ಜೈಲಿನಲ್ಲಿರುವ ಅಣ್ಣ ದರ್ಶನ್ ಜೊತೆ ಹೊಸ ಸಿನಿಮಾ ಘೋಷಿಸಿದ ದಿನಕರ್ ತೂಗುದೀಪ
ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಯಾವಾಗ ಬಿಡುಗಡೆಯಾಗಿ ಹೊರ ಬರುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಜಾಮೀನು ಸಿಕ್ಕಿ ಆದಷ್ಟು ಬೇಗ ವಾಪಸ್ ಬರ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಹುಟ್ಟುಹಬ್ಬದ ದಿನ ಅಭಿಮಾನಿಗಳು ನೆಚ್ಚಿನ ನಟನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಮನೆಯಲ್ಲಿ ಇಲ್ಲದೇ ಇದ್ದರೂ ಕೆಲ ಅಭಿಮಾನಿಗಳು ಆರ್‌ಆರ್ ನಗರದಲ್ಲಿರುವ ಅವರ ನಿವಾಸದ ಬಳಿಗೆ ಹೋಗಿದ್ದಾರೆ.
'ಡೆವಿಲ್' ಸಿನಿಮಾ ಬಳಿಕ ದರ್ಶನ್ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. ಎರಡ್ಮೂರು ಸಿನಿಮಾಗಳಲ್ಲಿ ನಟಿಸೋಕೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ ಯಾವಾಗ ಆ ಸಿನಿಮಾಗಳು ಶುರುವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. 'ಡೆವಿಲ್' ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಬೇಕಿದೆ. ನಂತರ ತರುಣ್ ಸುಧೀರ್ ಕಾಂಬಿನೇಷನ್ ಸಿನಿಮಾ ಶುರುವಾಗಬೇಕಿದೆ. ಇದೆಲ್ಲದರ ನಡುವೆ ಅಣ್ಣನ ಜೊತೆ ದಿನಕರ್ ಹೊಸ ಸಿನಿಮಾ ಘೋಷಿಸಿದ್ದಾರೆ.

ಮಹಾಶಿವರಾತ್ರಿ ಹಾಗೂ ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಸಿನಿಮಾ ಘೋಷಿಸಿ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಿದ್ದಾರೆ. ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯಕ್ಕೆ ಪ್ರೊಡಕ್ಷನ್ ನಂ.14 ಹೆಸರಿನಲ್ಲಿ ಸಿನಿಮಾ ಕೆಲಸಗಳು ನಡೀತಿದೆ. 'ರಾಯಲ್' ಬಳಿಕ ದಿನಕರ್ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. ದರ್ಶನ್ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿ ಆಗಿರುವಂತೆ ಕಾಣ್ತಿದೆ.
ಅಂದಹಾಗೆ ಪ್ರೊಡಕ್ಷನ್ ನಂ.14 ಚಿತ್ರವನ್ನು ರಮೇಶ್ ಪಿ ಪಿಳೈ ನಿರ್ಮಾಣ ಮಾಡಲಿದ್ದಾರೆ. ದಿನಕರ್‌ಗೆ ಚಿಂತನ್ ಹಾಗೂ ಅಭಿನವ್ ತೇಜಾ ಸಾಥ್ ಕೊಡುತ್ತಿದ್ದಾರೆ. 'ಚಕ್ರವರ್ತಿ' ಚಿತ್ರಕ್ಕೆ ಚಿಂತನ್ ಆಕ್ಷನ್ ಕಟ್ ಹೇಳಿದ್ದರು. ಅದಕ್ಕೂ ಮುನ್ನ 'ನವಗ್ರಹ' ಚಿತ್ರಕ್ಕೆ ಅವರು ಕೆಲಸ ಮಾಡಿದ್ದರು. ಎರಡು ವರ್ಷಗಳ ಹಿಂದೆ ದರ್ಶನ್ ನಟಿಸಿದ್ದ 'ಕಾಟೇರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ತಡವಾಗಿ ಬಂದಿದ್ದ 'ಡೆವಿಲ್' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಮನಗೆಲ್ಲಲಿಲ್ಲ. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡಿತ್ತು.

