"ಧೂಮಮ್ ಚಿತ್ರಕ್ಕೆ ಯಾಕಿಷ್ಟು ನೆಗೆಟಿವ್ ವಿಮರ್ಶೆ? ನಂಗೂ ಆ ಸಿನಿಮಾ ಇಷ್ಟವಾಗ್ಲಿಲ್ಲ, ನಾನು ಹೇಳಿದ್ನಾ?": ಪವನ್
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ 'ಧೂಮಮ್' ಸಿನಿಮಾ ಕಳೆದ ವಾರ ರಿಲೀಸ್ ಆಗಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದು ಕಲೆಕ್ಷನ್ ಕೂಡ ಡಲ್ಲಾಗಿದೆ. ಇನ್ನು ಸಾಕಷ್ಟು ನೆಗೆಟಿವ್ ವಿಮರ್ಶೆ ಬರುತ್ತಿರುವುದ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಪ್ರತಿಕ್ರಿಯಿಸಿದ್ದು ಬೇರೆಯವರ ಅಭಿಪ್ರಾಯ ಬಿಟ್ಟು ನೀವೇ ಹೋಗಿ ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಮನವಿ ಮಾಡಿದ್ದಾರೆ.
ಮಲಯಾಳಂ ಭಾಷೆಯಲ್ಲಿ ನಿರ್ಮಾಣವಾಗಿರುವ 'ಧೂಮಮ್' ಕನ್ನಡಕ್ಕೂ ಡಬ್ ಆಗಿ ಪ್ರೇಕ್ಷಕರ ಮುಂದೆ ಬಂದಿದೆ. ಡಬ್ಬಿಂಗ್ ಗುಣಮಟ್ಟ ಕೂಡ ಚೆನ್ನಾಗಿದೆ. ಆದಾಗ್ಯೂ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ನೆಗೆಟಿವ್ ವಿರ್ಮಶೆ ಕಂಡು ಬರುತ್ತಿದೆ. ಚಿತ್ರದಲ್ಲಿ ಮಾಲಿವುಡ್ ನಟ ಫಹಾದ್ ಫಾಸಿಲ್ ಹಾಗೂ ಅಪರ್ಣಾ ಬಾಲಮುರಳಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಏಕಕಾಲಕ್ಕೆ ಮಲಯಾಳಂ ಮತ್ತು ಕನ್ನಡದಲ್ಲಿ ಸಿನಿಮಾ ತೆರೆಕಂಡಿದೆ. ಆದರೆ ನೆಗೆಟಿವ್ ವಿಮರ್ಶೆ ಹೆಚ್ಚಾದಂತೆ ಪ್ರೇಕ್ಷಕರು ಥಿಯೇಟರ್‌ಗೆ ಹೋಗುವುದು ಕಮ್ಮಿ ಆಗಿದೆ.

ನಿರ್ದೇಶಕ ಪವನ್ ಕುಮಾರ್ ಮಾತನಾಡಿ ಪ್ರೇಕ್ಷಕರಲ್ಲಿ ಒಂದು ಮನವಿ ಮಾಡಿದ್ದಾರೆ. ಸಿನಿಮಾ ಏನು ಅನ್ನುವುದನ್ನು ಅರ್ಥ ಕೂಡ ಮಾಡಿಕೊಳ್ಳದೇ ಪೈಪೋಟಿಗೆ ಬಿದ್ದು ವಿಮರ್ಶೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಕೆಲವರಿಗೆ ಇಷ್ಟವಾಗದ್ದು ಮತ್ತೆ ಕೆಲವರಿಗೆ ಇಷ್ಟವಾಗಬಹುದು. ಆದರೆ ನೀವು ಇಷ್ಟು ಬೇಗ ನಿಮಗನ್ನಿಸಿದ್ದು ಬರೆದರೆ ಉಳಿದವರು ಸಿನಿಮಾ ನೋಡುವುದು ಕಷ್ಟವಾಗುತ್ತದೆ ಎಂದಿದ್ದಾರೆ.

