'ಬೆಲ್ ಬಾಟಂ' ಸೀಕ್ವೆಲ್: ಮತ್ತೊಂದು ಕೇಸ್ ಗೆ ರೆಡಿಯಾಗ್ತಿದ್ದಾನೆ ದಿವಾಕರ
ಬೆಲ್ ಬಾಟಂ ಸಿನಿಮಾ ರಿಲೀಸ್ ಆಗಿ ವರ್ಷದ ಮೇಲಾಗಿದೆ. ಆದರೀಗ ಮತ್ತೆ ಡಿಟೆಕ್ಟಿವ್ ದಿವಾಕರ ಸದ್ದು ಮಾಡುತ್ತಿದ್ದಾನೆ. ಹೌದು, ಸೀಕ್ವೆಲ್ ಮೂಲಕ ಮತ್ತೆ ಕನ್ನಡ ಚಿತ್ರೀಭಿಮಾನಿಗಳ ಮುಂದೆ ಬರಲು ದಿವಾಕರ ರೆಡಿಯಾಗ್ತಿದ್ದಾನೆ. ಈ ಬಾರಿ ಮತ್ತಷ್ಟು ರೋಚಕವಾದ ಕೇಸ್ ನೊಂದಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾನೆ.
ಬೆಲ್ ಬಾಟಂ ಸಿನಿಮಾ ಪಾರ್ಟ್-2ಗೆ ಸಿದ್ಧತೆ ನಡೆಯುತ್ತಿದೆ. ಪಾರ್ಟ್-2 ಬರುತ್ತೆ ಎನ್ನುವ ಮಾತು ಕಳೆದ ವರ್ಷದಿಂದನೇ ಕೇಳುತ್ತಿದ್ದೀರಿ. ಆದರೆ ಇದೀಗ ಇದು ಅಧಿಕೃತವಾಗಿದೆ. ಈ ಬಗ್ಗೆ ನಿರ್ದೇಶಕ ಜಯತೀರ್ಥ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ವಿಶೇಷ ಎಂದರೆ ಮೊದಲ ಭಾಗ ಸೆಟ್ಟೇರಿದ ದಿನವೇ ಭಾಗ-2 ಕೂಡ ಆರಂಭವಾಗುತ್ತಿದೆ. ಇನ್ನೂ ಸಿನಿಮಾವನ್ನು ಸಹ ಅದೇ ದಿನ ರಿಲೀಸ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ.
ಮೊದಲ ಭಾಗಕ್ಕಿಂತ ಪಾರ್ಟಿ-2 ಮತ್ತಷ್ಟು ರೋಚಕವಾಗರಲಿದೆಯಂತೆ. ಡಿಟೆಕ್ಟಿವ್ ದಿವಾಕರನಾಗಿ ರಿಷಬ್ ಶೆಟ್ಟಿ ಭಾಗ-2ರಲ್ಲೂ ಮುಂದುವರೆಯಲಿದ್ದಾರೆ. ಪಾರ್ಟ್-1ರಲ್ಲಿ ಗಮನ ಸೆಳೆದಿದ್ದ, ಕುಸುಮ, ಅಣ್ಣಪ್ಪ ಮತ್ತು ಹೆಂಡತಿ, ಸಗಣಿ ಪಿಂಟೋ ಸೇರಿದಂತೆ ಎಲ್ಲಾ ಪಾತ್ರಗಳು ಮುಂದುವರೆಯುತ್ತವೆಯಂತೆ.

ಅಂದಹಾಗೆ ಸಿನಿಮಾದ ಮುಹೂರ್ತ ಜನವರಿ 29ಕ್ಕೆ ನಡೆಯಲಿದೆ. ಫೆಬ್ರವರಿ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ನಟಿ ಹರಿಪ್ರಿಯಾ ಸೇರಿದಂತೆ ಎಲ್ಲರೂ ಪಾರ್ಟ್-2ನಲ್ಲಿ ಇರಲಿದ್ದಾರೆ. ಜೊತೆಗೆ ಹೊಸ ಪಾತ್ರಗಳು ಸಹ ಇರಲಿದೆಯಂತೆ.
ಮೊದಲ ಭಾಗಕ್ಕಿಂತ ಭಾಗ-2 ಮತ್ತಷ್ಟು ಥ್ರಿಲ್ ಆಗಿ ಇರಲಿದೆ ಎನ್ನುತ್ತಾರೆ ನಿರ್ದೇಶಕರು. 2019ರಲ್ಲಿ ರಿಲೀಸ್ ಆಗಿದ್ದ ಬೆಲ್ ಬಾಟಂ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿತ್ತು. 125 ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಅಲ್ಲದೆ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿತ್ತು. ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಬೆಲ್ ಬಾಟಂ ಈಗ ಪಾರ್ಟ್- ಮೂಲಕ ಮತ್ತೆ ಬರ್ತಿದೆ. ಹೊಸ ಕೇಸ್ ಹಿಡಿದು ಬರುತ್ತಿರುವ ಡಿಟೆಕ್ಟಿವ್ ದಿವಾಕರನ ಮೇಲೆ ಈ ಬಾರಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.


Click it and Unblock the Notifications











