»   » ಗಣರಾಜ್ಯೋತ್ಸವಕ್ಕೆ ಮೊದಲೇ ದಿಗ್ಗಜರ ಬಿಡುಗಡೆ

ಗಣರಾಜ್ಯೋತ್ಸವಕ್ಕೆ ಮೊದಲೇ ದಿಗ್ಗಜರ ಬಿಡುಗಡೆ

Posted By: Staff
Subscribe to Filmibeat Kannada

ಚಿಕ್ಕ ಪುಟ್ಟ ಪಾತ್ರಗಳಲ್ಲಿ ಹಲವು ಕನ್ನಡ ಚಲನ ಚಿತ್ರಗಳಲ್ಲಿ ಮುಖ ತೋರಿಸಿ, ಹಾಲಿ ಯಶಸ್ವೀ ನಿರ್ಮಾಪಕರೆನಿಸಿಕೊಂಡಿರುವ ರಾಕ್‌ಲೈನ್‌ ವೆಂಕಟೇಶ್‌ ಅವರು ಸಾಹಸಸಿಂಹ ವಿಷ್ಣುವರ್ಧನ್‌, ರೆಬೆಲ್‌ ಸ್ಟಾರ್‌ ಅಂಬರೀಶ್‌ ಅಭಿನಯದ ದಿಗ್ಗಜರನ್ನು ಗಣರಾಜ್ಯೋತ್ಸವ ಹಾಗೂ ಸಂಕ್ರಾಂತಿಯ ಕೊಡುಗೆಯಾಗಿ ಕನ್ನಡಿಗರಿಗರ್ಪಿಸಲು ಹರ ಸಾಹಸವನ್ನೇ ಮಾಡುತ್ತಿದ್ದಾರೆ.

ರಾಜ್‌ಕುಮಾರ್‌ ಅಪಹರಣವಾದ ದಿನದಿಂದ ರಾಜ್‌ಬಿಡುಗಡೆಯವರೆಗೂ ಸತತವಾಗಿ ಕಾಡು - ನಾಡು (ಕೋರ್ಟ್‌) ವಿಧ್ಯಮಾನಗಳನ್ನು ಗಮನಿಸಿಕೊಂಡು ರಾಜ್‌ಕುಮಾರ್‌ ಬಿಡುಗಡೆಗೆ ತಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸಿದ ರಾಕ್‌ಲೈನ್‌ ಈಗ ದಿಗ್ಗಜರನ್ನು ಗಣರಾಜ್ಯೋತ್ಸವಕ್ಕೆ ಮೊದಲೆ ಬಿಡುಗಡೆ ಗೊಳಿಸಲು ಶತಾಯಗತಾಯ ಪ್ರಯತ್ನಗಳನ್ನು ನಡೆಸಿದ್ದಾರೆ.

ಡಿ. ರಾಜೇಂದ್ರಬಾಬು ನಿರ್ದೇಶನದ ಈ ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ, ಪಿ.ಎಚ್‌.ಕೆ. ದಾಸ್‌ ಛಾಯಾಗ್ರಹಣ, ಹಂಸಲೇಖರ ಸಾಹಿತ್ಯ ಇದೆ. ವಿಷ್ಣುವರ್ಧನ್‌ ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರದಲ್ಲಿ ಅಂಬರೀಶ್‌, ಲಕ್ಷ್ಮೀ, ಸಾಂಘವಿ, ತಾರಾ, ಜ್ಯೋತಿ, ದೊಡ್ಡಣ್ಣ, ಉಮಾಶ್ರೀ, ರೇಷ್ಮಾ, ಸುಂದರ್‌ರಾಜ್‌ ನಟಿಸಿದ್ದಾರೆ.

ಹುಚ್ಚನ ಚಿತ್ರೀಕರಣ : ತಮಿಳಿನ ಸೇತು ಕನ್ನಡದ ಹುಚ್ಚನಾಗಿದ್ದಾನೆ. ಸ್ಪರ್ಶ ಖ್ಯಾತಿಯ ಸುದೀಪ್‌, ರೇಖಾ, ಅವಿನಾಶ್‌, ಬೇಬಿ ರಕ್ಷಾ, ವೆಂಕಟರಾವ್‌ ಮೊದಲಾದವರ ತಾರಾಗಣದ ಈ ಚಿತ್ರಕ್ಕೆ ರಾಜ್ಯದ ನಾನಾ ಭಾಗಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಮಂಚನ ಬೆಲೆ ಜಲಾಶಯದ ಬಳಿ ನಾಯಕ ಸುದೀಪ್‌ - ಖಳನಾಯಕರ ಗುಂಪಿನೊಡನೆ ಹೊಡೆದಾಡುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿದ್ದರೆ, ಚನ್ನಪಟ್ಟಣದ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ, ಅನಿರೀಕ್ಷಿತ ಜೇನು ದಾಳಿಯಿಂದ ಚಿತ್ರತಂಡದ ಸಹಾಯಕ ಕ್ಯಾಮರಾಮನ್‌ ಭಾನುವಾರ ಸಾವನ್ನಪ್ಪಿದ್ದು, ಐವರಿಗೆ ತೀವ್ರತರವಾದ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಈಗ ಚಿತ್ರೀಕರಣಕ್ಕೆ ಕೊಂಚ ಹಿನ್ನಡೆಯುಂಟಾಗಿದೆ.

ಎಂ.ಎಸ್‌. ರಮೇಶ್‌ ಸಂಭಾಷಣೆ, ಅಣಜಿ ನಾಗರಾಜ್‌ ಛಾಯಾಗ್ರಹಣ, ಕೆ.ಡಿ. ವೆಂಕಟೇಶ್‌ ಸಾಹಸ ಸಂಯೋಜನೆ, ಓಂ ಪ್ರಕಾಶ್‌ ರಾವ್‌ ನಿರ್ದೇಶನ ಚಿತ್ರಕ್ಕಿದೆ.

English summary
Kannada cineam shooting round up

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada