KGF- 3: "ಬೇರೆ ಬೇರೆ ಸಿನಿಮಾಗಳ ನಡುವೆ 'ಚಾಪ್ಟರ್-3' ಮಾಡೋಕೆ ಸಾಧ್ಯವಿಲ್ಲ": ಪ್ರಶಾಂತ್ ನೀಲ್
'ಸಲಾರ್' ಬಳಿಕ ಪ್ರಶಾಂತ್ ನೀಲ್ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಇತ್ತು. ಜ್ಯೂ. ಎನ್‌ಟಿಆರ್ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ NTR31 ಸಿನಿಮಾ ತಡವಾಗುತ್ತದೆ ಎನ್ನುವುದು ಸ್ಪಷ್ಟ. ಇನ್ನು 'KGF-3' ಯಾವಾಗ? ಎನ್ನುವ ಪ್ರಶ್ನೆಯೂ ಕೆಲವರನ್ನು ಕಾಡುತ್ತಿದೆ. ಇದಕ್ಕೆಲ್ಲಾ ಪ್ರಶಾಂತ್ ನೀಲ್ ಉತ್ತರಿಸಿದ್ದಾರೆ.
'KGF'-2 ಕ್ಲೈಮ್ಯಾಕ್ಸ್‌ನಲ್ಲೇ ಮತ್ತೊಂದು ಸೀಕ್ವೆಲ್ ಬಗ್ಗೆ ಸುಳಿವು ಸಿಕ್ಕಿತ್ತು. ಚಾಪ್ಟರ್-3 ಬರುತ್ತದೆ ಎನ್ನುವುದು ಸ್ಪಷ್ಟವಾಗಿತ್ತು. ಬಳಿಕ ಈ ವಿಚಾರವನ್ನು ನೀಲ್ ಸ್ಪಷ್ಟಪಡಿಸಿದ್ದರು. ಈಗಾಗಲೇ ಕಥೆ ಕೂಡ ಸಿದ್ಧವಾಗಿದೆ. ನಾನು ನಿರ್ದೇಶನ ಮಾಡದಿದ್ದರೂ ಸೀಕ್ವೆಲ್ ಬರುತ್ತದೆ ಎಂದಿದ್ದರು. 'KGF' ಸರಣಿ ಬೆನ್ನಲ್ಲೇ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ಒಪ್ಪಿಕೊಂಡಿದ್ದರು. ಕಾರಣಾಂತರಗಳಿಂದ ಸಿನಿಮಾ ತಡವಾಗಿ ಕಳೆದ ವರ್ಷ ಡಿಸೆಂಬರ್ 22ಕ್ಕೆ ತೆರೆಗೆ ಬಂದಿತ್ತು.

ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ನಟನೆಯ 'ಸಲಾರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಆದರೆ 'ಸಲಾರ್'-2 ಕೂಡ ಬರಬೇಕಿದೆ. ಕನ್ನಡದ 'ಉಗ್ರಂ' ಕಥೆಯನ್ನೇ ಹೊಸ ಪ್ರಪಂಚದಲ್ಲಿ ಪ್ರಶಾಂತ್ ನೀಲ್ ಕೊಟ್ಟಿಕೊಟ್ಟು ಗೆದ್ದಿದ್ದಾರೆ. ಡಾರ್ಲಿಂಗ್ ಫ್ಯಾನ್ಸ್ ಸದ್ಯ ಸೀಕ್ವೆಲ್‌ಗಾಗಿ ಕಾಯುತ್ತಿದ್ದಾರೆ. ಅತ್ತ 'ಕಲ್ಕಿ' ಹಾಗೂ 'ರಾಜಾ ಸಾಬ್' ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಹಾಗಾಗಿ 'ಸಲಾರ್'-2 ಯಾವಾಗ? ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್-2' ಹಾಗೂ 'KGF'-3 ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಸಲಾರ್-2 ಚಿತ್ರೀಕರಣಕ್ಕೆ ಹೋಗಲು ನಾವು ಸಿದ್ಧರಿದ್ದೇವೆ. ಆದರೆ ನನಗೆ ಕೊಂಚ ಬ್ರೇಕ್ ಬೇಕು. 'KGF' ಸರಣಿ ಹಾಗೂ 'ಸಲಾರ್-1' ಬಳಿಕ ಬ್ರೇಕ್ ತೆಗೆದುಕೊಳ್ಳಬೇಕಿದೆ" ಎಂದು ತಮ್ಮ ಮುಂದಿನ ಸಿನಿಮಾ ಬಗ್ಗೆ ನೀಲ್ ಮೌನ ಮುರಿದಿದ್ದಾರೆ.
"KGF-3 ಕೂಡ ಬರುತ್ತದೆ. ಸ್ಕ್ರಿಪ್ಟ್ ಈಗಾಗಲೇ ಸಿದ್ಧವಾಗಿದೆ. ಇಲ್ಲದಿದ್ದರೆ ನಾವು ಪಾರ್ಟ್-2ನಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಆ ಬಗ್ಗೆ ತೋರಿಸುತ್ತಿರಲಿಲ್ಲ ನಾವು ಪಾರ್ಟ್-3 ಮಾಡ್ತೀವಿ ಅಂತ. ಯಶ್‌ಗೆ ಬೇರೆ ಬೇರೆ ಕಮೀಟ್‌ಮೆಂಟ್ಸ್ ಇದೆ. ವಿಜಿ ಸರ್ ಕೂಡ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಬೇರೆ ಬೇರೆ ಸಿನಿಮಾ ಕೆಲಸಗಳು ನಡೆಯುವಾಗ ನಡುವೆ 'KGF-3' ಮಾಡೋಕೆ ಸಾಧ್ಯವಿಲ್ಲ. ಅದೆಲ್ಲಾ ಮುಗಿದ ಮೇಲೆ ಆರಂಭಿಸುತ್ತೇವೆ" ಎಂದಿದ್ದಾರೆ.

'ಉಗ್ರಂ' ಸಿನಿಮಾ ಮೂಲಕ ಡೈರೆಕ್ಟರ್ ಕ್ಲ್ಯಾಪ್ ತೊಟ್ಟಿದ್ದ ಪ್ರಶಾಂತ್ ನೀಲ್ ಬಳಿಕ 'KGF' ಚಿತ್ರ ಆರಂಭಿಸಿದ್ದರು. 2 ಭಾಗಗಳಾಗಿ ಸಿನಿಮಾ ತೆರೆಗೆ ಬಂದಿತ್ತು. ಮೊದಲ ಭಾಗ 250 ಕೋಟಿ ರೂ. ಕಲೆಕ್ಷನ್ ಮಾಡಿದರೆ ಸೀಕ್ವೆಲ್ 1150 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ರಾಕಿ ಭಾಯ್ ಆಗಿ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದರು. ಕನ್ನಡ ಚಿತ್ರರಂಗದಲ್ಲಿ ಹಲವು ಮೊದಲುಗಳಿಗೆ 'KGF' ಸಾಕ್ಷಿ ಆಯಿತು.
'KGF'-2 ಬಳಿಕ ಯಶ್ ಮುಂದಿನ ಸಿನಿಮಾ ಯಾವುದು? ಎನ್ನುವ ಪ್ರಶ್ನೆ ಮೂಡಿತ್ತು. 'KGF'-2 ಬರುತ್ತದೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಒಂದೂವರೆ ವರ್ಷದ ಬಳಿಕ 'ಟಾಕ್ಸಿಕ್' ಸಿನಿಮಾ ಘೋಷಿಸಿದ್ದರು. ಸದ್ಯ ಅದೇ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರವನ್ನು ನಿರ್ಮಿಸಿ ನಟಿಸುತ್ತಾರೆ ಎನ್ನಲಾಗುತ್ತಿದೆ.


Click it and Unblock the Notifications











