ಕೆಜಿಎಫ್‌ನ ಬಾಂಬೆ ಡಾನ್ ದಿನೇಶ್ ಮಂಗಳೂರು ನಿಧನ
ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ಹೀಗೆ ಭಾರತೀಯ ಚಿತ್ರರಂಗಕ್ಕೆ ಸೇವೆಯನ್ನು ಸಲ್ಲಿಸಿ, ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದೆ. ಹೀಗಿರುವಾಗ ಇದೀಗ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು ಕೆ.ಜಿ.ಎಫ್‌ನ ಬಾಂಬೆ ಡಾನ್ ಮತ್ತು ತಮ್ಮ ಕಲಾ ನಿರ್ದೇಶನದಿಂದಲೇ ಹೆಸರು ಮಾಡಿದ್ದ ದಿನೇಶ್ ಮಂಗಳೂರು ಇಂದು (ಆಗಸ್ಟ್ 25) ಕೊನೆಯುಸಿರೆಳೆದಿದ್ದಾರೆ.
ಮೂಲತಃ ಮಂಗಳೂರಿನವರಾಗಿದ್ದ ದಿನೇಶ್ ಮಂಗಳೂರು,ಕಳೆದ ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಂದಾಪುರದ ಕೋಟೇಶ್ವರದ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದರು. ಇನ್ನೂ ''ಕಾಂತಾರ'' ಚಿತ್ರದ ಸಮಯದಲ್ಲಿ ಪಾರ್ಶ್ವ ವಾಯು ಆಗಿತ್ತು ಎಂದು ವರದಿಯಾಗಿದ್ದು ಆ ನಂತರ ಅವರನ್ನು ಬೆಂಗಳೂರಿಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು.

ಆ ನಂತರ ಚೇತರಿಸಿಕೊಂಡಿದ್ದ ದಿನೇಶ್ ಮಂಗಳೂರು ಮರಳಿ ಕುಂದಾಪುರದಲ್ಲಿ ನೆಲೆಸಿದ್ದರು. ಆದರೆ ಕಳೆದ ವಾರ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಕುಂದಾಪುರದ ಕೋಟೇಶ್ವರದ ಸರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸಿದೆ ಬೆಳಗ್ಗೆ ನಿಧನರಾಗಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ದಿನೇಶ್ ಮಂಗಳೂರು, ಕಲಾವಿದನಾಗಬೇಕೆಂದು ಬಯಸಿದ್ದರು. ಆದರೆ ಅವರಿಗೆ ಆರಂಭದಲ್ಲಿ ಒಲಿದಿದ್ದು ಕಲಾ ನಿರ್ದೇಶನ. ಖ್ಯಾತ ಕಲಾ ನಿರ್ದೇಶಕ ಶಶಿಧರ್ ಅಡಪ ಅವರ ಬಳಿ '' ಚಿನ್ನಾರಿ ಮುತ್ತ'' ಸೇರಿ ಕೆಲ ಚಿತ್ರಗಳಿಗೆ ಸಹಾಯರಾಗಿ ಆರಂಭದ ಕೆಲ ವರ್ಷ ಕೆಲಸ ಮಾಡಿದ್ದ ದಿನೇಶ್ ಮಂಗಳೂರು ಆ ನಂತರ ಟಿ.ಎಸ್ ನಾಗಾಭರಣ ನಿರ್ದೇಶನದ ''ಜನುಮದ ಜೋಡಿ'' ಚಿತ್ರದ ಮೂಲಕ ಸ್ವತಂತ್ರ್ಯ ಕಲಾ ನಿರ್ದೇಶಕರಾದರು.
ಆ ನಂತರ '' ವೀರ ಮದಕರಿ''..''ಚಂದ್ರಮುಖಿ ಪ್ರಾಣಸಖಿ''.. ''ನಂ 73 ಶಾಂತಿನಿವಾಸ'' ಸೇರಿ ಹಲವು ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದ ದಿನೇಶ್ ಮಂಗಳೂರು ಅವರಿಗೆ ಶಿವರಾಜ್ ಕುಮಾರ್ ಅಭಿನಯದ ''ರಾಕ್ಷಸ'' ಚಿತ್ರದಲ್ಲಿನ ಆರ್ಟ್ ವರ್ಕ್‌ಗೆ 2004-05ನೇ ಸಾಲಿನ ಅತ್ಯುತ್ತಮ ಕಲಾ ನಿರ್ದೇಶಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಇನ್ನು ಇವರೊಳಗೆ ಮೊದಲಿಂದ ಒಬ್ಬ ಕಲಾವಿದ ಇದ್ದನಾದರೂ ಆ ಕಲಾವಿದನಿಗೆ ಕೆ.ಎಂ. ಚೈತನ್ಯ ನಿರ್ದೇಶನದ ''ಆ ದಿನಗಳು'' ಚಿತ್ರ ಹೆಸರು ತಂದು ಕೊಟ್ಟಿತ್ತು. ಈ ಚಿತ್ರದಲ್ಲಿ ಸೀತಾರಾಮ್ ಶೆಟ್ಟಿ ಪಾತ್ರಕ್ಕೆ ದಿನೇಶ್ ಮಂಗಳೂರು ಜೀವ ತುಂಬಿದ್ದರು.