ವಿಮರ್ಶೆಗಳ ಹಾವಳಿ ಹೆಚ್ಚಾಗಿದೆ
"ನಾನು ಈ ಜನರೇಷನ್ ಅಥವಾ ಈ ವರ್ಷ ಸಿನಿಮಾ ಮೇಕಿಂಗ್‌ಗೆ ಹೊಸಬ. ಬಹಳ ವರ್ಷಗಳ ನಂತರ ನಾನು ಸಿನಿಮಾ ಮಾಡಿದ್ದೇನೆ. ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸ ಇದೆ. ನನಗೂ ಒಂದಷ್ಟು ಫೀಡ್‌ಬ್ಯಾಕ್ ಬಂತು, ಕೆಲವರು ಸಿನಿಮಾ ರನ್‌ಟೈಮ್ ಜಾಸ್ತಿ ಎಂದರು. ಇರಬಹುದು. ಇಷ್ಟು ವರ್ಷಗಳ ನಂತರ ಸಿನಿಮಾ ಮಾಡಿದ್ದೀನಿ. ಆದರೆ ಈಗ ವಿಮರ್ಶೆಗಳ ಹಾವಳಿ ಹೆಚ್ಚಾಗಿದೆ. ಎಷ್ಟೆಷ್ಟು ಬೇಗ ವಿಮರ್ಶೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿದ್ದಾರೆ ಅಂದರೆ ಸಿನಿಮಾ ಬಗ್ಗೆ ಯೋಚಿಸಲು ಸಮಯ ತೆಗೆದುಕೊಳ್ಳುತ್ತಿಲ್ಲ. ಅಷ್ಟೊಂದು ಆತುರ"
ವಿಮರ್ಶೆ ನೋಡಿ ನಿರ್ಧಾರಕ್ಕೆ ಬರಬೇಡಿ
"ನಿಜ ಹೇಳಬೇಕು ಅಂದರೆ ಸಿನಿಮಾ ವಿಮರ್ಶೆ ಮಾಡುವವರು ಸಿನಿಮಾ ಏನು ಎನ್ನುವುದನ್ನು ಅರ್ಥ ಕೂಡ ಮಾಡಿಕೊಳ್ಳಲು ಸಮಯ ಕೊಡ್ತಿಲ್ಲ. ಚಿತ್ರಕ್ಕೆ ಕೊಂಚವೂ ಅವಕಾಶ ಕೊಡದೇ ಅದರ ವಿರುದ್ಧ ವಿಮರ್ಶೆ ಸೋಶಿಯಲ್ ಮೀಡಿಯಾದಲ್ಲಿ ಬರೆಯುತ್ತಿದ್ದಾರೆ. ಅಂತಹವರ ಮಾತುಗಳನ್ನು ಕೇಳಬೇಡಿ, ನಿಮಗೆ ಏನು ಅನ್ನಿಸುತ್ತದೆ ಅದನ್ನು ನೀವು ನಿರ್ಣಯಿಸಿ. ಒಬ್ಬರಿಗೆ ಇಷ್ಟವಾದ ಸಿನಿಮಾ ಮತ್ತೊಬ್ಬರಿಗೆ ಇಷ್ಟವಾಗದೇ ಇರಬಹುದು. ಸಿನಿಮಾ ಟ್ರೈಲರ್, ಪೋಸ್ಟರ್ ನೋಡಿ ಚಿತ್ರ ನೋಡಲು ಹೋಗಿ, ಸೋಶಿಯಲ್ ಮೀಡಿಯಾ ವಿಮರ್ಶೆ ನೋಡಿ ನಿರ್ಧಾರಕ್ಕೆ ಬರಬೇಡಿ" ಎಂದು ಪವನ್ ಮನವಿ ಮಾಡಿದ್ದಾರೆ.
