'ಸಪ್ತಸಾಗರ'ದಾಚೆ ಹೇಮಂತ್ ರಾವ್‌ಗೆ ಅವಮಾನ, ನಿಮ್ಮ 'ಪ್ರಶಸ್ತಿ' ನನಗೆ ಬೇಡ ಎಂದು ಕಿಡಿ ಕಾರಿದ ನಿರ್ದೇಶಕ...!
ಪ್ರಯೋಗಾತ್ಮಕ ಚಿತ್ರಗಳ ಮೂಲಕವೇ ಕನ್ನಡಿಗರ ಹೃದಯವನ್ನು ಗೆದ್ದವರು ಹೇಮಂತ್ ರಾವ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲು ದಾರಿ, ಸಪ್ತಸಾಗರದಾಚೆ ಎಲ್ಲೋ ಭಾಗ ಒಂದು ಮತ್ತು ಭಾಗ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ಹೇಮಂತ್ ರಾವ್ ಹಿಂದಿಯಲ್ಲಿ ಬ್ಲಾಕ್ ಬಸ್ಟರ್ ಆಗುವುದಲ್ಲದೇ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಅಂಧಾಧುನ್ ಚಿತ್ರದ ಬರಹಗಾರ ಕೂಡ ಹೌದು.
ಇಂಥಾ ಹೇಮಂತ್ ರಾವ್ ಅವರಿಗೆ ಐಫಾ ಪ್ರಶಸ್ತಿ ಸಮಾರಂಭದಲ್ಲಿ ಬೇಸರವಾಗಿದೆ. ಐಫಾ ಆಯೋಜಕರಿಂದ ಅವಮಾನವಾಗಿದೆ. ಹೌದು, ಅಸಲಿಗೆ ಪ್ರಶಸ್ತಿ ಯಾವುದೇ ಇರಲಿ ಆ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರಶಸ್ತಿ ವಿಜೇತರನ್ನು ಎಲ್ಲರಿಗಿಂತ ಮೊದಲು ಕರೆಯುತ್ತಾರೆ. ಪ್ರಶಸ್ತಿ ಪಡೆಯುವ ರೇಸ್‌ನಲ್ಲಿರುವ ನಾಮ ನಿರ್ದೇಶನಗೊಂಡವರಿಗೆ ಮಣೆ ಹಾಕುತ್ತಾರೆ. ಅದರಂತೆ ಹೇಮಂತ್ ರಾವ್ ಮತ್ತು ಸಪ್ತಸಾಗರದಾಚೆ ಎಲ್ಲೋ ಚಿತ್ರದ ಸಂಗೀತ ನಿರ್ದೇಶಕ ಚರಣ್ ರಾಜ್ ಅವರನ್ನೂ ಈ ಐಫಾ ಆಯೋಜಕರು ಕರೆದಿದ್ದಾರೆ ಕೂಡ. ಇಷ್ಟೇ ಅಲ್ಲ ಅಬುಧಾಬಿಯಲ್ಲಿ ಬೇಕಾದ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಆದರೆ, ಕರೆದು ನಡುರಾತ್ರಿ ಮೂರು ಘಂಟೆಯವರೆಗೆ ಕೂರಿಸಿ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಕೊಡದೇ ಹೇಮಂತ್ ರಾವ್ ಮತ್ತು ಚರಣ್ ರಾಜ್ ಅವರನ್ನು ಖಾಲಿ ಕೈಯಲ್ಲಿ ಐಫಾ ಆಯೋಜಕರು ಕಳಿಸಿದ್ದಾರೆ. ಇದು ಹೇಮಂತ್ ರಾವ್ ಅವರಿಗೆ ನೋವುಂಟು ಮಾಡಿದೆ. ಹೀಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿರುವ ಹೇಮಂತ್ ರಾವ್ ನಾನು ಚಿತ್ರರಂಗದಲ್ಲಿ ಕಳೆದೊಂದು ದಶಕದಿಂದ ಇದ್ದೇನೆ. ಹಲವಾರು ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಆದರೆ ಇದೇ ಮೊದಲ ಬಾರಿ ನನಗೆ ಪ್ರಶಸ್ತಿ ಕೊಡ್ತಿಲ್ಲ ಎಂಬ ವಿಚಾರ ನನಗೆ ಗೊತ್ತಾಗಲು ನಾನು ಬೆಳ್ಳಿಗ್ಗೆ ಮೂರು ಘಂಟೆಯವರೆಗೆ ಕೂರಬೇಕಾಯಿತು ಎಂದಿದ್ದಾರೆ. ನನ್ನ ಸಂಗೀತ ನಿರ್ದೇಶಕ ಚರಣ್ ರಾಜ್ ಅವರಿಗೂ ಕೂಡ ಇದೇ ಅನುಭವ ಆಯಿತು ಎಂದು ಬರೆದುಕೊಂಡಿದ್ಧಾರೆ.
