ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಫ್ಯಾಂಟಮ್ ಸಿನಿಮಾದ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ. ಹೌದು, ಚಿತ್ರದ ಟೈಟಲ್ ಬದಲಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಫ್ಯಾಂಟಮ್ ತಂಡ ಹಾಡಿನ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ.
ಈ ನಡುವೆ ಚಿತ್ರದ ಬಗ್ಗೆ ಬಿಗ್ ಅಪ್ ಡೇಟ್ ನೀಡುವುದಾಗಿ ಚಿತ್ರತಂಡ ಬಹಿರಂಗಪಡಿಸಿದೆ. ಜನವರಿ 21ರಂದು ಚಿತ್ರದ ಬಗ್ಗೆ ಅಪ್ ಡೇಟ್ ನೀಡುವುದಾಗಿ ಹೇಳಿದ್ದಾರೆ. ಫ್ಯಾಂಟಮ್ ಸಿನಿಮಾದ ಅಪ್ ಡೇಟ್ ಏನಿರಬಹುದು ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.
ಚಿತ್ರದ ಟೈಟಲ್ ಬದಲಾವಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಫ್ಯಾಂಟಮ್ ಬದಲಿಗೆ ಚಿತ್ರಕ್ಕೆ 'ವಿಕ್ರಾಂತ್ ರೋಣ' ಎಂದು ಟೈಟಲ್ ಇಡಲಾಗುತ್ತೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರು ವಿಕ್ರಾಂತ್ ರೋಣ. ಅದೇ ಹೆಸರನ್ನು ಸಿನಿಮಾಗೂ ಇಡಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿಯನ್ನು ಕೇಳಿದ್ರೆ, 'ಸದ್ಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಜನವರಿ 21ಕ್ಕೆ ಚಿತ್ರದ ಅಪ್ ಡೇಟ್ ನೀಡಿದ ಬಳಿಕ ಸಿನಿಮಾದ ಬಗ್ಗೆ ಎಲ್ಲಾ ಮಾಹಿತಿ ನೀಡುತ್ತೇವೆ' ಎಂದು ಹೇಳಿದ್ದಾರೆ. ಅಂದ್ಮೇಲೆ ಜನವರಿ 21ರ ವರೆಗೂ ಕಾಯಲೇಬೇಕು.
ಅಂದಹಾಗೆ ಫ್ಯಾಂಟಮ್ ಸಿನಿಮಾದ ಹಾಡಿನಲ್ಲಿ ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಜ್ಜೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಾರ್ಚ್ ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಅದೇನೆ ಇರಲಿ ಸದ್ಯ ಸಿನಿಮಾತಂಡ ನೀಡುವ ಅಪ್ ಡೇಟ್ ಏನಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಸಿನಿಮಾದ ಟ್ರೈಲರ್ ಮತ್ತು ಹಾಡುಗಳ ರಿಲೀಸ್ ಬಗ್ಗೆ ಇರಬಹುದಾ ಅಥವಾ ಟೈಟಲ್ ಬದಲಾವಣೆಯ ಬಗ್ಗೆಯ ಎಂದು ಕಾದು ನೋಡಬೇಕು.


Click it and Unblock the Notifications











