Mansore: "ಸುಳ್ಳು ಬಾಕ್ಸಾಫಿಸಿನ ಲೆಕ್ಕದ ಮೇಲೆ ಮುಂದುವರೆಯುವುದು ನೀರಿನ ಮೇಲಿನ ಗುಳ್ಳೆಗಿರುವ ಆಯಸ್ಸಿಗೆ ಸಮ": ಮಂಸೋರೆ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ಶೋಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸಿನಿಮಾ ಕಲೆಕ್ಷನ್ ಬಗ್ಗೆ ಮಾತ್ರ ಭಾರೀ ಗೊಂದಲ ಇದೆ. ಒಳ್ಳೆ ಕಲೆಕ್ಷನ್ ಮಾಡ್ತಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಕಲೆಕ್ಷನ್ ಸಂಖ್ಯೆಯ ಬಗ್ಗೆ ಕೆಲವರಿಗೆ ಅನುಮಾನವಿದೆ.
ಶ್ರೀನಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಘೋಸ್ಟ್' ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸಿನಿಮಾ ಥಿಯೇಟರ್‌ಗೆ ಸೆಳೆಯುತ್ತಿಲ್ಲ. ಹಬ್ಬದ ರಜೆಯಲ್ಲಿ ಜನ ಥಿಯೇಟರ್‌ಗೆ ಬರುವ ನಿರೀಕ್ಷೆಯಿದೆ. ಇನ್ನು 'ಘೋಸ್ಟ್' ಜೊತೆಗೆ ಬಿಡುಗಡೆಯಾದ 'ಲಿಯೋ' ಸಿನಿಮಾ ಕೂಡ ಕರ್ನಾಟಕದಲ್ಲಿ ಒಳ್ಳೆ ಕಲೆಕ್ಷನ್ ಮಾಡ್ತಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಮುನ್ನುಗ್ಗುತ್ತಿದೆ.

ನಿರ್ದೇಶಕ ಮಂಸೋರೆ ಕನ್ನಡ ಸಿನಿಮಾಗಳ ಬಾಕ್ಸಾಫೀಸ್ ಗಳಿಕೆಯ ಲೆಕ್ಕದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಸುಳ್ಳಿಗೆ ಆಯಸ್ಸು ಕಡಿಮೆ. ಕನ್ನಡ ಚಿತ್ರರಂಗ ವಾಸ್ತವವನ್ನು ಎದುರಿಸಿ ಸಮಸ್ಯೆಗಳಿಗೆ ಪರಿಹಾರ ಹುಡುಕದೇ ಕೇವಲ ಸುಳ್ಳು ಬಾಕ್ಸಾಫಿಸಿನ ಲೆಕ್ಕದ ಮೇಲೆ ಮುಂದುವರೆಯುವುದು ನೀರಿನ ಮೇಲಿನ ಗುಳ್ಳೆಗಿರುವ ಆಯಸ್ಸಿಗೆ ಸಮ. ವಾಸ್ತವವನ್ನು ಎದುರಿಸಲೇಬೇಕು.(ಇದು ಒಂದು ಸಿನೆಮಾದ ಬಗ್ಗೆ ಅಲ್ಲಾ, ಒಟ್ಟಾರೆ ಚಿತ್ರರಂಗಕ್ಕೆ ಸಂಬಂಧಿಸಿದ್ದು)" ಎಂದು ಬರೆದುಕೊಂಡಿದ್ದಾರೆ.
ಮಂಸೋರೆ ತಮ್ಮ ಪೋಸ್ಟ್‌ನಲ್ಲಿ 'ಘೋಸ್ಟ್' ಸಿನಿಮಾ ಹೆಸರು ಪ್ರಸ್ತಾಪ ಮಾಡಿಲ್ಲ. ಆದರೆ ಸದ್ಯಕ್ಕೆ ಕನ್ನಡದಲ್ಲಿ ಶಿವಣ್ಣನ 'ಘೋಸ್ಟ್' ಸಿನಿಮಾ ಮಾತ್ರ ಬಿಡುಗಡೆಯಾಗಿದೆ. ಸಿನಿಮಾ ಕಲೆಕ್ಷನ್ ಬಗ್ಗೆಯೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಹಾಗಾಗಿ ಮಂಸೋರೆ 'ಘೋಸ್ಟ್' ಚಿತ್ರದ ಕಲೆಕ್ಷನ್ ಬಗ್ಗೆಯೇ ಮಾತನಾಡಿದ್ದಾರೆ ಎನ್ನಲಾಗ್ತಿದೆ. ಪರೋಕ್ಷವಾಗಿ ಕನ್ನಡ ಸಿನಿಮಾಗಳು ಆಹಾ ಓಹೋ ಎಂದು ಕಲೆಕ್ಷನ್ ಮಾಡುತ್ತಿಲ್ಲ. ಬಾಕ್ಸಾಫೀಸ್ ಲೆಕ್ಕ ಎಲ್ಲಾ ಬರೀ ಸುಳ್ಳು ಎಂದು ನಿರ್ದೇಶಕರು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾಗಳು ಗೆಲ್ಲುತ್ತಿಲ್ಲ. ಕನ್ನಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಬರ್ತಿಲ್ಲ ಎನ್ನುವ ವಾದ ಬಹಳ ದಿನಗಳಿಂದ ಇದೆ. ಸಿನಿಮಾ ಸಕ್ಸಸ್ ಸೂತ್ರ ಯಾರಿಗೂ ಗೊತ್ತಿಲ್ಲ. ಅದರಲ್ಲೂ ಕನ್ನಡ ಸಿನಿಮಾಗಳ ಸಕ್ಸಸ್ ಸೂತ್ರ ಆ ದೇವರೇ ಬಲ್ಲ. ಯಾವಾಗ ಯಾವ ಸಿನಿಮಾ ಗೆಲ್ಲುತ್ತದೆ ಅನ್ನೋದು ಗೊತ್ತಾಗಲ್ಲ. ಇದೇ ಕಾರಣಕ್ಕೆ ಸಾಲು ಸಾಲು ಸಿನಿಮಾಗಳು ಸೋಲುತ್ತಿದೆ. ಪ್ರೇಕ್ಷಕರ ಬರ ಎದುರಿಸುವ ಥಿಯೇಟರ್‌ಗಳು ಪರಭಾಷಾ ಸಿನಿಮಾಗಳನ್ನು ಪ್ರದರ್ಶಿಸಲು ಮುಂದೆ ಬರುತ್ತಿದ್ದಾರೆ. ಟಿಕೆಟ್ ದರ ಹೆಚ್ಚಿಸುತ್ತಾರೆ ಎನ್ನುವ ವಾದವನ್ನು ಕೆಲವರು ಮುಂದಿಡುತ್ತಾರೆ.