ಮುಂದುವರೆದು ಅದು ನಿಮ್ಮ ಪ್ರಶಸ್ತಿ, ನೀವು ಯಾರಿಗೆ ಬೇಕಾದರೂ ಅದನ್ನು ನೀಡಬಹುದು, ಅದು ನಿಮ್ಮ ಆಯ್ಕೆ ಎಂದಿರುವ ಹೇಮಂತ್ ರಾವ್ ನಾನು ತುಂಬಾ ಪ್ರಶಸ್ತಿಗಳನ್ನು ಗೆದ್ದಿಲ್ಲ. ಪ್ರಶಸ್ತಿಗೋಸ್ಕರ ನನ್ನ ನಿದ್ರೆಯನ್ನು ನಾನು ಕಳೆದುಕೊಂಡಿಲ್ಲ ಎಂದಿದ್ದಾರೆ. ಕೇವಲ ಪ್ರಶಸ್ತಿಯನ್ನಷ್ಟೇ ನೀಡಿದ್ದೀರಾ ಕೊನೆ ಪಕ್ಷ ಪ್ರಶಸ್ತಿಗೆ ನಾಮಾಂಕಿತಗೊಂಡಿರುವವರ ಹೆಸರನ್ನಾದರೂ ತೋರಿಸಬಹುದಿತ್ತು ಎಂದಿದ್ದಾರೆ. ವಿಶ್ವದ ಅತ್ಯುತ್ತಮ ಕೆಲಸವನ್ನು ಆನಂದಿಸಲು ನನಗೆ ನಿಮ್ಮ ಪ್ರಶಸ್ತಿಯ ಅಗತ್ಯ ಇಲ್ಲ ಎಂದಿರುವ ಹೇಮಂತ್ ರಾವ್, ಮುಂದೊಂದು ದಿನ ನಿಮ್ಮ ವೇದಿಕೆಗೆ ನಾನು ಬೇಕಾಬಹುದು, ನನ್ನ ನಂಬಿ ಆ ದಿನ ಬಂದೇ ಬರುತ್ತೆ ಆಗ ಆ ಪ್ರಶಸ್ತಿಯನ್ನು ನೀವೆ ನಿಮ್ಮ ಬಳಿ ಇಟ್ಟುಕೊಳ್ಳಿ, ಸೂರ್ಯನ ಕಿರಣಗಳು ಬೀಳದಿರುವ ಜಾಗದಲ್ಲಿ ಆ ಪ್ರಶಸ್ತಿಯನ್ನು ಇಡಿ ಎಂದಿದ್ದಾರೆ. ಈ ಮೂಲಕ ಇನ್ಯಾವತ್ತು ಐಫಾ ಪ್ರಶಸ್ತಿ ಸಮಾರಂಭಕ್ಕೆ ತೆರಳದಿರುವ ತಮ್ಮ ನಿರ್ಧಾರವನ್ನು ಹೇಮಂತ್ ರಾವ್ ತಿಳಿಸಿದ್ದಾರೆ. ಐಫಾ ಎಂಬುದು ಬರೀ ಪ್ರಶಸ್ತಿ ಪ್ರಧಾನ ಸಮಾರಂಭಲ್ಲ ಅದೊಂದು ಅಧ್ವಾನ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಅಂದ್ಹಾಗೇ ಐಫಾದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಪ್ರಶಸ್ತಿಯನ್ನು ನೀಡಲಾಗಿದೆ. ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ವಿಭಾಗಗಳಲ್ಲಿ 'ಸಪ್ತಸಾಗರದಾಚೆ ಎಲ್ಲೋ- A' ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಪ್ರಶಸ್ತಿ ಪಡೆದಿದ್ದಾರೆ. 'ಸಪ್ತಸಾಗರದಾಚೆ ಎಲ್ಲೋ- A' ಚಿತ್ರದ ನಟನೆಗಾಗಿ ಗೋಪಾಲಕೃಷ್ಣ ದೇಶಪಾಂಡೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಗೀತ ಸಾಹಿತ್ಯಕ್ಕಾಗಿ ಧನಂಜಯ ರಾಜನ್ ಪ್ರಶಸ್ತಿ ಪಡೆದು ಖುಷಿಪಟ್ಟಿದ್ದಾರೆ. ಇದೇ ಚಿತ್ರದ 'ಕಡಲನು' ಹಾಡು ಹಾಡಿದ ಶ್ರೀಲಕ್ಷ್ಮಿ ಬೆಲ್ಮಣು ಅವರಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಲಭಿಸಿದೆ. ಹೀಗಾಗಿಯೇ ನನ್ನ ತಂಡದ ಸದಸ್ಯರು ವೇದಿಕೆ ಮೇಲೆ ಪ್ರಶಸ್ತಿಯನ್ನು ಪಡೆಯುವುದು ನೋಡಿ ನನಗೆ ಖುಷಿಯಾಯಿತು ಎಂದು ಹೇಳಿರುವ ಹೇಮಂತ್ ರಾವ್ ಚಿತ್ರರಂಗದ ಸಹುದ್ಯೋಗಿಗಳು ವೇದಿಕೆಯೇರಿದಾಗ ಕೂಡ ಸಂತಸವಾಯಿತು ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಸಂಪೂರ್ಣ ಸಮಯ ವ್ಯರ್ಥವಾಗಲಿಲ್ಲ ಎಂದು ಕೂಡ ಹೇಮಂತ್ ರಾವ್ ಹೇಳಿದ್ದಾರೆ. ಉಳಿದಂತೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಈ ವೇದಿಕೆಯಲ್ಲಿ ಕಾಟೇರಾ ಚಿತ್ರಕ್ಕಾಗಿ ತರುಣ್ ಸುಧೀರ್ ಪಡೆದಿದ್ದಾರೆ ಎನ್ನುವುದು ನಿಮ್ಮ ಗಮನಕ್ಕಿರಲಿ.


Click it and Unblock the Notifications











