Prem: "ರಾಜಕೀಯ ಸ್ವಾರ್ಥಕ್ಕಾಗಿ ಕಾವೇರಿ ನಾ ಅಡ್ಡ ಇಟ್ಟು ರಾಜಕೀಯ ಮಾಡ್ಬೇಡಿ": ರೊಚ್ಚಿಗೆದ್ದ ಜೋಗಿ ಪ್ರೇಮ್
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ತಿಕ್ಕಾಟ ಶುರುವಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದ್ದು ಸದ್ಯ ನೀರು ಬಿಡಲಾಗುತ್ತಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ರೈತರು ಈಗಾಗಲೇ ಹೋರಾಟ ಆರಂಭಿಸಿದ್ದು ಸ್ಯಾಂಡಲ್‌ವುಡ್ ಸ್ಟಾರ್ಸ್ ಬೆಂಬಲ ಸೂಚಿಸಿದ್ದಾರೆ.
ದರ್ಶನ್, ಸುದೀಪ್, ಶಿವರಾಜ್‌ಕುಮಾರ್ ಸೇರಿದಂತೆ ಹಲವರು ಟ್ವೀಟ್ ಮಾಡಿ ಕಾವೇರಿ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡು ರಾಜ್ಯದ ನಾಯಕರು ಹಾಗು ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ. ಇದೀಗ ನಿರ್ದೇಶಕ ಜೋಗಿ ಪ್ರೇಮ್ ಕೂಡ ಪ್ರತಿಕ್ರಿಯಿಸಿದ್ದು ಕೊಂಚ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.

"ಪಾಲಿಟಿಕ್ಸ್, ಕುಡಿಯೋ ನೀರಿಗೆ, ಬೆಳೆಯೋ ರೈತನಿಗೆ ನಿಮ್ಮ ಪ್ರತಿಷ್ಠೆ, ರಾಜಕೀಯ ಸ್ವಾರ್ಥಕ್ಕಾಗಿ ಕಾವೇರಿ ನಾ ಅಡ್ಡ ಇಟ್ಟು ರಾಜಕೀಯ ಮಾಡ್ಬೇಡಿ.. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಜೈ ಕಿಸಾನ್ ಅಂತ ಭಾಷಣ ಮಾಡ್ಬೇಡಿ. ಪ್ರಧಾನಿ ಮೋದಿ ಪಕ್ಷಾತೀತವಾಗಿ ನಿಂತು ರೈತರ ಸಮಸ್ಯೆನ ಬಗೆಹರಿಸಿ. ಮಾಜಿ ಸಿಎಂ ಕುಮಾರಸ್ವಾಮಿ ಅನ್ನದಾತನಿಗೆ ಜೊತೆಯಾಗಿ.. ಜೈ ಕಿಸಾನ್" ಎಂದು ಪೋಸ್ಟ್ ಮಾಡಿದ್ದಾರೆ.
ಎಲ್ಲಾ ಮತದಾರರಿಗೂ ಕೇಳಲು ಹಕ್ಕಿದೆ- ವಿಜಯ್
ದುನಿಯಾ ವಿಜಿ, ನೀನಾಸಂ ಸತೀಶ್ ಸೇರಿದಂತೆ ಹಲವರು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ದುನಿಯಾ ವಿಜಯ್ ಈಗ ವಿಡಿಯೋ ಮೂಲಕ ಮಾತನಾಡಿದ್ದಾರೆ. "ನಾವೆಲ್ಲಾ ಹೀರೊಗಳು ಯಾವತ್ತಿಗೂ ಒಂದೇನೆ. ನಾವೆಲ್ಲಾ ಕನ್ನಡಿಗರು. ಕಾವೇರಿ ನೀರು ಕುಡಿಯುತ್ತಿರುವವರು. ಕಾವೇರಿ ತಾಯಿಯಷ್ಟೆ ನಮಗೆ ಪವಿತ್ರ. ತಾಯಿ ಬಿಟ್ಟೋಗುತ್ತಾಳೆ. ಕಾವೇರಿ ಬಿಟ್ಟೋಗುವುದಿಲ್ಲ" ಎಂದಿದ್ದಾರೆ.
