ಚಿತ್ರರಂಗಕ್ಕೆ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಎಂಟ್ರಿ: ಮಗನ ಚಿತ್ರಕ್ಕ್ಕೆ ಅಪ್ಪನ ಆಕ್ಷನ್ ಕಟ್
ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ತಮ್ಮದೆ ಆದ ಛಾಪು ಮೂಡಿಸಿರುವ ಹೆಸರಾಂತ ಸಾಹಿತಿ ಪಿ. ಲಂಕೇಶ್ ಅವರ ಮೊಮ್ಮಗ ಸಮರ್ಜಿತ್ ಲಂಕೇಶ್ ಚಂದನವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರರಾಗಿರುವ ಸಮರ್ಜಿತ್ ಲಂಕೇಶ್ ನಟನಾಗಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಪಿ. ಲಂಕೇಶ್ ಅವರ ಕುಟುಂಬಕ್ಕೆ ಒಳ್ಳೆಯ ಹೆಸರಿದ್ದು, ಹಿರಿಯ ಸಾಹಿತಿ ಲಂಕೇಶ್ ಅವರಿಂದ ಹಿಡಿದು, ಕವಿತಾ ಲಂಕೇಶ್, ಇಂದ್ರಜಿತ್ ಲಂಕೇಶ್ ನಿರ್ದೇಶಕರಾಗಿ ಸಿನಿಮಾ ರಂಗದಲ್ಲಿ ಕೆಲಸ ಮಾಡಿದವರೆ. ಪತ್ರಕರ್ತೆ ಗೌರಿ ಲಂಕೇಶ್ ಕೂಡ ಒಂದು ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿಯೇ ಕುಟುಂಬಕ್ಕೆ ಬಣ್ಣದ ನಂಟು ಮೊದಲಿನಿಂದಲೂ ಇದೆ.

ಸಮರ್ಜಿತ್ ಲಂಕೇಶ್ ಅವರ ಚೊಚ್ಚಲ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಆಕ್ಷನ್ ಕಟ್ ಹೇಳಲಿದ್ದಾರೆ. ಹೆಸರಿಡದ ಈ ಸಿನಿಮಾ ಸೆಪ್ಟೆಂಬರ್ 4 ರಂದು ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಮೊದಲ ಚಿತ್ರದಲ್ಲಿಯೇ ನೈಜ್ಯ ಘಟನೆಗಳನ್ನುಟ್ಟುಕೊಂಡು ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ. ಸಿನಿಮಾ ಲಾಂಚ್ ಆಗುವ ದಿನಾಂಕ ಹತ್ತಿರ ಬಂದಂತೆ ಚಿತ್ರದ ಕುರಿತು ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.
ಪತ್ರಕರ್ತ ಮತ್ತು ಮಾಧ್ಯಮ ಪ್ರಕಾಶಕ ಇಂದ್ರಜಿತ್ ಲಂಕೇಶ್ ಕನ್ನಡ ಚಿತ್ರರಂಗದಲ್ಲಿ ಬರಹಗಾರ, ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿಯೂ ಕೆಲಸ ಮಾಡಿದ್ದಾರೆ. ತುಂಟಾಟ (2002), ಲಂಕೇಶ್ ಪತ್ರಿಕೆ (2003), ಮೊನಾಲಿಸಾ (2004), ಐಶ್ವರ್ಯ (2006), ಮತ್ತು ಲವ್ ಯು ಆಲಿಯಾ (2020) ಮುಂತಾದ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ರಿಚಾ ಚಡ್ಡಾ ಅವರ ಜೊತೆಗೆ ಬಾಲಿವುಡ್‌ನಲ್ಲಿ ನಟಿ ಶಕೀಲಾ ಅವರ ಜೀವನಾಧಾರಿತ ಶಕೀಲಾ (2020) ಸಿನಿಮಾವನ್ನು ಮಾಡಿದ್ದರು.
ಇನ್ನು, ಲಂಕೇಶ್ ಪತ್ರಿಕೆಯ ಸಂಸ್ಥಾಪಕ, ಸಾಹಿತಿ ಪಿ ಲಂಕೇಶ್ ಅವರು ಕಾದಂಬರಿ ಆಧಾರಿತ 'ಸಂಸ್ಕಾರ' ಸಿನಿಮಾದಲ್ಲಿ ನಟಿಸಿದ್ದರು. ಜೊತೆಗೆ ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರು ಸೇರಿದಂತೆ ಕೆಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ, ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಕವಿತಾ ಲಂಕೇಶ್ ಕೂಡ ಹಲವು ಸಿನಿಮಾಗಳಿಗೆ, ಸಾಕ್ಷ್ಯಚಿತ್ರಗಳಿಗೆ ಕೆಲಸ ಮಾಡಿದ್ದಾರೆ.
ಸಮರ್ಜಿತ್ ಲಂಕೇಶ್
ಸಮರ್ಜಿತ್ ಲಂಕೇಶ್ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ನಟನೆ, ಸಾಹಸ ಮತ್ತು ನೃತ್ಯದಲ್ಲಿ ತರಬೇತಿ ಪಡೆದಿದ್ದಾರೆ. ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಅವರು ಹಲವು ಜಾಹೀರಾತುಗಳ ಮೂಲಕ ನಟನಾ ಅನುಭವ ಪಡೆದಿದ್ದಾರೆ. ತನ್ನ ಮಗನ ಚೊಚ್ಚಲ ಸಿನಿಮಾ ಕುರಿತು ಘೋಷನೆಯನ್ನು ಗೌಪ್ಯವಾಗಿಟ್ಟಿರುವ ಇಂದ್ರಜಿತ್ ಲಂಕೇಶ್, ಈ ಚಿತ್ರಕ್ಕಾಗಿ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದಾರೆ.


Click it and Unblock the Notifications