ಮೊದಲ ದಿನ ಕರ್ನಾಟಕದಲ್ಲಿ ತಮಿಳಿನ 'ಲಿಯೋ' ಸಿನಿಮಾ ಮುಂದೆ ಕನ್ನಡದ 'ಘೋಸ್ಟ್' ಮಂಕಾಗಿದ್ದು ಸುಳ್ಳಲ್ಲ. ಬೆಂಗಳೂರಿನಲ್ಲೇ ತಮಿಳು ಚಿತ್ರಕ್ಕೆ ಸಾವಿರಕ್ಕೂ ಅಧಿಕ ಶೋಗಳು ಸಿಕ್ಕರೆ ಶಿವಣ್ಣನ ಚಿತ್ರಕ್ಕೆ 300ರಿಂದ 400 ಶೋ ಸಿಕ್ಕಿತ್ತು. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಘೋಸ್ಟ್' ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಬಗ್ಗೆ ನಿರ್ಮಾಪಕರು ಸರಿಯಾಗಿ ಪ್ರಚಾರ ಮಾಡಿಲ್ಲ, ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಿಲ್ಲ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.
ಜನರು ಕನ್ನಡ ಸಿನಿಮಾಗಳನ್ನೆ ಹೆಚ್ಚು ನೋಡುವಂತಿದ್ದರೆ ತಮಿಳು ಚಿತ್ರಕ್ಕೆ ಯಾಕೆ ಹೆಚ್ಚು ಶೋ ಕೊಡುತ್ತಾರೆ? ಎನ್ನುವುದು ಇನ್ನು ಕೆಲವರ ವಾದ. ಕೊನೆಯದಾಗಿ ಸಿನಿಮಾ ಅನ್ನೋದು ವ್ಯಾಪಾರ. ಪ್ರೇಕ್ಷಕರು ಬಂದು ಸಿನಿಮಾ ನೋಡಿದರೆ ನಿರ್ಮಾಪಕರು, ವಿತರಕರು, ಥಿಯೇಟರ್ ಮಾಲೀಕರು ಎಲ್ಲರಿಗೂ ಹಣ ಸಿಗುತ್ತದೆ. ಈ ಸರಪಳಿ ಸರಿಯಾಗಿ ನಡೆಯಬೇಕು ಅಂದರೆ ಒಳ್ಳೆ ಒಳ್ಳೆ ಸಿನಿಮಾಗಳು ಬರಬೇಕು ಎನ್ನುವ ವಾದವನ್ನು ಕೆಲವರು ಮುಂದಿಡುತ್ತಾರೆ.
ಇತ್ತೀಚೆಗೆ ನಟ, ನಿರ್ದೇಶಕರ ರಕ್ಷಿತ್ ಶೆಟ್ಟಿ ಮಾತನಾಡಿ ಕನ್ನಡ ಚಿತ್ರರಂಗಕ್ಕೆ 10ರಿಂದ 15 ಜನ ಒಳ್ಳೆ ನಿರ್ದೇಶಕರು ಬೇಕಾಗಿದ್ದಾರೆ. ಮತ್ತೊಂದಷ್ಟು ಸ್ಟಾರ್‌ಗಳು ಹುಟ್ಟಿಕೊಳ್ಳಬೇಕಿದೆ ಎಂದಿದ್ದರು. ಇನ್ನು ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇದೆ.


Click it and Unblock the Notifications











