ಸೂರ್ಯ ಕಾಂಬಿನೇಷನ್‌ನಲ್ಲಿ ಸಿನಿಮಾ? ನಿರ್ದೇಶಕ ನರ್ತನ್ ಪ್ರತಿಕ್ರಿಯೆ
ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಶಿವಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದ ಟೀಸರ್ ಸೂಪರ್ ಹಿಟ್ ಆಗಿತ್ತು. 'ಮಫ್ತಿ' ಪ್ರೀಕ್ವೆಲ್ ಆಗಿರುವುದರಿಂದ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿ ಬರುತ್ತಿದೆ.
'ಭೈರತಿ ರಣಗಲ್' ಬಳಿಕ ನಿರ್ದೇಶಕ ನರ್ತನ್ ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಕುತೂಹಲವಿದೆ. 'ಮಫ್ತಿ' ಸಕ್ಸಸ್ ಬೆನ್ನಲ್ಲೇ ಸಾಕಷ್ಟು ಅವಕಾಶಗಳು ಅರಸಿ ಬಂದಿತ್ತು. ಮೊದಲ ಚಿತ್ರದಲ್ಲೇ ಸ್ಟಾರ್ ಡೈರೆಕ್ಟರ್ ಪಟ್ಟ ಸಿಕ್ಕಿತ್ತು. ಅಷ್ಟರಮಟ್ಟಿಗೆ ಆ ಸಿನಿಮಾ ಸದ್ದು ಮಾಡಿತ್ತು. ಯೂಟ್ಯೂಬ್‌ನಲ್ಲಿ ಪರಭಾಷಿಕರು ಸಿನಿಮಾ ನೋಡಿ ಕೊಂಡಾಡಿದ್ದರು. ತೆಲುಗು, ತಮಿಳಿನ ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳುವ ಬಗ್ಗೆಯೂ ಚರ್ಚೆ ನಡೆದಿತ್ತು.

ತೆಲುಗು ನಟ ರಾಮ್‌ಚರಣ್ ಜೊತೆ ನರ್ತನ್ ಸಿನಿಮಾ ಮಾಡುವ ಬಗ್ಗೆ ಬಹಳ ಚರ್ಚೆ ನಡೀತಿದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಬೇಕಿದೆ. ಆದರೆ ಈಗಾಗಲೇ ಮತ್ತೆರಡು ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ನರ್ತನ್ ಸಿನಿಮಾ ತಡವಾಗಲಿದೆ. ಈ ಗ್ಯಾಪ್‌ನಲ್ಲಿ ಬೇರೆ ಚಿತ್ರವನ್ನು ಮಾಡಬೇಕಿದೆ. ಯುವ ರಾಜ್‌ಕುಮಾರ್ ಅಥವಾ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಗುಸುಗುಸು ಕೂಡ ಕೇಳಿ ಬಂದಿತ್ತು.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಮಫ್ತಿ' ಬಳಿಕ ಯಶ್ ಜೊತೆ ನರ್ತನ್ ಸಿನಿಮಾ ಮಾಡಬೇಕಿತ್ತು. ಆದರೆ ಕಥೆ ಫೈನಲ್ ಆಗಲಿಲ್ಲ. ಹಾಗಾಗಿ ಬಹಳ ಹಿಂದೆ ಮಾತುಕತೆಯಾಗಿದ್ದ 'ಭೈರತಿ ರಣಗಲ್' ಸಿನಿಮಾ ಶುರು ಮಾಡಿದ್ದರು. ಇದೀಗ ಸಿನಿಮಾ ಮುಕ್ತಾಯದ ಹಂತಕ್ಕೆ ಬಂದಿದೆ. ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್ ಎಂದು ಘೋಷಣೆ ಮಾಡಿದ್ದಾರೆ.
ತಮಿಳು ನಟ ಸೂರ್ಯ ಅಭಿನಯದ ಮುಂದಿನ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ರಾಮ್‌ಚರಣ್‌ಗೆ ಮಾಡಿದ್ದ ಕಥೆಯನ್ನೇ ಸೂರ್ಯಗೆ ಮಾಡ್ತಾರೆ ಎನ್ನುವ ಗುಸುಗುಸು ಅತ್ತ ಟಾಲಿವುಡ್‌ನಲ್ಲಿ ಶುರುವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರಕ್ಕೂ ಹಣ ಹೂಡುತ್ತದೆ ಎನ್ನಲಾಗ್ತಿದೆ. ಸದ್ಯ ಈ ಬಗ್ಗೆ ಫಿಲ್ಮಿಬೀಟ್‌ಗೆ ನಿರ್ದೇಶಕ ನರ್ತನ್ ಪ್ರತಿಕ್ರಿಯಿಸಿದ್ದಾರೆ.

"ಸದ್ಯಕ್ಕೆ ನನ್ನ ಗಮನ 'ಭೈರತಿ ರಣಗಲ್' ಸಿನಿಮಾ ಮೇಲಿದೆ. ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದ ಎಡಿಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದೀನಿ. ನನ್ನ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಈಗ ಕೇಳಿಬರುತ್ತಿರುವುದು ಕೇವಲ ವದಂತಿ. ನಾನು ತಮಿಳು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. 'ಭೈರತಿ ರಣಗಲ್' ಸಿನಿಮಾ ರಿಲೀಸ್ ಆಗಬೇಕು. ಬಳಿಕ ಮುಂದಿನ ಸಿನಿಮಾ ಬಗ್ಗೆ ಯೋಚಿಸುತ್ತೇನೆ" ಎಂದು ನರ್ತನ್ ತಿಳಿಸಿದ್ದಾರೆ.
'ಮಫ್ತಿ' ಚಿತ್ರದಲ್ಲಿ ಮಾಫಿಯಾ ಡಾನ್ 'ಭೈರತಿ ರಣಗಲ್' ಆಗಿ ಶಿವಣ್ಣ ಅಬ್ಬರಿಸಿದ್ದರು. ಆತನ ಹಿನ್ನೆಲೆ ಏನು? ಕಾನೂನು ಕಾಪಾಡುವ ವಕೀಲನಾಗಿದ್ದ ರಣಗಲ್ ಅದೇ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ಯಾಕೆ? ಎನ್ನುವ ಕಥೆಯನ್ನು ಪ್ರೀಕ್ವೆಲ್‌ನಲ್ಲಿ ಹೇಳುವ ಸಾಧ್ಯತೆಯಿದೆ. ಛಾಯಾ ಸಿಂಗ್, ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಮತ್ತಷ್ಟು ಭಾಷೆಗಳಲ್ಲಿ 'ಭೈರತಿ ರಣಗಲ್' ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. 'ಮಫ್ತಿ' ಸಿನಿಮಾ ಕನ್ನಡದಲ್ಲಿ ಮಾತ್ರ ಬಂದಿತ್ತು. ಪ್ರೀಕ್ವೆಲ್ ಬೇರೆ ಭಾಷೆಗಳಲ್ಲಿ ಸದ್ದು ಮಾಡುತ್ತಾ ಕಾದು ನೋಡಬೇಕಿದೆ.


Click it and Unblock the Notifications