ಆ ನಂತರ ''ಉಳಿದವರು ಕಂಡಂತೆ''.. ''ರಿಕ್ಕಿ''.. ''ಕಿರಿಕ್ ಪಾರ್ಟಿ''..''ರಣ ವಿಕ್ರಮ''..''ಹರಿಕಥೇ ಅಲ್ಲ ಗಿರಿಕಥೆ'' ಹೀಗೆ ಹಲವು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಅನೇಕರ ಹೃದಯ ಗೆದ್ದಿದ್ದ ದಿನೇಶ್ ಮಂಗಳೂರು ''ಕೆ.ಜಿ.ಎಫ್'' ಚಿತ್ರದ ಮೂಲಕ ಭಾರತದೆಲ್ಲೆಡೆ ಜನಜನಿತರಾಗಿದ್ದರು. 'ಬಾಂಬೆ ಡಾನ್' ಎಂದೇ ಕರೆಯಲ್ಪಡುತ್ತಿದ್ದರು. ತೀರಾ ಇತ್ತೀಚೆಗೆ ಬಂದ ''ಭುವನಂ ಗಗನಂ''.. ''ಎಲ್ಲೋ ಜೋಗಪ್ಪ ನಿನ್ನ ಅರಮನೆ''.. ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದರು ದಿನೇಶ್ ಮಂಗಳೂರು.
ದಿನೇಶ್ ಮಂಗಳೂರು ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದ್ದು ''ಅವನು ಬೇಗನೆ ಹೊರಟಿದ್ದಾನೆ ದೂರ... ಕಣ್ಣಂಚಲ್ಲಿ ಇರಿಸಿದ್ದಾನೆ ನೆನಪುಗಳ ಭಾರ... ಸಮಯಕ್ಕೆ ಬಂದು ಸೇರುವೆವು ನಾವು.. ನಮಗೂ ಇರಿಸಿಕೋ ಒಂದಿನಿತು ತಾವು..." ಎಂದು ಹಿರಿಯ ನಿರ್ದೇಶಕ ಬಿ. ಸುರೇಶ ತಮ್ಮ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟ ಮಠ ಕೊಪ್ಪಳ "ರಂಗಭೂಮಿಯ ಪ್ರತಿಭೆಯೊಂದು ಇನ್ನಿಲ್ಲವಾಯ್ತು... ಓಂಶಾಂತಿ.. ರಂಗ ನಟ, ಚಿತ್ರ ನಟ, ಕಲಾನಿರ್ದೆಶಕರಾದ ಆಪ್ತ ಜೀವ ದಿನೇಶ್ ಮಂಗಳೂರು ಅವರು ಇಂದು ಬೆಳಗಿನ ಜಾವ ಕುಂದಾಪುರದಲ್ಲಿ ದೈವಾಧೀನರಾದರೆಂದು ತಿಳಿದು ಬಂದಿದೆ" ಎಂದು ಬರೆದುಕೊಂಡಿದ್ದಾರೆ. ''ಕಲಾ ನಿರ್ದೇಶಕ, ಕಲಾವಿದ, ನಿರ್ಮಾಪಕ, ಸನ್ಮಿತ್ರ ದಿನೇಶ್ ಮಂಗ್ಳೂರ್ ಇನ್ನಿಲ್ಲ. ಹೋಗಿ ಬಾ ಮಿತ್ರಾ'' ಎಂದು ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಅಶ್ರುತರ್ಪಣ ಸಲ್ಲಿಸಿದ್ದಾರೆ.


Click it and Unblock the Notifications











