»   » ಬಾಬು- ರಾಕ್‌ಲೈನ್‌ ರಾಜಿ

ಬಾಬು- ರಾಕ್‌ಲೈನ್‌ ರಾಜಿ

Posted By: Staff
Subscribe to Filmibeat Kannada

ದಿನೇಶ್‌ಬಾಬು ನಿರ್ದೇಶನ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ, ರವಿಚಂದ್ರನ್‌ ನಾಯಕ. ಚಿತ್ರ ಹೇಗಿದ್ದೀತು? ಇದು ಕಲ್ಪನೆಯಲ್ಲ. ಸಾಕಾರಗೊಳ್ಳಲಿರುವ ಪರಿಕಲ್ಪನೆ. ಇನ್ನು ಕೆಲವೇ ದಿನಗಳಲ್ಲಿ ಈ ಮೂವರು ದಿಗ್ಗಜರ ತಂಡ ಶೂಟಿಂಗ್‌ನಲ್ಲಿ ತೊಡಗಿದರೂ ಅಚ್ಚರಿಯಿಲ್ಲ.

ಜನವರಿ 30ರವರೆಗೆ ದಿನೇಶ್‌ಬಾಬು ನಿಷೇಧದ ಕಾಲಾವಧಿ ಇದೆ. ಸಾಲದ್ದಕ್ಕೆ ಇದೇ ರಾಕ್‌ಲೈನ್‌, ದಿನೇಶ್‌ ಬಾಬು ವಿರುದ್ಧದ ನಿಷೇಧಕ್ಕೆ ಕಾರಣ. ಹೀಗಿದ್ದೂ ಇದು ಹೇಗೆ ಸಾಧ್ಯವಪ್ಪಾ ಅಂದುಕೊಂಡಿರಾ? ರಾಕ್‌ಲೈನ್‌ ರಾಜಿಗೆ ಬಂದಿದ್ದಾರೆ. ಡಾರ್ಲಿಂಗ್‌ ಡಾರ್ಲಿಂಗ್‌ ಚಿತ್ರದ ವಿಷಯದಲ್ಲಿ ಉಡಾಫೆ ತೋರಿದ ದಿನೇಶ್‌ಬಾಬು ನಡಾವಳಿ ವಿರುದ್ಧ ಕೆಂಡ ಕಾರಿದ್ದ ರಾಕ್‌ಲೈನ್‌, ಕಳೆದ ಶನಿವಾರವೇ ಬಾಬು ಜೊತೆ ಕೈಮಿಲಾಯಿಸಿದರು. ಪತ್ರಕರ್ತರ ಸಮ್ಮುಖದಲ್ಲೇ.

ಬಾಬು ಶಿಕ್ಷೆಯ ಅವಧಿಯನ್ನು ಹದಿನೈದು ದಿನಗಳಷ್ಟು ಮೊಟಕುಗೊಳಿಸುವ ಹಾಗೂ 40 ಸಾವಿರ ರುಪಾಯಿ ದಂಡದಲ್ಲೂ ಕನ್ಸೆಷನ್‌ ಕೊಡುವ ಇಂಗಿತ ಇಟ್ಟರು. ಬಾಬು ಶಿಕ್ಷೆ ಮೊಟಕುಗೊಳಿಸುವುದು ರಾಕ್‌ಲೈನ್‌ಗೆ ಅಸಾಧ್ಯವೇನೂ ಅಲ್ಲ. ಯಾಕೆಂದರೆ, ಇವರು ನಿರ್ಮಾಪಕರ ಸಂಘದ ಆಫೀಸ್‌ ಬೇರರ್‌. ದಿನೇಶ್‌ ಬಾಬು ಕೈಲಿ ತಮ್ಮ ಒಂದು ಚಿತ್ರವನ್ನು ನಿರ್ದೇಶಿಸುವುದಾಗಿಯೂ ರಾಕ್‌ಲೈನ್‌ ಅಂದೇ ಘೋಷಿಸಿದರು. ದಿನ ಬೆಳಗಾಗೆದ್ದರೆ ವ್ಯಾಜ್ಯಗಳೇ ಸ್ಯಾಂಡಲ್‌ವುಡ್‌ನ ಸರಕಾಗುತ್ತಿರುವ ಈ ಹೊತ್ತಲ್ಲಿ ಇದೊಂದು ಆಚ್ಚರಿಯಾದರೂ, ಸ್ವಾಗತಾರ್ಹ ಬೆಳವಣಿಗೆ. ಉದ್ದಿಮೆಯ ಹಿತದೃಷ್ಟಿಯಿಂದ.

ರಾಕ್‌ಲೈನ್‌ಗೆ ದಿನೇಶ್‌ ಬಾಬು ಯಾಕೆ ಮೆಚ್ಚಾಗಿರಬಹುದು?

