"ಯಾವುದು ಫೈನಲ್ ಆಗಿಲ್ಲ"; ಧ್ರುವ ಜೊತೆ ಸಿನಿಮಾ ಬಗ್ಗೆ ನರ್ತನ್ ಪ್ರತಿಕ್ರಿಯೆ
ಸ್ಟಾರ್ ನಟ ಹಾಗೂ ಸ್ಟಾರ್ ನಿರ್ದೇಶಕ ಒಂದೇ ಚಿತ್ರಕ್ಕೆ ಕೈ ಜೋಡಿಸುತ್ತಾರೆ ಅಂದರೆ ಸಹಜವಾಗಿಯೇ ನಿರೀಕ್ಷೆ ಹುಟ್ಟಿಕೊಳ್ಳುತ್ತದೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ ನಡೀತಿದೆ. ಹಾಗಾಗಿ ಫಿಲ್ಮ್ ಮೇಕರ್ಸ್ ದೊಡ್ಡ ದೊಡ್ಡ ಕನಸು ಕಾಣುತ್ತಿದ್ದಾರೆ. ದೊಡ್ಡ ಬಜೆಟ್, ಸ್ಟಾರ್ ನಟ-ನಟಿಯರು, ಅದ್ಧೂರಿ ಮೇಕಿಂಗ್ ಲೆಕ್ಕಾಚಾರ ಶುರುವಾಗುತ್ತದೆ.
ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ನಿರ್ದೇಶಕ ನರ್ತನ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ಮುಂದೆ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಧ್ರುವ ಸರ್ಜಾ ಅಥವಾ ಯುವ ರಾಜ್‌ಕುಮಾರ್ ಜೊತೆ ನರ್ತನ್ ಸಿನಿಮಾ ಮಾಡುತ್ತಾರೆ ಎನ್ನುವ ಊಹಾಪೋಹ ಬಹಳ ದಿನಗಳಿಂದ ಕೇಳಿಬರ್ತಿದೆ. ಇದೀಗ ಮತ್ತೆ ಧ್ರುವ ಹಾಗೂ ನರ್ತನ್ ಕಾಂಬಿನೇಷನ್ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ಕೆವಿಎನ್ ಅಥವಾ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನರ್ತನ್ ಹಾಗೂ ಧ್ರುವ ಸಿನಿಮಾ ಶುರುವಾಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸದ್ಯ ಧ್ರುವ ಸರ್ಜಾ 'KD' ಸಿನಿಮಾ ಚಿತ್ರೀಕರಣಕ್ಕಾಗಿ ಸ್ವಿಟ್ಜರ್‌ರ್ಲೆಂಡ್‌ನಲ್ಲಿದ್ದಾರೆ. ಪತ್ನಿ ಸಮೇತ ಅವರು ಅಲ್ಲಿ ತೆರಳಿದ್ದು ಸಾಂಗ್ ಶೂಟಿಂಗ್ ನಡೀತಿದೆ. ಇದೆಲ್ಲದರ ನಡುವೆ ನರ್ತನ್ ಜೊತೆ ಸಿನಿಮಾ ಎನ್ನುವ ಸುದ್ದಿ ಹರಿದಾಡ್ತಿದೆ. ಈ ಬಗ್ಗೆ ಖುದ್ದು ನರ್ತನ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
"ಭೈರತಿ ರಣಗಲ್ ಬಳಿಕ ಹೊಸ ಚಿತ್ರಕ್ಕೆ ಕಥೆ ಬರೆಯುತ್ತಿದ್ದೇನೆ. ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುವ ಚರ್ಚೆ ಇಲ್ಲು ಆರಂಭಿಕ ಹಂತದಲ್ಲಿದೆ. ಇನ್ನು ಯಾವುದೇ ಫೈನಲ್ ಆಗಿಲ್ಲ. ಧ್ರುವ ಸರ್ ವಿದೇಶದಲ್ಲಿದ್ದಾರೆ. ಅವರು ವಾಪಸ್ ಬರಬೇಕು, ಇನ್ನು ಕಥೆ ಹೇಳಿಲ್ಲ. ನಿರ್ಮಾಪಕರು ಯಾರು? ಬಜೆಟ್ ಏನು? ಯಾವುದು ಕೂಡ ಚರ್ಚೆ ಆಗಿಲ್ಲ. ಎಲ್ಲವೂ ಆರಂಭಿಕ ಹಂತದಲ್ಲೇ ಇದೆ. ಮುಂದೆ ನೋಡೋಣ. ಎಲ್ಲಾ ಖಚಿತವಾದ ಬಳಿಕ ಮಾಹಿತಿ ನೀಡುತ್ತೇನೆ" ಎಂದು ನರ್ತನ್ ತಿಳಿಸಿದ್ದಾರೆ.
ಶಿವಣ್ಣ ಹಾಗೂ ಶ್ರೀಮುರಳಿ ನಟನೆಯ 'ಮಫ್ತಿ' ಸಿನಿಮಾ ಮೂಲಕ ನರ್ತನ್ ನಿರ್ದೇಶಕರಾಗಿ ಪರಿಚಿತರಾಗಿದ್ದರು. ಬಳಿಕ ಯಶ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಕಥೆ ಬರೆದು ಸಾಕಷ್ಟು ಚರ್ಚೆ ನಡೆಸಿದ ಬಳಿಕ ಆ ಸಿನಿಮಾ ಮಾತುಕತೆ ನಿಂತು ಹೋಗಿತ್ತು. ಬಳಿಕ ಯಶ್ 'ಟಾಕ್ಸಿಕ್' ಸಿನಿಮಾ ಕೈಗೆತ್ತಿಕೊಂಡಿದ್ದರು. ಆ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಮಫ್ತಿ' ಬ್ಲಾಕ್‌ಬಸ್ಟರ್ ಹಿಟ್ ಬೆನ್ನಲ್ಲೇ ಪ್ರೀಕ್ವೆಲ್ ಬಗ್ಗೆ ಸುದ್ದಿಯಾಗಿತ್ತು. ಶಿವಣ್ಣ ತಮ್ಮ ಹೋಂ ಬ್ಯಾನರ್‌ನಲ್ಲಿ ಆ ಸಿನಿಮಾ ಮಾಡಲು ನಿರ್ಧರಿಸಿದ್ದರು. ಕೋವಿಡ್ ಸಮಸ್ಯೆಯಿಂದ ಅದು ಸಾಧ್ಯವಾಗಿರಲಿಲ್ಲ. ಬಳಿಕ ಬಹಳ ತಡವಾಗಿ ಅಂದರೆ ಸರಿಯಾಗಿ ಎರಡು ವರ್ಷದ ಹಿಂದೆ ಸಿನಿಮಾ ಸೆಟ್ಟೇರಿತ್ತು. ಕಳೆದ ವರ್ಷ ನವೆಂಬರ್ 15ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಪ್ರೇಕ್ಷಕರನ್ನು ರಂಜಿಸಿ ಗೆದ್ದಿತ್ತು. ಕನ್ನಡದ ಮೊದಲ ಸೀಕ್ವೆಲ್ ಸಿನಿಮಾ ಇದಾಗಿತ್ತು. ನರ್ತನ್ ಮತ್ತೊಮ್ಮೆ ತಮ್ಮ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದಿದ್ದರು.
ಯುವ ರಾಜ್‌ಕುಮಾರ್ ನಟನೆಯ 2ನೇ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಎಂದು ಗುಲ್ಲಾಗಿತ್ತು. ಆದರೆ ಅದೆಲ್ಲಾ ಸದ್ಯಕ್ಕೆ ಸುಳ್ಳು ಎನ್ನುವುದು ಗೊತ್ತಾಗುತ್ತಿದೆ. ಸದ್ಯ ಯುವ ರಾಜ್‌ಕುಮಾರ್ 'ಎಕ್ಕ' ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಬಳಿಕ ದುನಿಯಾ ಸೂರಿ ನಿರ್ದೇಶನದಲ್ಲಿ ಸಿನಿಮಾ ಮಾಡಬೇಕಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ.
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ನಿರಾಸೆ ಮೂಡಿಸಿತ್ತು. ಹಾಗಾಗಿ ಜೋಗಿ ಪ್ರೇಮ್ ನಿರ್ದೇಶನದ 'KD' ಸಿನಿಮಾ ಬಗ್ಗೆ ಧ್ರುವ ಬಹಳ ಭರವಸೆಯಿಂದ ಇದ್ದಾರೆ. ಈ ಸಿನಿಮಾ ರಿಲೀಸ್ ಬಹಳ ತಡವಾಗುತ್ತಿದೆ. ವರಲಕ್ಷ್ಮಿ ಹಬ್ಬಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆ ಧ್ರುವ ಸರ್ಜಾ ಮುಂದಿನ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ಕೆವಿಎನ್ ಅಥವಾ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಬಹುದು ಎನ್ನಲಾಗ್ತಿದೆ. ಕೆವಿಎನ್ ಬ್ಯಾನರ್‌ನಲ್ಲೇ 'KD' ಸಿನಿಮಾ ಮೂಡಿ ಬರ್ತಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೂಡ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕ್ರೇಜಿ ಕಾಂಬಿನೇಷನ್ ಸಿನಿಮಾಗಳಿಗೆ ಹಣ ಹೂಡುತ್ತಿದೆ. ಹಾಗಾಗಿ ಎಲ್ಲಾ ಪಕ್ಕಾ ಆದರೆ ಅಭಿಮಾನಿಗಳ ಆಸೆ ಈಡೇರಬಹುದು.
'ಮಫ್ತಿ' ಹಾಗೂ 'ಭೈರತಿ ರಣಗಲ್' ರೀತಿಯ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗಳನ್ನು ನರ್ತನ್ ಕಟ್ಟಿಕೊಟ್ಟಿದ್ದಾರೆ. ಧ್ರುವ ಸರ್ಜಾ ಕೂಡ ತಮ್ಮ ರಗಡ್ ಪಾತ್ರಗಳಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಇವರಿಬ್ಬರ ಕಾಂಬೋ ತೆರೆಮೇಲೆ ಧೂಳೆಬ್ಬಿಸುವುದು ಗ್ಯಾರಂಟಿ. ಇದೇ ಕಾರಣಕ್ಕೆ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.


Click it and Unblock the Notifications