'ಜೊತೆಜೊತೆಯಲಿ' ಸಿನಿಮಾ ಮೂಲಕ ದಿನಕರ್ ಸ್ವತಂತ್ರ ನಿರ್ದೇಶಕರಾಗಿದ್ದರು. ದರ್ಶನ್ ಈ ಸಿನಿಮಾ ನಿರ್ಮಿಸಿದ್ದರು. ಬಳಿಕ 'ನವಗ್ರಹ' ಹಾಗೂ 'ಸಾರಥಿ' ಚಿತ್ರಗಳಲ್ಲಿ ಅಣ್ಣನನ್ನು ನಿರ್ದೇಶನ ಮಾಡಿದ್ದರು. ಇದೀಗ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ ಪ್ಲ್ಯಾನ್ ನಡೀತಿದೆ. ದರ್ಶನ್ ಮೇಲಿನ ಆರೋಪಗಳೆಲ್ಲಾ ಸುಳ್ಳಾಗಿ ಜೈಲಿನಿಂದ ಬಿಡುಗಡೆ ಆಗಿ ಬರ್ತಾರೆ ಎಂದು ಆಪ್ತರು, ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗಾಗಿ ಮುಂದಿನ ಸಿನಿಮಾಗಳ ಬಗ್ಗೆ ಲೆಕ್ಕಾಚಾರ ಶುರುವಾಗಿದೆ.
ದರ್ಶನ್ ನಟಿಸಿ 57ನೇ ಸಿನಿಮಾ 'ಡೆವಿಲ್'. ಮುಂದೆ ಪ್ರೇಮ್ ಜೊತೆ ಮಾಡಬೇಕಿರುವುದು 58ನೇ ಸಿನಿಮಾ. ಬಳಿಕ ತರುಣ್ ಜೊತೆ ಸಿಂಧೂರ ಲಕ್ಷ್ಮಣ ಬಯೋಪಿಕ್ ಸಿನಿಮಾ ತಯಾರಾಗಬೇಕಿದೆ. ಆ ನಂತರ ದಿನಕರ್ ಸಿನಿಮಾ ಶುರುವಾಗಬಹುದು. ಅದಕ್ಕಿಂತ ಮುನ್ನ ಆರಂಭವಾದರೂ ಅಚ್ಚರಿ ಪಡಬೇಕಿಲ್ಲ. ದರ್ಶನ್ ಹಾಗೂ ದಿನಕರ್ ಕಾಂಬಿನೇಷನ್ ಬಗ್ಗೆ ಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆಯಿದೆ.
'ನವಗ್ರಹ' ಸೀಕ್ವೆಲ್ ಮಾಡಿ ಎಂದು ಪದೇ ಪದೆ ದಿನಕರ್ ಬಳಿ ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ ದರ್ಶನ್ ಹಾಗೂ ದಿನಕರ್ ಇಬ್ಬರಿಗೂ ಸೀಕ್ವೆಲ್ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ. ಇನ್ನು ಬಹಳ ಹಿಂದೆಯೇ ಸಹೋದರರ ಕಾಂಬಿನೇಷನ್‌ನಲ್ಲಿ 'ಸರ್ವಾಂತರ್ಯಾಮಿ' ಎಂಬ ಸಿನಿಮಾ ಬರುವುದಾಗಿ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಇದೀಗ ನಿರ್ದೇಶಕ ದಿನಕರ್ ಹೊಸ ಸಿನಿಮಾ ಘೋಷಿಸಿದ್ದು ಯಾವ ರೀತಿಯ ಕಥೆ ತೆರೆಗೆ ತರ್ತಾರೆ ಎಂದು ಕಾದು ನೋಡಬೇಕಿದೆ.


Click it and Unblock the Notifications











