'ದಿಲ್ ಕಾ ರಾಜಾ'ನಿಗೆ ಮರುಜನ್ಮ ಕೊಡ್ತಾರಾ ರಮ್ಯಾ?
ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿರುವಾಗಲೇ ರಾಜಕಾರಣಕ್ಕೆ ಧುಮುಕಿ ನಟಿ ರಮ್ಯಾ, ಈಗ ಅತ್ತ ರಾಜಕಾರಣಿಯೂ ಆಗದೆ, ಇತ್ತ ಮತ್ತೆ ಬಣ್ಣ ಹಚ್ಚೋಕೂ ಆಗದೆ, ಭಾರತವನ್ನೇ ಬಿಟ್ಟು ಸೀದಾ ಲಂಡನ್ ಗೆ ಹಾರಿ ಬಿಟ್ಟಿದ್ದಾರೆ.
ರಾಜಕೀಯ ಶಾಸ್ತ್ರವನ್ನ ಪಠಣ ಮಾಡುತ್ತಿರುವ ರಮ್ಯಾ, ಏಪ್ರಿಲ್ ರಜಾ ವೇಳೆಯಲ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಹಾಗಂತ ಮೊನ್ನೆಯಷ್ಟೇ ಟ್ವಿಟ್ಟರ್ ನಲ್ಲಿ 'ಲಕ್ಕಿ ಸ್ಟಾರ್' ಬ್ರೇಕಿಂಗ್ ಕೊಟ್ಟಿದ್ದರು. [ಏಪ್ರಿಲ್ ನಲ್ಲಿ ರಮ್ಯಾ ಪ್ರತ್ಯಕ್ಷ, ಟ್ವಿಟ್ಟರ್ ನಲ್ಲಿ ಬ್ರೇಕಿಂಗ್!]
ಕಾಡ್ಗಿಚ್ಚಿನಂತೆ ಹಬ್ಬಿದ ಈ ಸುದ್ದಿಯಿಂದ ಗಾಂಧಿನಗರದ ಕೆಲ ನಿರ್ಮಾಪಕರ ಮೊಗದಲ್ಲಿ ಮಂದಹಾಸ ಮೂಡಿದೆ. ರಮ್ಯಾ ಕಾಲ್ ಶೀಟ್ ಗಾಗಿ ವರ್ಷಗಳಿಂದಲೂ ಕಾಯುತ್ತಿದ್ದ ನಿರ್ಮಾಪಕ-ನಿರ್ದೇಶಕರು ನಿಟ್ಟುಸಿರು ಬಿಡುವಂತಾಗಿದೆ.

ಏಕಾಏಕಿ ಲಂಡನ್ ಗೆ ಫ್ಲೈಟ್ ಹತ್ತಿದ ರಮ್ಯಾ, ಫೋನಿಗಾಗಲಿ, ಮೆಸೇಜ್ ಗಾಗಲಿ ಸಿಗುತ್ತಿರಲಿಲ್ಲ. ಒಂದು ವರ್ಷದಿಂದ ಆಕೆ, ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗಲೆ.
ಹೀಗಾಗಿ ಯಾವುದೇ ಸಂವಹನ ಇಲ್ಲದೆ ಕಂಗಾಲಾಗಿದ್ದ ನಿರ್ಮಾಪಕರಿಗೆ 'ರಮ್ಯಾ ಏಪ್ರಿಲ್ ನಲ್ಲಿ ಮರಳುತ್ತಿರುವ ಸುದ್ದಿ ಬೆಲ್ಲ ತಿಂದಷ್ಟೇ ಖುಷಿ ಕೊಟ್ಟಿದೆ'. ಅದರಲ್ಲೂ 'ದಿಲ್ ಕಾ ರಾಜಾ' ನಿರ್ದೇಶಕ ಸೋಮನಾಥ್ ಪಾಟೀಲ್ ರವರಿಗೆ ಈ ವಿಷಯ ಮರಳುಗಾಡಲ್ಲಿ ಓಯಾಸಿಸ್ ಸಿಕ್ಕಂತಾಗಿದೆ.
ಎರಡು ವರ್ಷಗಳಿಂದ ನಿಂತಲ್ಲೇ ನಿಂತಿರುವ 'ದಿಲ್ ಕಾ ರಾಜಾ' ಸಿನಿಮಾ ರಮ್ಯಾ ಕೃಪಾಕಟಾಕ್ಷದಿಂದ ಕಂಪ್ಲೀಟ್ ಆಗಬೇಕಿದೆ. 2013 ರಲ್ಲಿ ಸೆಟ್ಟೇರಿದ 'ದಿಲ್ ಕಾ ರಾಜಾ' ಚಿತ್ರದ ಕ್ಲೈಮ್ಯಾಕ್ಸ್ ಭಾಗ ಇನ್ನೂ ಪೆಂಡಿಂಗ್ ನಲ್ಲಿದೆ. ಹಾಡುಗಳ ಚಿತ್ರೀಕರಣಕ್ಕೆ ರಮ್ಯಾ ಇಲ್ಲದ ಕಾರಣ ಚಾಲನೆ ಸಿಕ್ಕಿಲ್ಲ.
ರಮ್ಯಾ ಈಗ ಬರುತ್ತಾರೆ, ಇನ್ನು ಕೆಲವೇ ದಿನಗಳಲ್ಲಿ ವಾಪಸ್ಸಾಗುತ್ತಾರೆ ಅಂತ ಕಾದು ಕಾದು ನಿರ್ದೇಶಕ ಸೋಮನಾಥ್ ಪಾಟೀಲ್ ಸುಸ್ತಾಗಿದ್ದರು. ಹಾಗೊಂದು ವೇಳೆ, ಏಪ್ರಿಲ್ ನಲ್ಲಿ ರಮ್ಯಾ ಮರಳಿ ಬಂದರೆ, ತಕ್ಷಣ ಮೇಡಂ ಅವರು ಶೂಟಿಂಗ್ ಗೆ ಚಾಲನೆ ನೀಡುತ್ತಾರೆ ಅಂತ ಭಾವಿಸುವುದು ತಪ್ಪು. [ಅಭಿಮಾನಿಗಳಿಗೆ ಬಕೆಟ್ ತಣ್ಣೀರೆರಚಿದ ನಟಿ ರಮ್ಯಾ]
ಮೊದಲು ಮಾತುಕತೆ, ನಂತರ ಡೇಟ್ಸ್, ಆಮೇಲೆ ಶೂಟಿಂಗ್! ಇಷ್ಟೆಲ್ಲಾ ಇದ್ದರೂ, ರಮ್ಯಾ ಮುಖ ತೋರಿಸಿದರೆ ಸಾಕು ಅನ್ನೋದು ಸೋಮನಾಥ್ ಪಾಟೀಲ್ ಸೇರಿದಂತೆ ಅನೇಕ ನಿರ್ಮಾಪಕರು-ನಿರ್ದೇಶಕರುಗಳ ಕನವರಿಕೆ ಆಗಿದೆ. ಇದಕ್ಕೆ ರಮ್ಯಾ ತಥಾಸ್ತು ಅನ್ನಬೇಕಷ್ಟೆ.


Click it and Unblock the Notifications











