ಅಣ್ಣಾವ್ರ ಹಾಗೆ ನೇತ್ರದಾನ ಮಾಡಿದ ಭಗವಾನ್; 4 ಜನರಿಗೆ ದೃಷ್ಟಿ
ಕನ್ನಡ ಚಿತ್ರರಂಗ ಕಂಡ ಅತಿ ಯಶಸ್ವಿ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಎವರ್ ಗ್ರೀನ್ ಡೈರೆಕ್ಟರ್ ಎಸ್ ಕೆ ಭಗವಾನ್ ಇಂದು ( ಫೆಬ್ರವರಿ 20 ) ವಯೋ ಸಹಜ ಖಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ ಭಗವಾನ್ ಅವರಿಗೆ 90 ವರ್ಷ ವಯಸ್ಸಾಗಿತ್ತು.
ಎಸ್ ಕೆ ಭಗವಾನ್ ಅವರ ಸಾವಿನ ಕುರಿತು ಹಲವಾರು ಗಣ್ಯರು ಹಾಗೂ ಚಿತ್ರರಂಗದ ಸದಸ್ಯರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ತಾವು ನಿರ್ದೇಶಿಸಿದ ಒಟ್ಟಾರೆ ಚಿತ್ರಗಳ ಪೈಕಿ ಡಾ ರಾಜ್‌ಕುಮಾರ್ ಅವರಿಗೆ ಹೆಚ್ಚಿನ ಚಿತ್ರಗಳನ್ನ ನಿರ್ದೇಶಿಸಿರುವ ಭಗವಾನ್ ಎಂದರೆ ರಾಜ್‌ಕುಮಾರ್ ಮನೆಯ ಸದಸ್ಯನ ರೀತಿಯೇ ಆಗಿಬಿಟ್ಟಿದ್ದರು. ರಾಜ್‌ಕುಮಾರ್ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸಹ ಅಲ್ಲಿ ಭಗವಾನ್ ಹಾಜರಿರುತ್ತಿದ್ದರು.
ಹೀಗೆ ಅಣ್ಣಾವ್ರ ಅನುಯಾಯಿಯಾಗಿಯೂ ಇದ್ದ ಭಗವಾನ್ ಇದೀಗ ರಾಜ್‌ಕುಮಾರ್ ಹಾದಿಯಲ್ಲಿಯೇ ಸಾಗಿದ್ದಾರೆ. ಹೌದು, ಡಾ ರಾಜ್‌ಕುಮಾರ್ ರೀತಿಯೇ ಮರಣದ ನಂತರ ತಮ್ಮ ಕಣ್ಣುಗಳನ್ನು ಭಗವಾನ್ ದಾನ ಮಾಡಿದ್ದಾರೆ. ರಾಜ್‌ಕುಮಾರ್ ಅವರು ಸತ್ತ ಬಳಿಕ ತನ್ನ ಕಣ್ಣುಗಳನ್ನು ದಾನ ಮಾಡಲು ನೋಂದಾಯಿಸಿಕೊಂಡಾಗಲೇ ಭಗವಾನ್ ಸಹ ನೇತ್ರದಾನ ಮಾಡುವುದಾಗಿ ನೋಂದಾಯಿಸಿದ್ದರು.

ಅದರಂತೆ ಇದೀಗ ಭಗವಾನ್ ಅವರ ಕಣ್ಣುಗಳ ಕಾರ್ನಿಯಾವನ್ನು ನಾರಾಯಣ ನೇತ್ರಾಲಯ ಐ ಬ್ಯಾಂಕ್ ಪಡೆದುಕೊಂಡಿದ್ದು, ಇದರಿಂದ ಸುಮಾರು ನಾಲ್ಕು ಜನರಿಗೆ ದೃಷ್ಟಿ ಬರಲಿದೆ ಎಂದು ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ವೀರೇಶ್ ತಿಳಿಸಿದ್ದಾರೆ.
ಇನ್ನು ಭಗವಾನ್ ನಿರ್ದೇಶಕ ದೊರೈ ಜತೆ ಸೇರಿ ಜಂಟಿಯಾಗಿ ಸುಮಾರು 27 ಚಿತ್ರಗಳಿಗೆ ಜಂಟಿ ನಿರ್ದೇಶಕನಾಗಿ ಆಕ್ಷನ್ ಕಟ್ ಹೇಳಿದ್ದರು. ಭಾಗ್ಯೋದಯ ಸಿನಿಮಾದಲ್ಲಿ ಕಣಗಲ್ ಪ್ರಭಾಕರ್ ಶಾಸ್ತ್ರಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದ ಭಗವಾನ್ ಬಳಿಕ ಸಂಧ್ಯಾ ರಾಗ ಹಾಗೂ ರಾಜದುರ್ಗದ ರಹಸ್ಯ ಸಿನಿಮಾಗಳಲ್ಲೂ ಸಹ ಸಹಾಯಕ ನಿರ್ದೇಶಕನಾಗಿ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಬಳಿಕ ಜೇಡರ ಬಲೆ ಮೂಲಕ ದೊರೈ ಜತೆ ಕೈಜೋಡಿಸಿ ನಿರ್ದೇಶಕನಾಗಿ ಬಡ್ತಿ ಪಡೆದರು.


Click it and Unblock the Notifications











