»   » ಈ ವಾರ ತೆರೆಗೆ ದಿಗ್ಗಜರು, ಮಹಾಲಕ್ಷ್ಮೀ

ಈ ವಾರ ತೆರೆಗೆ ದಿಗ್ಗಜರು, ಮಹಾಲಕ್ಷ್ಮೀ

Posted By: Staff
Subscribe to Filmibeat Kannada

ಜನವರಿ 26ರ ಶುಕ್ರವಾರ ಗಣರಾಜ್ಯೋತ್ಸವದ ಕೊಡುಗೆಯಾಗಿ ತೆರೆ ಕಾಣುತ್ತಿರುವ 'ಮಹಾಲಕ್ಷ್ಮೀ" ಹಾಗೂ 'ದಿಗ್ಗಜರು" ಕನ್ನಡ ಚಿತ್ರ ರಸಿಕರನ್ನು ಕೈಬೀಸಿ ಕರೆಯುತ್ತಿದ್ದಾರೆ. ಭಾರಿ ನಿರೀಕ್ಷೆ ಹುಟ್ಟಿಸಿರುವ 'ದಿಗ್ಗಜರು" ಗಣರಾಜ್ಯೋತ್ಸವದ ದಿನ ಬಿಡುಗಡೆ ಆಗುತ್ತಾರೆ ಎಂಬುದು ಖಚಿತವಾಗಿತ್ತಾದರೂ, 'ಮಹಾಲಕ್ಷ್ಮೀ" ಅಂದೇ ತೆರೆಗೆ ಬರುತ್ತಾಳೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

ಈ ಮಧ್ಯೆ 'ದಿಗ್ಗಜರು" ಚಿತ್ರದಲ್ಲಿ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅದ್ಭುತವಾಗಿ ನಟಿಸಿದ್ದಾರೆ ಎಂಬ ಸುದ್ದಿಗಳು ಸ್ಯಾಂಡಲ್‌ವುಡ್‌ನಿಂದ ಬಂದಿದೆ. ಸಾಹಸ ಸಿಂಹ ವಿಷ್ಣು ಕೂಡ ದ್ವಿಪಾತ್ರದಲ್ಲಿ ಮಿಂಚಿದ್ದಾರಂತೆ. ದ್ವಿತೀಯಾರ್ಧದಲ್ಲಿ ಪ್ರಬುದ್ಧನ ಪಾತ್ರದಲ್ಲಿ ವಿಷ್ಣುವರ್ಧನ್‌ ಎಂಟ್ರಿ ಕೊಟ್ಟ ನಂತರ ಚಿತ್ರ ಹೊಸ ತಿರುವು ಪಡೆದಿದೆಯಂತೆ. ಅಲ್ಲಿಂದಲೇ ಚಿತ್ರ ನೋಡುವಂತಿರುವುದು ಎಂಬ ಮಾತೂ ಕೇಳಿಬಂದಿದೆ.

ವಿರಾಮದವರೆಗೂ ಕೊಂಚ ಬೋರು ಹೊಡೆಸುವ ಚಿತ್ರ ವಿರಾಮಾನಂತರ ಬಹಳ ಜೋರಾಗಿದೆ ಎನ್ನುತ್ತಾರೆ ಬಿಡುಗಡೆ ಪೂರ್ವ ಪ್ರದರ್ಶನ ನೋಡಿದ ಸ್ಯಾಂಡಲ್‌ವುಡ್‌ ಮಂದಿ. ಯಾರ ಅಭಿಪ್ರಾಯ ಏನೇ ಇರಲಿ ವಿಷ್ಣು, ಅಂಬಿ ಇಮೇಜ್‌ ಮೇಲೆ ಚಿತ್ರ ಓಡುವುದಂತೂ ಗ್ಯಾರಂಟಿ ಎನ್ನುವವರೂ ಇದ್ದಾರೆ.

ಡಿ. ರಾಜೇಂದ್ರಬಾಬು ನಿರ್ದೇಶಿಸಿರುವ ಈ ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ, ಪಿ.ಎಚ್‌.ಕೆ. ದಾಸ್‌ ಛಾಯಾಗ್ರಹಣ, ಹಂಸಲೇಖರ ಸಾಹಿತ್ಯ ಇದೆ. ವಿಷ್ಣುವರ್ಧನ್‌, ಅಂಬರೀಶ್‌ ಜತೆಯಲ್ಲಿ ಲಕ್ಷ್ಮೀ, ಸಾಂಘವಿ, ತಾರಾ, ಜ್ಯೋತಿ, ದೊಡ್ಡಣ್ಣ, ಉಮಾಶ್ರೀ, ರೇಷ್ಮಾ, ಸುಂದರ್‌ರಾಜ್‌ ಇದ್ದಾರೆ.

ವಂದೇಮಾತರಂ ಎತ್ತಂಗಡಿ: ಈ ಮಧ್ಯೆ ಫೈರ್‌ಬ್ರಾಂಡ್‌ ವಿಜಯಶಾಂತಿ, ಅಂಬರೀಶ್‌ ಅಭಿನಯದ 'ವಂದೇ ಮಾತರಂ" ಒಂದೇ ವಾರದಲ್ಲಿ ಕೆಲವು ಚಿತ್ರಮಂದಿರಗಳಿಂದ ಎತ್ತಂಗಡಿ ಆಗಿದೆ. 'ಮಹಾಲಕ್ಷ್ಮೀ ಹಾಗೂ ದಿಗ್ಗಜರ" ಬಿಡುಗಡೆಯಿಂದ ಹೀಗಾಗಿದೆಯೇ ಹೊರತು, ಚಿತ್ರ ಕಳಪೆಯಾಗಿಲ್ಲ ಎಂಬುದು ವಂದೇ ಮಾತರಂ ಬಳಗದ ವಾದ. ಈ ಚಿತ್ರದಿಂದ ಜಯಶ್ರೀ ಅವರು ಹತ್ತಿರ ಹತ್ತಿರ ಒಂದು, ಒಂದೂವರೆ ಕೋಟಿ ರುಪಾಯಿ ಕಳೆದು ಕೊಳ್ಳುವ ಸಾಧ್ಯತೆಯೂ ಇದೆ ಎನ್ನುತ್ತಿದ್ದಾರೆ ಸ್ಯಾಂಡಲ್‌ವುಡ್‌ ಪಂಡಿತರು.

ಮಹಾಲಕ್ಷ್ಮಿಗೆ ಲಕ್ಷ್ಮೀ ಕಟಾಕ್ಷ ಪ್ರಾಪ್ತವಾದೀತೆ?:ಧನದೇವತೆ ಲಕ್ಷ್ಮೀಯ ದಿನವೇ (ಶುಕ್ರವಾರ) ತೆರೆ ಕಾಣುತ್ತಿರುವ ಮಹಾಲಕ್ಷ್ಮೀ ಚಿತ್ರದ ಬಿಡುಗಡೆ ಪೂರ್ವ ಪ್ರದರ್ಶನ ಗುರುವಾರ ಸ್ವಪ್ನ ಚಿತ್ರಮಂದಿರದಲ್ಲಿ ನಡೆಯಿತು. ಸಂಜೆ ಹೊತ್ತಿಗೆ ಬಂದ ವರದಿಗಳು ಹೀಗಿವೆ : ಇಂಟರ್‌ವಲ್‌ ತನಕ ಸ್ಲೂ ಆಗಿ ಸಾಗುವ ಚಿತ್ರ ಆನಂತರ ಸೂಪರ್‌ ಸ್ಲೂ ಆಗಿ ಪ್ರೇಕ್ಷಕರಿಗೆ ಬೋರು ಹೊಡೆಸುವಂತಿದೆಯಂತೆ.

ಒಂದು ಕಡೆ 50 ದಿನಕಂಡು, ಎಲ್ಲ ಪ್ರೇಕ್ಷಕರನ್ನೂ ತನ್ನತ್ತಲೇ ಸೆಳೆಯುತ್ತಿರುವ ಯಜಮಾನ ಮತ್ತೊಂದೆಡೆ, ದಿಗ್ಗಜರು. ಈ ಇಬ್ಬರ ನಡುವೆ ಮಹಾಲಕ್ಷ್ಮೀ ಗೆ ಲಕ್ಷ್ಮೀ ಕಟಾಕ್ಷ ಪ್ರಾಪ್ತವಾದೀತೆ ಎಂಬ ಪ್ರಶ್ನೆ. ಇದಕ್ಕೆ ಪ್ರೇಕ್ಷಕರು ಮಾತ್ರ ಉತ್ತರಿಸಲು ಸಾಧ್ಯ.

ಶ್ರುತಿ, ರಮೇಶ್‌, ಕುಮಾರ್‌ ಗೋವಿಂದ್‌ ಅಭಿನಯದ ಮಹಾಲಕ್ಷ್ಮೀ - ನರ್ತಕಿ, ಉಮಾ, ಶಾಂತಿ, ಗೀತಾಂಜಲಿ, ನಂದಿನಿ, ವಿಶಾಲ್‌, ಮಾರುತಿ ಮೊದಲಾದ ಚಿತ್ರಮಂದಿರಗಳನ್ನು ತುಂಬುತ್ತಿದ್ದಾಳೆ.

ನಿರ್ದೇಶಕ ಕಟ್ಟೆ ರಾಮಚಂದ್ರ ತಮ್ಮ ಗೆಳೆಯ ಕೆ. ಮದನ್‌ಲಾಲ್‌ ಜತೆಗೂಡಿ ಗ್ಲೋರಿಯಾ ರಾಕೇಶ್‌ ಸಿನಿ ಸರ್ಕ್ಯೂಟ್‌ ಲಾಂಛನದಲ್ಲಿ ನಿರ್ಮಿಸಿರುವ ಈ ಚಿತ್ರದ ಧ್ವನಿಸುರುಳಿಯನ್ನು ಇತ್ತೀಚೆಗಷ್ಟೇ ಸಂತೋಷ್‌ ಚಿತ್ರಮಂದಿರದಲ್ಲಿ ಖ್ಯಾತ ಕ್ರಿಕೆಟ್‌ ಕಲಿ ವಿಜಯ್‌ ಭಾರದ್ವಾಜ್‌ ಬಿಡುಗಡೆ ಮಾಡಿದ್ದರು.

ಕಾರ್ತಿಕ್‌ ರಘುನಾಥ್‌ ನಿರ್ದೇಶಿಸಿರುವ ಈ ಚಿತ್ರಕ್ಕೆ ಗೋವರ್ಧನ್‌ ಸಂಗೀತ ಇದೆ. ತಾರಾಗಣದಲ್ಲಿ ರಮೇಶ್‌, ಶ್ರುತಿ, ಕುಮಾರ್‌ ಗೋವಿಂದು, ಶ್ರೀನಾಥ್‌, ಜಯಂತಿ, ವಾಣಿಶ್ರೀ, ಮಂಡ್ಯ ರಮೇಶ್‌, ಆಶಾಲತಾ, ಆರ್‌.ಕೆ. ನಾಯಕ್‌ ಇದ್ದಾರೆ.
(ಇನ್ಫೋ ವಾರ್ತೆ)

English summary
Mahalakshmi and Diggajaru on big screen tomorrow

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada