ಮುನಿಸು ಮರೆತು ಈ ಸಿನಿಮಾಗಾಗಿ ಒಂದಾದ್ರು ಜಗ್ಗೇಶ್ - ಗುರು
Recommended Video

ನಟ ಜಗ್ಗೇಶ್ ಈಗ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಅವರ 'ತೋತಾಪುರಿ' ಸಿನಿಮಾದ ಚಿತ್ರೀಕರಣ ಶುರು ಆಗಿದೆ. ಅದರ ನಂತರ ಈಗ ಜಗ್ಗೇಶ್ ಮತ್ತೊಂದು ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ.
ದೊಡ್ಡ ಅಚ್ಚರಿ ಅಂದರೆ, ಜಗ್ಗೇಶ್ ಈ ಬಾರಿ ಒಪ್ಪಿಕೊಂಡಿರುವುದು ನಿರ್ದೇಶಕ ಗುರುಪ್ರಸಾದ್ ಅವರ ಸಿನಿಮಾವನ್ನು. ಹೌದು, ನಿರ್ದೇಶಕ ಗುರುಪ್ರಸಾದ್ ಹಾಗೂ ಜಗ್ಗೇಶ್ ಈ ಹಿಂದೆ ಎರಡು ಸಿನಿಮಾ ಮಾಡಿದ್ದರು. ಆದರೆ, ಆ ಬಳಿಕ ಕೆಲವು ಕಾರಣಗಳಿಂದ ಇಬ್ಬರ ನಡುವೆ ಮುನಿಸು ಮೂಡಿತ್ತು. ಇಬ್ಬರೂ ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡುತ್ತಿರಲಿಲ್ಲ.
ಅದೆನೇ ಇದ್ದರೂ, ಇದೀಗ ಅದೆಲ್ಲ ಮರೆತು ಈ ಇಬ್ಬರು ಸಿನಿಮಾವಾಗಿ ಒಂದಾಗಿದ್ದಾರೆ. ಮುಂದೆ ಓದಿ...

10 ವರ್ಷದ ನಂತರ
ನಟ ಜಗ್ಗೇಶ್ ಹಾಗೂ ಗುರುಪ್ರಸಾದ್ ಕಾಂಬಿನೇಶನ್ ನಲ್ಲಿ ಈಗಾಗಲೇ ಎರಡು ಸೂಪರ್ ಹಿಟ್ ಸಿನಿಮಾಗಳು ಬಂದಿವೆ. 'ಮಠ' ಹಾಗೂ 'ಎದ್ದೇಳು ಮಂಜುನಾಥ' ಚಿತ್ರಗಳು ಇಂದಿಗೂ ಕನ್ನಡ ಸಿನಿ ಪ್ರೇಮಿಗಳನ್ನು ನಗಿಸುತ್ತಿವೆ. ಇದೀಗ ಈ ಯಶಸ್ವಿ ಜೋಡಿ ಹತ್ತು ವರ್ಷಗಳ ಬಳಿಕ ಒಂದಾಗಿದೆ.

ಹ್ಯಾಟ್ರಿಕ್ ಸಿನಿಮಾ
ಗುರುಪ್ರಸಾದ್ ಮತ್ತೆ ಜಗ್ಗೇಶ್ ಜೊತೆಗೆ ಯಾವಾಗ ಸಿನಿಮಾ ಮಾಡುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಗುರುಪ್ರಸಾದ್ ಕಥೆ ಹಾಗೂ ನಿರ್ದೇಶನ ಸಿನಿಮಾದಲ್ಲಿ ಜಗ್ಗೇಶ್ ನಟಿಸಲಿದ್ದಾರೆ. ವಿಶೇಷ ಅಂದರೆ ಇದು ಇವರಿಬ್ಬರ ಹ್ಯಾಟ್ರಿಕ್ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಮತ್ತೆ ಗುರು ಕಿಕ್ ನೀಡಲಿದ್ದಾರೆ.

ಟೈಟಲ್ ಫಿಕ್ಸ್ ಆಗಿಲ್ಲ
ಜಗ್ಗೇಶ್ ಹಾಗೂ ಗುರುಪ್ರಸಾದ್ ಅವರ ಕಾಂಬಿನೇಶನ್ ಸಿನಿಮಾಗೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಚಿತ್ರದ ಹೆಸರು 'ಮಠ 2' ಎಂಬ ಸುದ್ದಿ ಎಲ್ಲ ಕಡೆ ಹರಿದಾಡುತ್ತಿದ್ದರು ಅಧಿಕೃತವಾಗಿ ಆ ಟೈಟಲ್ ಇನ್ನು ಘೋಷಣೆ ಆಗಿಲ್ಲ. ಉಳಿದಂತೆ, ಚಿತ್ರ ತಾರ ಬಳಗ ಕೂಡ ಅಂತಿಮ ಆಗಿಲ್ಲ.

'ಅದೇಮಾ' ಚಿತ್ರದಲ್ಲಿ ಗುರು ಬ್ಯುಸಿ
ಈಗ ಗುರುಪ್ರಸಾದ್ ನಿರ್ದೇಶನದಲ್ಲಿ 'ಅದೇಮಾ' ಸಿನಿಮಾ ಬರುತ್ತಿದೆ. ಈ ಚಿತ್ರದಲ್ಲಿ ಅನೂಪ್ ಸಾ.ರಾ.ಗೋವಿಂದ್ ನಾಯಕನಾಗಿದ್ದು, ಈ ಚಿತ್ರದ ಬಳಿಕ ಜಗ್ಗೇಶ್ ಜೊತೆಗಿನ ಸಿನಿಮಾ ಶುರುವಾಗುವ ಸಾಧ್ಯತೆ ಅಧಿಕವಾಗಿದೆ.

ಜಗ್ಗೇಶ್ ಸಿನಿಮಾಗಳು
ನಟ ಜಗ್ಗೇಶ್ ಈಗ ಮೂರ್ನಾಲ್ಕು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. 'ತೋತಾಪುರಿ' ಸಿನಿಮಾ ಚಿತ್ರೀಕರಣ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದೆ. ಜೊತೆಗೆ 'ಪ್ರೀಮಿಯರ್ ಪದ್ಮಿನಿ' ಹಾಗೂ '8 ಎಂ ಎಂ' ನವರಸ ನಾಯಕನ ಮುಂದಿನ ಸಿನಿಮಾಗಳಾಗಿವೆ.


Click it and Unblock the Notifications