"ಕಾವೇರಿ ನಮ್ಮದು. ಶಿವಣ್ಣ, ಸುದೀಪ್, ದರ್ಶನ್, ನಾನು, ಬೇರೆ ಎಲ್ಲಾ ನಟರು ಎಲ್ಲರೂ ಧ್ವನಿ ಎತ್ತಿದ್ದೇವೆ. ನಮ್ಮ ಬೇಡಿಕೆ ಒಂದೇ. ಕರ್ನಾಟಕದ ಜನತೆಗೆ ಕಾವೇರಿ ನೀರಿನ ಕೊರತೆ ಆಗಬಾರದು. ನಾವು ರಾಜಕೀಯದವರಲ್ಲ. ಏನೇನು ಬೆಳವಣಿಗೆ ಆಗುತ್ತೋ ಗೊತ್ತಿಲ್ಲ. ಇದೆಲ್ಲದರ ಮಧ್ಯೆ ಸಾಮಾನ್ಯ ನಾಗರೀಕ ನೀರಿಲ್ಲದೇ ಒದ್ದಾಡುವುದು ತುಂಬಾನೇ ತಪ್ಪು. ನಮಗೆ ತಗೊಂಡು ಮತ್ತೊಬ್ಬರಿಗೆ ಕೊಡುವುದು ಧರ್ಮ"
"ನಮಗೆ ನೀರು ಇಲ್ಲದೇ ಇರುವಾಗ ಬೇರೆಯವರಿಗೆ ಕೊಡಲು ಹೇಗೆ ಸಾಧ್ಯ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಒಂದು ನಿರ್ಧಾರ ತಗೊಂಡು ಅದಕ್ಕೆ ರಾಜಕೀಯ ಬಣ್ಣ ಬಳಿಯಬಾರದು. ಎಲ್ಲಾ ಮತದಾರರಿಗೂ ಕೇಳಲು ಹಕ್ಕಿದೆ. ನಮ್ಮ ಕಾವೇರಿ ಅದು. ಇಡೀ ಚಿತ್ರರಂಗ, ಆ ವಿಚಾರ ಬಂದರೆ ನಾವೆಲ್ಲಾ ಒಂದಾಗುತ್ತೇವೆ" ಎಂದಿದ್ದಾರೆ.
ಇದು ನಮ್ಮ ಕರ್ತವ್ಯ- ಸತೀಶ್
ನಟ ನೀನಾಸಂ ಸತೀಶ್ ಟ್ವೀಟ್ ಮಾಡಿ, "ನೀರೊಂದೆ ನಮ್ಮ ರೈತರಿಗೆ ಬದುಕು . ಈ ಸಮಯದಲ್ಲಿ ನಾವೆಲ್ಲರೂ ಜೊತೆಗೆ ನಿಲ್ಲಬೇಕಿದೆ . ಕಾವೇರಿಗೆ ನಮ್ಮ ಬೆಂಬಲವಲ್ಲ, ನಾವೆಂದು ಜೊತೆಗೆ . ನಮ್ಮ ಬೆಂಬಲ ಕೇಳುವುದು ಬೇಡ ಅದು ನಮ್ಮ ಕರ್ತವ್ಯ " ಎಂದು ಬರೆದುಕೊಂಡಿದ್ದಾರೆ.
ಸಂಘರ್ಷ ಬೇಗ ಅಂತ್ಯವಾಗಲಿ- ಧನಂಜಯ್
ಇನ್ನು ನಟ ಧನಂಜಯ್ "ಮಳೆಯ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಾವೇರಿ ಕೃಷ್ಣ ನದಿಗಳ ಹೋರಾಟ ನಮ್ಮ ಎಲ್ಲರ ಕರ್ತವ್ಯ . ನಮ್ಮ ರೈತರಿಗೆ ಸಿಗಬೇಕಾದ ಪಾಲು ಸಿಗಲೇಬೇಕು. ನಮ್ಮ ಹಕ್ಕಿಗಾಗಿ ಸದಾ ಹೋರಾಡೋಣ. ಕಾವೇರಿ ಸಂಘರ್ಷ ಬೇಗ ಅಂತ್ಯವಾಗಲಿ" ಎಂದು ಟ್ವೀಟ್ ಮಾಡಿದ್ದರು.
ರೈತರಿಗೆ ನ್ಯಾಯ ಸಿಗಲಿ- ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಟ್ವೀಟ್ ಮಾಡಿ "ಈ ವರ್ಷ ಮಳೆಯ ಅಭಾವದಿಂದ ನಾಡು ಬರಪೀಡಿತವಾಗಿದೆ. ಈ ಸಂದರ್ಭದಲ್ಲಿ ನಮ್ಮ ರೈತರ ಜೊತೆ ನಿಲ್ಲುವುದು ಎಲ್ಲರ ಜವಾಬ್ದಾರಿ. ಸರ್ಕಾರಗಳು ಕಾವೇರಿ ವಿಚಾರದಲ್ಲಿ ಆದಷ್ಟು ಬೇಗ ನ್ಯಾಯಯುತ ನಿರ್ಣಯಕ್ಕೆ ಬರಲಿ. ರೈತರಿಗೆ ನ್ಯಾಯ ಸಿಗಲಿ" ಎಂದಿದ್ದರು.


Click it and Unblock the Notifications











