ಸಿನಿಮಾ ಆಗ್ತಿದೆ ಶಿವಕುಮಾರ್ ಮಾವಲಿ ಅವರ ನಾಟಕ
ಕನ್ನಡದಲ್ಲಿ ಈಗ ಕಾದಂಬರಿ ಆಧಾರಿತ, ನಾಟಕ ಆಧಾರಿತ ಸಿನಿಮಾಗಳು ಕಡಿಮೆ ಎನ್ನುವ ಮಾತಿದೆ. ಆದರೆ, ಈಗ ಸ್ಯಾಂಡಲ್ ವುಡ್ ನಲ್ಲಿ ಒಂದು ನಾಟಕದ ಆಧಾರಿತ ಸಿನಿಮಾ ಬರುತ್ತಿದೆ.
ಮಲೆನಾಡಿನ ಪ್ರತಿಭಾವಂತ ಬರಹಗಾರ ಶಿವಕುಮಾರ್ ಮಾವಲಿ ಅವರ 'ಸುಪಾರಿ ಕೊಲೆ' ನಾಟಕ ಈಗ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ. ಈ ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ 'ಸುಪಾರಿ ಕೊಲೆ' ನಾಟಕ ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಶಿವಕುಮಾರ್ ಮಾವಲಿ, ನಿರ್ದೇಶಕ ದಯಾಳ್, ಹಿರಿಯ ಪತ್ರಕರ್ತ ಜೋಗಿ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ನವೀನ್ ಕೃಷ್ಣ, ನಿರ್ಮಾಪಕ ಜಾಕ್ ಮಂಜು ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಮುಂದೆ ಓದಿ...

ಮಾವಲಿ ಅವರ ಮೊದಲ ನಾಟಕ
ಈ ಹಿಂದೆ ಐದಾರು ಪುಸ್ತಕ ಬರೆದಿರುವ ಶಿವಕುಮಾರ್ ಮಾವಲಿ ಅವರ ಮೊದಲ ನಾಟಕ ಇದಾಗಿದೆ. ಈ ನಾಟಕ ಆಧಾರಿತ ಸಿನಿಮಾ ಮಾಡುತ್ತಿರುವ ದಯಾಳ್ ಅವರೇ ಪುಸ್ತಕ ಪ್ರಕಟಣೆ ಮಾಡಿದ್ದಾರೆ. ಜಾಕ್ ಮಂಜು ಚಿತ್ರದ ನಿರ್ಮಾಪಕರಾಗುವ ಇಂಗಿತವನ್ನೂ ವ್ಯಕ್ತ ಪಡಿಸಿದ್ದಾರೆ.

ಮಾವಲಿ ಬರವಣಿಗೆ ಮೆಚ್ಚಿದ ಜೋಗಿ
''ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಶಿವಕುಮಾರ್ ಮಾವಲಿ, ತಮ್ಮ 'ದೇವರು ಅರೆಸ್ಟ್ ಆದ' ಕಥಾ ಸಂಕಲನದ ಮೂಲಕ ಕಥೆಗಾರರಾದವರು. 'ಸುಪಾರಿ ಕೊಲೆ' ಅವರ ಮೊದಲ ನಾಟಕ. ಅವರು ಬೇರೆ ಬೇರೆ ಜಾಡು ಹಿಡಿದು ಬರೆಯುವುದು ನನಗಿಷ್ಟ" ಎಂದು ಹಿರಿಯ ಪತ್ರಕರ್ತ ಜೋಗಿ ಹೇಳಿದರು.