ಈಗಿನ ರೀಮೇಕಿನ ಜಮಾನದಲ್ಲಿ ನೆಲಕಚ್ಚುತ್ತಿರುವ ಚಿತ್ರಗಳೇ ಹೆಚ್ಚು. ರಾಕ್‌ಲೈನ್‌ರ ಲೇಟೆಸ್ಟ್‌ ವೆಂಚರ್‌ ಜೋಡಿ ಬಕ್ಕಾ ಬೋರಲು ಬಿದ್ದಿದೆ. ಶಿವರಾಜ್‌, ಜಗ್ಗೇಶ್‌ ನಟನೆಯಿದ್ದರೂ ಚಿತ್ರ ಮಾತ್ರ ಗೋವಿಂದ. ಚಿತ್ರ ಸೋತಾಗ ಧೀರ ರಾಕ್‌ಲೈನ್‌ಗೆ ದಿನೇಶ್‌ ಬಾಬು ತಮಗಾಗಿ ನಿರ್ದೇಶಿಸಿದ ಲಾಲಿ ಚಿತ್ರ ನೆನಪಾಗಿರಬಹುದು. ಲಾಲಿ ಎಲ್ಲಿ, ಜೋಡಿಯೆಲ್ಲಿ ? ದಿನೇಶ್‌ ನೆನಪು ಧೀರನಿಗೆ ಮರುಕಳಿಸಿರಬಹುದು.

ಜೊತೆಗೆ ಇತ್ತೀಚೆಗಿನ ಯಶಸ್ವಿ ನಿರ್ದೇಶಕ ದಿನೇಶ್‌ ಬಾಬು ಎನ್ನುವುದರಲ್ಲಿ ಅನುಮಾನವಿಲ್ಲ. ಹೊಸಬರ ತಂಡದಲ್ಲೂ ರಸ ಕೊಡಬಲ್ಲ ಚಾಣಾಕ್ಷ ಎಂಬುದನ್ನು ಅವರು ಚಿತ್ರ ಹಾಗೂ ಚಿಟ್ಟೆ ಮೂಲಕ ಸಾಬೀತು ಮಾಡಿದ್ದಾರೆ. ಸಹಜವಾಗೇ ರಾಕ್‌ಲೈನ್‌ ಕಣ್ಣು ಬಾಬು ಅತ್ತ ಹರಿದಿರಬಹುದು.

ಜೊತೆಗೆ ಹಿಟ್‌ಗಳನ್ನು ಕೊಟ್ಟೂ ದಿನೇಶ್‌ ಬಾಬು ಟೈಂ ಅಷ್ಟೇನೂ ಸರಿಯಿಲ್ಲ. ರಾಮೋಜಿ ರಾವ್‌ ಅಡ್ಡೆಯಿಂದ ಬಾಬುಗೆ ಏಕಾಏಕಿ ಕೊಖ್‌ ಸಿಕ್ಕಿತು. ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲಿಗೂ ಸಲ್ಲ ಎಂಬಂಥ ದುಸ್ಥಿತಿ. ಆದರೀಗ ದಿನೇಶ್‌ ಬಾಬುಗೆ ಶುಕ್ರದೆಸೆ. ಒಂದು ಮೂಲದ ಪ್ರಕಾರ ನೆನೆಗುದಿಗೆ ಬಿದ್ದಿರುವ ರಾಮು ಕನಸಿನ ಚಿತ್ರ ಹಾಲಿವುಡ್‌ ಚುಕ್ಕಾಣಿಯನ್ನೂ ದಿನೇಶ್‌ ಬಾಬು ಕೈಗೆ ಕೊಡಲಾಗುವುದು.

ದಿನೇಶ್‌ ಬಾಬು- ರಾಕ್‌ಲೈನ್‌ ಕುಂತು ಈಗಾಗಲೇ ಕತೆಯ ಎಳೆ ಬಗ್ಗೆ ಚರ್ಚಿಸಿದ್ದಾರೆ. ರವಿಚಂದ್ರನ್‌ ಕೈಲಿ ಲೀಡ್‌ ರೋಲ್‌ ಮಾಡಿಸುವುದು ಇಬ್ಬರ ಇರಾದೆ. ರವಿ ಸದ್ಯಕ್ಕೆ ಸಿಕ್ಕಾಪಟ್ಟೆ ಬ್ಯುಸಿ. ಆದರೂ ರಾಕ್‌ಲೈನ್‌- ಬಾಬು ಜೊತೆ ಕೆಲಸ ಮಾಡುವ ಅಪರೂಪದ ಅವಕಾಶಕ್ಕೆ ಒಲ್ಲೆ ಅನ್ನದಿರುವ ಸಾಧ್ಯತೆಯೇ ಹೆಚ್ಚು. ಈ ಬಗ್ಗೆ ರವಿ ಇನ್ನೂ ಏನೂ ಹೇಳಿಲ್ಲ. ಕನಸುಗಾರ- ಧೀರ- ದಿನೇಶರ ಹೊಸ ಕಾಂಬಿನೇಷನ್‌ ಸೋ ಅನ್ನುತ್ತಿರುವ ಸ್ಯಾಂಡಲ್‌ವುಡ್‌ಗೆ ಜೀವ ಸಂಚಲನವಾಗುವುದೇ? ಕಾಲವೇ ಉತ್ತರಿಸಲಿದೆ.

English summary
Rackline Venkatesh and Dinesh Babu shake hands forgetting the tug off war
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada