ನಟ ದರ್ಶನ್ ಎಡಗೈಗೆ ಪೆಟ್ಟು ಹೇಗಾಯ್ತು? ಮತ್ತೆ 'ಡೆವಿಲ್' ಶೂಟಿಂಗ್ ಬಗ್ಗೆ ನಿರ್ದೇಶಕರು ಏನಂದ್ರು?
ಬಾಕ್ಸಾಫೀಸ್ ಸುಲ್ತಾನ್ ನಟ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಸದ್ದಿಲ್ಲದೇ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಫೈಟ್ ಶೂಟಿಂಗ್ ನಾಲ್ಕೈದು ದಿನ ನಡೆದಿದೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇದೆಲ್ಲದರ ನಡುವೆ ನಟ ದರ್ಶನ್ ಎಡಗೈಗೆ ಪೆಟ್ಟಾಗಿದ್ದು ಬೆಲ್ಟ್ ಹಾಕಿಕೊಂಡು ಓಡಾಡುತ್ತಿದ್ದಾರೆ.
ಕೈ ನೋವಿನ ನಡುವೆಯೂ ನಿನ್ನೆ ಮಂಡ್ಯದಲ್ಲಿ ನಡೆದ ಸುಮಮಲತಾ ಅಂಬರೀಶ್ ಸುದ್ದಿಗೋಷ್ಠಿಯಲ್ಲಿ ದರ್ಶನ್ ಭಾಗಿ ಆಗಿದ್ದರು. ಅದಕ್ಕೂ ಮುನ್ನ 'ಮ್ಯಾಟ್ನಿ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರು. ಇನ್ನು 'ಜಾಜಿ' ಆಲ್ಬಮ್ ಸಾಂಗ್ ಅನಾವರಣ ಕಾರ್ಯಕ್ರಮಕ್ಕೂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಎರಡು ದಿನಗಳ ಹಿಂದೆ ನಟ ದರ್ಶನ್ ಕೈ ನೋವಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಬಂದ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿ ತಮ್ಮ ನೆಚ್ಚಿನ ನಟನ ಕೈಗೆ ಏನಾಯ್ತು ಎಂದು ಅಭಿಮಾನಿಗಳು ಆತಂಕಕೊಂಡಿದ್ದರು. ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಕೂಡ ದರ್ಶನ್ ಹೆಚ್ಚು ಮಾತನಾಡಲಿಲ್ಲ. "ಯಮ ಬಂದು ಕರೆದರೂ ಅಮ್ಮನ ಕೆಲಸ ಮಾಡಿಯೇ ಹೋಗೋದು" ಎಂದಿದ್ದರು.
"ಯಮ ಕರೆದರೆ ಅಮ್ಮನ ಒಂದು ಕೆಲಸ ಇದೆ ಮುಗಿಸಿ ಬರ್ತೀನಿ ಅಂತ ಹೇಳ್ತೀನಿ. ಅವರ ಕುಟುಂಬ ಜೊತೆಗಿನ ಬಾಂಧವ್ಯ ಅಂಥದ್ದು. ನಿನ್ನೆ ಕೈಗೆ ಆಪರೇಷನ್ ಇತ್ತು. ಆದರೆ, ಅಮ್ಮನ ಕೆಲಸ ಇದೆ ಎಂದು ಹೇಳಿ ಬಂದಿದ್ದೇನೆ. ಇಂದು ಸಂಜೆ ಅಡ್ಮಿಟ್ ಆಗಿ, ನಾಳೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ. ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ನಾನು ಅವರ ಹಿಂದೆ ಇರ್ತೀನಿ. ತಾಯಿ ತಾಯಿನೇ. ಏನೇ ಹೇಳಿದ್ರೂ ನಾನು ಮಾಡ್ತೀನಿ. ಹಾಳು ಬಾವಿಗೆ ಬೀಳು ಅಂದ್ರೂ ಬೀಳ್ತೀನಿ. ನಾನು ನನ್ನ ತಮ್ಮ ಅವರ ಮಾತಿಗೆ ಬದ್ಧವಾಗಿದೀವಿ. ಹೊರಡುವಾಗ ಯಾರು ನನ್ನ ಕೈ ಎಳೆಯಬೇಡಿ" ಎಂದು ವೇದಿಕೆಯಿಂದಲೇ ಮನವಿ ಮಾಡಿದ್ದರು.
