ಯಾರಿಗೆಲ್ಲಾ ಗೊತ್ತು 'ಬಿಲ್ಲ ರಂಗ ಬಾಷ' ಕಥೆ? ಏನಿದು ಅನೂಪ್ ಹೊಸ ಲೆಕ್ಕಾಚಾರ?
ಕಥೆ ಮೊದ್ಲೆ ಹೇಳಿಬಿಟ್ರೆ ಮಜಾ ಇರಲ್ಲ. ಫಸ್ಟ್ ಡೇ ಫಸ್ಟ್ ಶೋ ತೆರೆಮೇಲೆ ನೋಡುವವರೆಗೂ ಸೀಕ್ರೆಟ್ ರಿವೀಲ್ ಆಗದಿದ್ದರೆ ಇಂಟ್ರೆಸ್ಟಿಂಗ್ ಆಗಿ ಇರುತ್ತದೆ. ಯಾವುದೇ ಸಿನಿಮಾ ಮಾಡುವಾಗ ಅದು ತೆರೆಮೇಲೆ ಬರುವವರೆಗೂ ಕಥೆಯನ್ನು ಗುಟ್ಟಾಗಿಯೇ ಇಡುತ್ತಾರೆ. ಆದರೆ ಸುದೀಪ್ ನಟನೆಯ 'ಬಿಲ್ಲ ರಂಗ ಬಾಷ' ಚಿತ್ರದ ಕತೆ ವಿಚಾರದಲ್ಲಿ ಅನೂಪ್ ಹೊಸ ಪ್ರಯತ್ನ ಮಾಡಿದ್ದಾರೆ.
ಈಗಾಗಲೇ 'ಬಿಲ್ಲ ರಂಗ ಬಾಷ' ಚಿತ್ರದ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿ ಒಂದಷ್ಟು ಚಿತ್ರೀಕರಣ ಮಾಡಲಾಗಿದೆ. ಶೀಘ್ರದಲ್ಲೇ ಚಿತ್ರತಂಡ ಯೂರೋಪ್‌ಗೆ ಹೊರಟು ನಿಂತಿದೆ. ಅಲ್ಲಿ ಒಂದಷ್ಟು ವಿಎಫ್‌ಎಕ್ಸ್ ಸೀಕ್ವೆನ್ಸ್ ಸೆರೆಹಿಡಿಯಲು ಅನೂಪ್ ಮುಂದಾಗಿದ್ದಾರೆ. ಅದಕ್ಕಾಗಿ ತಯಾರಿ ನಡೀತಿದೆ. ಇನ್ನು ಚಿತ್ರದ ಕಥೆಯ ಬಗ್ಗೆ ನಿರ್ದೇಶಕರು ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ಸಿನಿಮಾ ಚಿತ್ರೀಕರಣ ಮಾಡುವಾಗ ಸಣ್ಣ ಫೋಟೊ, ವೀಡಿಯೋ ಹೊರಬರದಂತೆ ನೋಡಿಕೊಳ್ಳುತ್ತಾರೆ. ಕಥೆಯ ವಿಚಾರದಲ್ಲಿ ಕೂಡ ಸಿಕ್ಕಾಪಟ್ಟೆ ಗುಟ್ಟು ಕಾಯ್ದುಕೊಳ್ಳುತ್ತಾರೆ. ಸಿನಿಮಾ ಪ್ರಚಾರದ ಸಮಯದಲ್ಲಿ ಕೂಡ ಕಥೆಯ ಎಳೆಯನ್ನು ಚಿತ್ರತಂಡ ಬಿಟ್ಟುಕೊಡುವುದಿಲ್ಲ. ಟ್ರೈಲರ್, ಟೀಸರ್‌ನಲ್ಲಿ ಕೂಡ ಕಥೆ ರಿವೀಲ್ ಆಗದಂತೆ ಟ್ವಿಸ್ಟ್ ಇಟ್ಟು ಸೀನ್ಸ್ ಕಟ್ ಮಾಡುತ್ತಾರೆ. ಆದರೆ 'ಬಿಲ್ಲ ರಂಗ ಬಾಷ' ಸಿನಿಮಾ ಕಥೆಯನ್ನು ಅನೂಪ್ ಊರಿಗೆಲ್ಲಾ ಹೇಳುತ್ತಿದ್ದಾರೆ. ಎಲ್ಲರಿಗೂ ಅಂದರೆ ತಮ್ಮ ಚಿತ್ರತಂಡ ಬಿಟ್ಟು ಬೇರೆ ಬೇರೆ ಒಂದಷ್ಟು ಜನರಿಗೆ ಹೇಳಿದ್ದಾರೆ. ಅವರ ಪ್ರತಿಕ್ರಿಯೆ, ಸಲಹೆ, ಸೂಚನೆ ತೆಗೆದುಕೊಂಡು ಕಥೆಯನ್ನು ಮತ್ತಷ್ಟು ತಿದ್ದಿ ತೀಡಿದ್ದಾರೆ.
ಅಂತಿಮವಾಗಿ ಸಿನಿಮಾ ಚೆನ್ನಾಗಿ ಬರಬೇಕು. ಕೋಟಿ ಕೋಟಿ ಹಾಕಿ ಮಾಡುವ ಬ್ಯುಸಿನೆಸ್ ಇದು. ಏನೇ ಕ್ರಿಯೇಟಿವ್ ಫೀಲ್ಡ್ ಆಗಿದ್ದರೂ ಹಣವೇ ಇಲ್ಲಿ ಮುಖ್ಯ. ಹಾಗಾಗಿ ಎಲ್ಲಾ ವಿಭಾಗಗಳಲ್ಲಿ ಒಂದು ಸಿನಿಮಾ ಚೆನ್ನಾಗಿ ಬರಬೇಕು. ಆಗ ಮಾತ್ರ ಗೆಲ್ಲೋಕೆ ಸಾಧ್ಯ. ಇಲ್ಲಿ ಕಥೆಯನ್ನು ಯಾರಿಗೆ ಹೇಳದೇ ಗುಟ್ಟಾಗಿ ಇಟ್ಟು ಸಾಧಿಸುವುದು ಏನು ಇಲ್ಲ. ಅದೇ ಕಾರಣಕ್ಕೆ ಅನೂಪ್ ಹೊಸ ರೀತಿಯಲ್ಲಿ ಆಲೋಚನೆ ಮಾಡಿ ಒಂದು ನಿರ್ಧಾರ ಮಾಡಿದ್ದರು. ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಸದ್ಯ ತಾವು 35ನೇ ಬಾರಿಗೆ ತಿದ್ದಿ ಸರಿಪಡಿಸಿರುವ ಸ್ಕ್ರಿಪ್ಟ್ ಇಟ್ಟುಕೊಂಡು ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಉಪಾಯದ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಅನೂಪ್ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.

ಸಾಮಾನ್ಯವಾಗಿ ಯಾವುದೇ ಸಿನಿಮಾ ತೆರೆಗೆ ಬಂದಾಗ ಮೊದಲಿಗೆ ಎಲ್ಲರಿಗೂ ಪ್ರೀಮಿಯರ್ ತೋರಿಸುತ್ತೇನೆ. ಆಗ ಕೆಲವರು ಸರಿ, ತಪ್ಪು ಹೇಳುತ್ತಾರೆ. ಇದನ್ನು ಹೀಗೆ ಮಾಡಬಹುದಿತ್ತು ಎನ್ನುತ್ತಾರೆ. ಕೆಲವೊಮ್ಮೆ ಅಂತಹ ಸಲಹೆ ನಮಗೂ ಸರಿ ಅನ್ನಿಸಬಹುದು. ಆದರೆ ಆಗ ಏನು ಮಾಡುವುದಕ್ಕೆ ಆಗುವುದಿಲ್ಲ. ಕಾರಣ ಅಷ್ಟರಲ್ಲಿ ಸಿನಿಮಾ ಬಂದುಬಿಟ್ಟಿರುತ್ತದೆ. ಆದರೆ ಚಿತ್ರೀಕರಣ ಆರಂಭಿಸುವ ಮುನ್ನ ಕಥೆಯನ್ನು ನಾಲ್ಕು ಜನಕ್ಕೆ ಹೇಳಿ, ಅವರ ಅಭಿಪ್ರಾಯ ಪಡೆದು ಸಿನಿಮಾ ಮಾಡಿದರೆ ಚೆನ್ನಾಗಿ ಬರುತ್ತದೆ ಎನ್ನುವ ಕಾರಣಕ್ಕೆ ಕೆಲವರು ಕಥೆ ಹೇಳಿದ್ದೆವು" ಎಂದು ಅನೂಪ್ ಹೇಳಿದ್ದಾರೆ.
"ನಿರ್ದೇಶಕ ಹೇಮಂತ್ ರಾವ್ ಸೇರಿ ಕೆಲವರಿಗೆ ಕಥೆ ಹೇಳಿದ್ದೆವು. ಬರೀ ಸಿನಿಮಾರಂಗದವರು ಮಾತ್ರ ಅಲ್ಲ. ಕೆಲ ಸಾಮಾನ್ಯ ಪ್ರೇಕ್ಷಕರಿಗೂ ಹೇಳಿದ್ದೇವೆ. ಪ್ರತಿಸಲ ನಮ್ಮ ತಂಡದ 5 ಜನ ಜೊತೆಗೆ ಬೇರೆ ಮೂವರನ್ನು ಕೂರಿಸಿಕೊಂಡು ಕಥೆಯನ್ನು ಹೇಳಿ ಚರ್ಚಿಸಲಾಗುತ್ತಿತ್ತು. ಅವರ ಸಲಹೆ, ಸೂಚನೆಗಳನ್ನು ಪಟ್ಟಿಕೊಂಡು ಬಳಿಕ ಚರ್ಚಿಸಿ, ಸರಿ ಅನ್ನಿಸಿದ್ದನ್ನು ಅಳವಡಿಸಿಕೊಳ್ಳುತ್ತಿದ್ದೆವು. 10-15 ಸಲ ರೀರಿಂಡ್ ಆಗಿದೆ. ಮಾಸ್ ಸಿನಿಮಾ ಇಷ್ಟಪಡುವ ಕೆಲ ಪ್ರೇಕ್ಷಕರಿಗೆ ಕಥೆ ಹೇಳಿದ್ದೇವೆ. ಒಬ್ಬ ವಕೀಲರಿಗೂ ಹೇಳಿದ್ದೇವೆ, ಭವಿಷ್ಯದ ಸಿನಿಮಾ ನಿರ್ದೇಶಕರ ಜೊತೆಗೂ ಚರ್ಚಿಸಿ ಕಥೆ ಫೈನಲ್ ಮಾಡಿದ್ದೇವೆ" ಎಂದು ನಿರ್ದೇಶಕರು ವಿವರಿಸಿದ್ದಾರೆ.
ಕಿಚ್ಚ ಸುದೀಪ್ ಜೊತೆಗೆ ಮತ್ತೊಂದು ಸಿನಿಮಾ ಮಾಡುವ ಅವಕಾಶ ಅನೂಪ್ ಪಾಲಾಗಿದೆ. ಅದನ್ನು ಸಾಧ್ಯವಾದಷ್ಟು ಚೆನ್ನಾಗಿ ಮಾಡಿ ಗೆಲ್ಲಿಸಬೇಕು ಎನ್ನುವ ಹಠ ಅವರದ್ದು. ಅದೇ ಕಾರಣಕ್ಕೆ ದೊಡ್ಡ ಬಜೆಟ್ ಸಿನಿಮಾ ಕೂಡ ಆಗಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳುತ್ತಿದ್ದಾರೆ. ಎಲ್ಲಾ ತರಹದ ಪ್ರೇಕ್ಷಕರಿಗೂ ಸಿನಿಮಾ ಇಷ್ಟ ಆಗುತ್ತಾ ಅಂತೆಲ್ಲಾ ಯೋಚಿಸಿ ಕಥೆಗೆ ಒಂದು ರೂಪ ಕೊಟ್ಟಿದ್ದಾರೆ. ಸದ್ಯಕ್ಕೆ ಯಾವುದೇ ಅಪ್‌ಡೇಟ್ ಇಲ್ಲ. ಮುಂದಿನ ವರ್ಷದ ಕೊನೆಗೆ ಸಿನಿಮಾ ಬಿಡುಗಡೆ ಮಾಡುವ ಲೆಕ್ಕಾಚಾರ ಇದೆ. ಮುಂದೆ ನೋಡೋಣ ಅಂತ ಅನೂಪ್ ತಿಳಿಸಿದ್ದಾರೆ.
ಕಲಿಯುಗದಲ್ಲಿ ಇನ್ನು 200 ವರ್ಷಗಳ ಬಳಿಕ ಪ್ರಪಂಚ ಹೇಗಿರುತ್ತದೆ? ಆಗ ನಡೆಯುವ 'ಬಿಲ್ಲ ರಂಗ ಬಾಷ' ಕಥೆ ಏನು? ಎನ್ನುವುದನ್ನು ಅನೂಪ್ ಕಟ್ಟಿಕೊಡುತ್ತಿದ್ದಾರೆ. ಹಾಗಾಗಿ 200 ವರ್ಷಗಳ ಭವಿಷ್ಯದ ಪ್ರಪಂಚವನ್ನು ಕಲ್ಪಿಸಿಕೊಂಡು ಅದಕ್ಕೆ ತಕ್ಕಂತೆ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರಂಜನ್ ರೆಡ್ಡಿ ಎಂಬುವವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರದ ನಾಯಕಿ ಯಾರು? ಬೇರೆ ಯಾರೆಲ್ಲಾ ನಟಿಸುತ್ತಿದ್ದಾರೆ? ಎನ್ನುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಒಟ್ಟಾರೆ 'ವಿಕ್ರಾಂತ್ ರೋಣ' ಒಂದು ಅದ್ಧೂರಿ ಚಿತ್ರವನ್ನು ಸುದೀಪ್- ಅನೂಪ್ ಜೋಡಿ ಪ್ರೇಕ್ಷಕರ ಮುಂದೆ ತರ್ತಿದೆ.


Click it and Unblock the Notifications











