ ಶೈಲಿಯಲ್ಲಿ ಈ ಚಿತ್ರ ಹಾಗೇ ಹೀಗೆ ಎಂದೆಲ್ಲ ಬಿಲ್ಡಪ್ ಕೊಟ್ಟು ಆ ನಂತರ ಕಥೆಯನ್ನ ಸರಿಯಾಗಿ ಕಾರ್ಯರೂಪಕ್ಕೆ ತರದೇ ಆ ಚಿತ್ರವನ್ನ ಹಾಳು ಮಾಡಿದವರು ಇದ್ದಾರೆ ಎಂದಿದ್ದಾರೆ. ಅವರ ರೋಷಾವೇಷ, ಹುಮ್ಮಸ್ಸು ನೋಡಿ ಕೆಲಸದಲ್ಲಿ ಇವರು ''ಹುಲಿ'' ಎಂದು ಒಪ್ಪಿಕೊಂಡು ಅನೇಕ ಸಿನಿಮಾ ಮಾಡಿದೆ, ಆದರೆ ಆ ನಂತರ ಅಲ್ಲಿರುವುದು ''ಇಲಿ'' ಎಂದು ನನಗೆ ಮನವರಿಕೆಯಾಗುತ್ತಿತ್ತು ಅಂದಿದ್ದಾರೆ.

ಇನ್ನೂ ಸಂಭಾವನೆ ವಿಚಾರದಲ್ಲಿ ನಾನು ಯಾವತ್ತು ಡಿಮ್ಯಾಂಡ್ ಮಾಡಿದವನು ಅಲ್ಲ ಆದರೂ ಕೂಡ, ಈ ಹಿಂದೆ ನನ್ನ ಬಳಿ ಅನೇಕರು ಬಂದಿದ್ದು ಚಿತ್ರ ಮಾಡುವ ಉದ್ದೇಶದಿಂದ ಅಲ್ಲ, ಬದಲಿಗೆ ದಿಗಂತ್ ಅವರನ್ನ ಮುಂದಿಟ್ಟುಕೊಂಡು ಏನೆಲ್ಲ ವ್ಯಾಪಾರ ಮಾಡಬಹುದು ಎಂಬ ವ್ಯವಹಾರಿಕ ಉದ್ದೇಶದಿಂದ ಎಂದಿದ್ದಾರೆ. ಬದುಕಿನ ಅನಿವಾರ್ಯತೆಯ ಕಾರಣ ನಾನು ಕೂಡ ಹಿಂದೆ ಕೇವಲ ದುಡ್ಡಿಗಾಗಿಯೇ ಸಿನಿಮಾ ಮಾಡಿದ್ದು ಇದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ ದಿಗಂತ್
ಆದರೆ ಈಗ ದಿಗಂತ್ ಬದಲಾಗಿದ್ದಾರೆ. ದುಡ್ಡು ಮಾಡುವ ಉದ್ಧೇಶದಿಂದ ಬರುವವರಿಂದ ಅಂತರವನ್ನ ಕಾಪಾಡಿಕೊಳ್ಳುತ್ತಿದ್ದಾರೆ. ಸಂಭಾವನೆ ಕಡಿಮೆ ಸಿಕ್ಕರೂ ಚಿಂತೆ ಇಲ್ಲ ಸಿನಿಮಾದ ಹಸಿವು ಇರುವ ಪ್ರತಿಭಾವಂತರ ಜೊತೆ ಅಷ್ಟೇ ಕೆಲಸ ಮಾಡುವ ಆಲೋಚನೆ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇದೇ ಪಾಲಿಸಿಯನ್ನ ಪಾಲಿಸಿಕೊಂಡು ಬರುತ್ತಿದ್ದಾರೆ.
ಒಟ್ನಲ್ಲಿ ಗಾಂಧಿನಗರದ ಕರಾಮತ್ತೇ ಹಾಗೇ.. ಅದು ಮ್ಯೂಸಿಕಲ್ ಚೇರ್ ಇದ್ದಾಂಗೆ. ಸೀಟು ಸಿಕ್ರೆ ಸೀರುಂಡೆ. ಇದಕ್ಕೆ ದಿಗಂತ್ ಅವರ ಅನುಭವದ ಮಾತುಗಳೇ ಸಾಕ್ಷಿ


Click it and Unblock the Notifications