ಕೈ ನೋವಿನ ನಡುವೆಯೂ ನಗುತ್ತಲೇ 'ಜಾಜಿ' ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಮಾಜಿ ಕಾರ್ಪೋರೇಟರ್ ಮೋಹನ್ ರಾಜು ಮಗಳು ಜಾಜಿ ಹೆಜ್ಜೆ ಹಾಕಿರುವ ಹಾಡಿದು. ಡೀಬೀಟ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ರಿಲೀಸ್ ಆಗಿದೆ.

ನಟ ದರ್ಶನ್ ಎಡಗೈಗೆ ಪೆಟ್ಟಾಗಿರುವುದು ಹಾಗೂ 'ಡೆವಿಲ್' ಸಿನಿಮಾ ಚಿತ್ರೀಕರಣದ ಬಗ್ಗೆ ನಿರ್ದೇಶಕ ಮಿಲನಾ ಪ್ರಕಾಶ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. "ಡೆವಿಲ್ ಫಸ್ಟ್ ಶೆಡ್ಯೂಲ್‌ನಲ್ಲಿ ಆಕ್ಷನ್ ಸನ್ನಿವೇಶದ ಚಿತ್ರೀಕರಣ ನಡೀತು. ಈ ವೇಳೆ ದರ್ಶನ್ ಅವರ ಕೈಗೆ ಪೆಟ್ಟಾಯಿತು. ಇಂದು ಶಸ್ತ್ರ ಚಿಕಿತ್ಸೆ ನಡೆಯುವ ಸಾಧ್ಯತೆಯಿದೆ. ಆದಷ್ಟು ಬೇಗ ಚಿತ್ರೀಕರಣಕ್ಕೆ ಹಾಜರಾಗುತ್ತಾರೆ. ಏಪ್ರಿಲ್ 16ರಿಂದ 2ನೇ ಶೆಡ್ಯೂಲ್ ಆರಂಭವಾಗಲಿದ್ದು 22ರಿಂದ ದರ್ಶನ್ ಸರ್ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ" ಎಂದಿದ್ದಾರೆ.
'ಜಾಜಿ' ಆಲ್ಬಮ್ ಸಾಂಗ್ ರಿಲೀಸ್ ವೇಳೆ ಮಾಧ್ಯಮ ಮಿತ್ರರ ಜೊತೆ ದರ್ಶನ್ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಶೂಟಿಂಗ್ ವೇಳೆ ಕೈಗೆ ಪೆಟ್ಟಾಯಿತು. ತಡ ಮಾಡಲ್ಲ. ಆದಷ್ಟು ಬೇಗ ಚಿತ್ರೀಕರಣ. ಅಕ್ಟೋಬರ್‌ನಲ್ಲಿ ಸಿನಿಮಾ ಬರಬೇಕು. ಥಿಯೇಟರ್‌ಗಳನ್ನು ಉಳಿಸಿಕೊಳ್ಳುವುದು ಕಷ್ಟ ಇದೆ. ನಿರ್ಮಾಪಕರಿಗೆ ನಷ್ಟವಾಗುತ್ತದೆ. ಅಯ್ಯೋ ರೆಸ್ಟ್ ಮಾಡಲು ಇನ್ನು ಬಹಳ ಸಮಯ ಇದೆ ಬಿಡಿ ಎಂದಿದ್ದಾರೆ.
ಇತ್ತೀಚೆಗೆ ನಿರ್ದೇಶಕ ತರುಣ್ ಸುಧೀರ್ ಹೊಸ ಬಿಎಂಡಬ್ಲ್ಯೂ ಕಾರ್ ಖರೀದಿಸಿದ್ದಾರೆ. ಅದನ್ನು 'ಡೆವಿಲ್' ಸೆಟ್‌ಗೆ ಕೊಂಡೊಯ್ದಿದ್ದರು. ದರ್ಶನ್ ಕೈ ನೋವಿನ ನಡುವೆಯೂ ಕಾರು ಚಲಾಯಿಸಿ ಸ್ನೇಹಿತನನ್ನು ಅಭಿನಂದಿಸಿದ್ದರು. ಸದ್ಯ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬೇಗ ಚೇತರಿಸಿಕೊಳ್ಳಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.


Click it and Unblock the Notifications