ಆಸ್ಕರ್‌ಗೆ ಹೋದ ಚಿತ್ರ ನಂಗಿಷ್ಟವಾಗ್ಲಿಲ್ಲ
"ಕಳೆದ ವರ್ಷ ಬಂದ ಸಿನಿಮಾವೊಂದು ಸೂಪರ್ ಹಿಟ್ ಆಯಿತು. ಆ ಸಿನಿಮಾ ಆಸ್ಕರ್‌ಗೂ ಹೋಗಿತ್ತು. ಸಾಕಷ್ಟು ಮೆಚ್ಚುಗೆ ಗಳಿಸಿತು. ಆದರೆ ಆ ಸಿನಿಮಾ ನನಗೆ ಇಷ್ಟವಾಗಲೇಯಿಲ್ಲ. ಅದಕ್ಕೆ ನನ್ನ ವ್ಯಕ್ತಿತ್ವ, ನಾನು ಬೆಳೆದು ಬಂದ ಹಿನ್ನೆಲೆ ಅದಕ್ಕೆ ಕಾರಣ ಇರಬಹುದು. ಹಾಗಂತ ನಾನು ಸೋಶಿಯಲ್ ಮೀಡಿಯಾದಲ್ಲಿ 10 ಸಾವಿರ , 2 ಲಕ್ಷ ಜನಕ್ಕೆ ತಲುಪುವಂತೆ ನನಗೆ ಅನ್ನಿಸಿದ್ದನ್ನು ಬರೆಯಲಿಲ್ಲ. ಆದರೆ ನನಗೆ ಸಿನಿಮಾ ಚೆನ್ನಾಗಿದೆ ಎನ್ನಿಸಿದ್ದರೆ ನಿಜಕ್ಕೂ ಬರೆಯುತ್ತಿದ್ದೆ. ಆದರೆ ಈಗ ಸಿನಿಮಾ ನೋಡಬೇಡಿ ಎಂದು ಹೇಳುವುದು ತಪ್ಪಾಗಬಹುದು"
ಯಾರೋ ಹೇಳಿದರೆ ಕೇಳಬೇಡಿ
"ಕೆಲವರು ನನಗೆ ಮೆಸೇಜ್ ಮಾಡಿ ಹೇಳುತ್ತಿದ್ದಾರೆ. ಇದು ಭಾಗ ಚೆನ್ನಾಗಿದೆ, ಇದು ಚೆನ್ನಾಗಿಲ್ಲ ಅಂತ. ಅವರು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆಯುತ್ತಿಲ್ಲ. ಹಾಗೆಯೇ ಪ್ರತಿ ಸಿನಿಮಾ ಪ್ರತಿಯೊಬ್ಬರಿಗೂ ಬೇರೆ ಬೇರೆ ರೀತಿ ಅನ್ನಿಸಬಹುದು. ಬೇರೆ ಬೇರೆ ರೀತಿ ಅರ್ಥವಾಗಬಹುದು, ಹತ್ತಿರವಾಗಬಹುದು. ಹಾಗಾಗಿ ಬೇರೆಯವರ ಅಭಿಪ್ರಾಯದ ಮೇಲೆ ನೀವು ನಿಮ್ಮ ನಿರ್ಣಯ ಕೈಗೊಳ್ಳಬೇಡಿ, ನಿಮ್ಮ ಸ್ನೇಹಿತರು ಹೇಳಿ ಕೇಳಿ. ಆದರೆ ಯಾರೋ ಹೇಳಿದರು ಎಂದು ಸಿನಿಮಾ ನೋಡದಿರಲು ನಿರ್ಧರಿಸಬೇಡಿ. ಆದಷ್ಟು ಬೇಗ ಸಿನಿಮಾ ಓಟಿಟಿಗೆ ಬರುತ್ತೆ. ಆದರೆ ಥಿಯೇಟರ್‌ನಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ. ಹಾಗಾಗಿ ನೀವೇ ಹೋಗಿ ಸಿನಿಮಾ ನೋಡಿ ನಿಮ್ಮದೇ ಅಭಿಪ್ರಾಯ ನೀವು ರೂಪಿಸಿಕೊಳ್ಳಿ" ಎಂದು ಪವನ್ ಕುಮಾರ್ ಮನವಿ ಮಾಡಿದ್ದಾರೆ.


Click it and Unblock the Notifications











