ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ?: ನಾಗತಿಹಳ್ಳಿ ಚಂದ್ರಶೇಖರ್
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ. ಸಿ. ಎನ್ ಮಂಜುನಾಥ್ ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯಲು ಇತ್ತೀಚೆಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಡಾ. ಮಂಜುನಾಥ್ ರಾಜಕೀಯ ಪ್ರವೇಶದ ಬಗ್ಗೆ ಪರ- ವಿರೋಧ ಚರ್ಚೆ ಶುರುವಾಗಿದೆ.
ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬಳಿಕ ಲೋಕಸಭೆ ಚುನಾವಣೆ ಬಗ್ಗೆ ಭಾರೀ ಕುತೂಹಲವಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಹುತೇಕ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ. ಕೆ ಸುರೇಶ್ ಅವರನ್ನು ಶತಾಯಗತಾಯ ಸೋಲಿಸಬೇಕು ಎಂದು ಬಿಜೆಪಿ- ಜೆಡಿಎಸ್ ತೀರ್ಮಾನಿಸಿದೆ. ಅದೇ ಕಾರಣಕ್ಕೆ ಡಾ. ಮಂಜುನಾಥ್ ಅವರನ್ನು ಕಣಕ್ಕಿಳಿಸುತ್ತಿದೆ.

ಡಾ. ಸಿ. ಎನ್ ಮಂಜುನಾಥ್ ರಾಜಕೀಯ ಪ್ರವೇಶದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂತಹವರು ರಾಜಕಾರಣಕ್ಕೆ ಬರಬೇಕು, ಇದು ಒಳ್ಳೆಯ ನಿರ್ಧಾರ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ನಿಮಗೆ ರಾಜಕೀಯ ಸಹವಾಸ ಬೇಕಿರಲಿಲ್ಲ ಎನ್ನುತ್ತಿದ್ದಾರೆ. ಖ್ಯಾತ ಸಿನಿಮಾ ನಿರ್ದೇಶಕ, ಸಾಹಿತಿ ನಾಗತೀಹಳ್ಳಿ ಚಂದ್ರಶೇಖರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
"ನಮ್ಮ ಪ್ರೀತಿಯ ವೈದ್ಯ ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ. ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ?ಸಮಾಜವನ್ನು ಕಟ್ಟಲು ಸಾವಿರ ದಾರಿಗಳಿವೆ. ಮಂಜುನಾಥ್ ಇದು ನಿಮಗೆ ಬೇಕಿತ್ತೆ?" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗುತ್ತಿದೆ.

ಮಾಜಿ ಪ್ರಧಾನಿ ದೇವೇಗೌಡರ ಅಳಿಯರೂ ಆಗಿರುವ ಡಾ. ಮಂಜುನಾಥ್ ಅವರು ರಾಜಕೀಯ ಪ್ರವೇಶ ಹಲವರಿಗೆ ಅಚ್ಚರಿ ತಂದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಪ್ರಬಲ ಸ್ಪರ್ಧಿಯನ್ನು ಮೈತ್ರಿ ಪಕ್ಷಗಳು ಹುಡುಕಿವೆ. ರಾಜಕೀಯರಂಗ ಪ್ರವೇಶಿಸುವುದೇ ಇಲ್ಲ ಎಂದುಕೊಂಡಿದ್ದ ಡಾ. ಮಂಜುನಾಥ್ ದಿಢೀರ್ ನಿರ್ಧಾರ ಕುತೂಹಲ ಮೂಡಿಸಿದೆ.
ಎರಡು ತಿಂಗಳ ಹಿಂದೆಯಷ್ಟೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಸೇವಾವಧಿ ಮುಕ್ತಾಯವಾಗಿತ್ತು. ಅಂದಹಾಗೆ 16 ವರ್ಷಗಳ ಕಾಲ ಅವರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2007ರಿಂದ ಜಯದೇವ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದ ಅವರ ಸೇವಾವಧಿ 2023ರಲ್ಲಿ ಮುಕ್ತಾಯವಾಗಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿ ಹಾಗೂ ಹಲವು ಗಣ್ಯರ ಕೋರಿಕೆಯಂತೆ ಸರ್ಕಾರ ಅವರ ಸೇವಾ ಅವಧಿಯನ್ನು ವಿಸ್ತರಿಸಿತ್ತು.
1988ರಲ್ಲಿ ಮೊದಲಿಗೆ ಜಯದೇವ ಆಸ್ಪತ್ರೆಯಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಡಾ. ಮಂಜುನಾಥ್ ಆ ಸಂಸ್ಥೆಗೆ ಸಲ್ಲಿಸಿದ ಸೇವೆ ಅಪಾರ. ಅದರಲ್ಲೂ ನಿರ್ದೇಶಕರಾದ ಬಳಿಕ 16 ವರ್ಷಗಳ ಅವರ ಕಾಲಾವಧಿಯಲ್ಲಿ ಜಯದೇವ ಸಂಸ್ಥೆಯ ಸುವರ್ಣಯುಗ ಎನ್ನಬಹುದು.
ರಾಜ್ಯದಲ್ಲಿ ಹೃದಯದ ಡಾಕ್ಟರ್ ಎಂದೇ ಖ್ಯಾತರಾಗಿರುವ ಡಾ. ಮಂಜುನಾಥ್ ಬಡ ಜನರ ಆಶಾಕಿರಣವಾಗಿದ್ದರು. ಬಡ ರೋಗಿಗಳ ಪಾಲಿಗೆ ದೇವರೇ ಆಗಿಬಿಟ್ಟಿದ್ದರು. ಅದೇ ಕಾರಣಕ್ಕೆ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಮಾನವೀಯತೆ, ಸರಳತೆ ಎಲ್ಲರೂ ಮೆಚ್ಚುವಂತದ್ದು. ಇದೇ ಕಾರಣಕ್ಕೆ ಡಾ. ಮಂಜುನಾಥ್ ರಾಜಕೀಯ ಪ್ರವೇಶವನ್ನು ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಿಸುತ್ತಿದ್ದಾರೆ.


Click it and Unblock the Notifications