ಶುಭ ಹಾರೈಸಿದ ಸಂಚಾರಿ ವಿಜಯ್
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಸಂಚಾರಿ ವಿಜಯ್, ''ಶಿವಕುಮಾರ್ ಅವರ ಕಥೆ ಇದ್ದ 'ಅವ್ಯಕ್ತ' ಎಂಬ ಕಿರುಚಿತ್ರದಲ್ಲಿ ನಾನು ನಟಿಸಿದ್ದೆ. ಸಾಸ್ವೆಹಳ್ಳಿ ಸತೀಶ್ ಅದನ್ನು ನಿರ್ದೇಶನ ಮಾಡಿದ್ದರು. ಆ ಕತೆಯ ಸೂಕ್ಷ್ಮತೆಗಳು ನನಗೆ ಬಹಳ ಇಷ್ಟವಾಯಿತು. ಅವರ ಅಂಕಣ ಬರಹಗಳನ್ನೂ ನಾನು ಓದುತ್ತಿರುತ್ತೇನೆ. ಸಿನಿಮಾ ಕ್ಷೇತ್ರಕ್ಕೆ ಹೊಸ ಬರಹಗಾರರನ್ನು ಆಹ್ವಾನಿಸಬೇಕಿದೆ" ಎಂದರು.

ಹೆಮ್ಮೆ ಇದೆ ಎಂದ ದಯಾಳ್
'''ಆ ಕರಾಳ ರಾತ್ರಿ'ಗೆ ಶಿವಕುಮಾರ್ ಅವರು ಬರೆದ ಫೇಸ್ ಬುಕ್ ವಿಮರ್ಶೆಯಿಂದ ಅವರ ಪರಿಚಯವಾಯ್ತು. ನಂತರ ಅವರಿಂದ ಸುಪಾರಿ ಕೊಲೆಯ ಕತೆಯನ್ನು ನಾನು ಕೇಳುತ್ತಿದ್ದಂತೆಯೇ ಇದನ್ನು ಪುಸ್ತಕ ಮಾಡುವುದಾಗಿ ಹೇಳಿದ್ದೆ. ನಂತರ ಸಿನಿಮಾ ಮಾಡುವುದಾಗಿಯೂ ಹೇಳಿದ್ದೆ.ಈಗ ಪುಸ್ತಕ ಪ್ರಕಟಿಸುತ್ತಿರುವುದಕ್ಕೆ ಹೆಮ್ಮೆ ಇದೆ'' ಎಂದರು ದಯಾಳ್ ಪದ್ಮನಾಭನ್.

ಸಂತಸ ಹಂಚಿಕೊಂಡ ಶಿವಕುಮಾರ್ ಮಾವಲಿ
''ನಾನೊಬ್ಬ ಕಥೆಗಾರ ನನ್ನಲ್ಲಿರುವ ಕಥೆಗಳನ್ನೇ ಬೇರೆ ಬೇರೆ ರೂಪದಲ್ಲಿ ಹೇಳುತ್ತೇನೆ. ಸುಪಾರಿಕೊಲೆಯನ್ನೂ ಕಥೆಯಾಗಿ ಬರೆದಿದ್ದೆ. ಗೆಳೆಯ ಚಂದ್ರಶೇಖರ ಶಾಸ್ತ್ರಿ ಯ ಒತ್ತಾಯಕ್ಕೆ ಅದನ್ನು ನಾಟಕ ಮಾಡಿದೆ. ಈಗ ಅದು ದಯಾಳ್ ಅಂಥವರ ಗಮನ ಸೆಳೆದಿರುವುದು ಖುಷಿಯ ವಿಷಯ.'' ಎಂದು ತಮ್ಮ ಸಂತಸ ಹಂಚಿಕೊಂಡರು.

ಮಾವಲಿ ಅವರ ಬಗ್ಗೆ
'ಸುಪಾರಿ ಕೊಲೆ' ಶಿವಕುಮಾರ್ ಮಾವಲಿ ಅವರ ಮೊದಲ ನಾಟಕವಾಗಿದೆ. ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮಾವಲಿ ಅವರ ಹುಟ್ಟೂರು. ಶಿವಮೊಗ್ಗದ ಡಿ ವಿ ಎಸ್ ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ಅವರು ಬಳಿಕ ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ ಎ ಪದವಿ ಪಡೆದರು.


Click it and Unblock the Notifications











