ಆಮಿ ಜಾಕ್ಸನ್ ವರ್ತನೆಗೆ ಅಸಮಾಧಾನಗೊಂಡ ಪ್ರೇಮ್!
Recommended Video

'ದಿ ವಿಲನ್' ಸಿನಿಮಾ ದಿನಕ್ಕೊಂದು ಸುದ್ದಿ ಮಾಡುತ್ತಲೇ ಇದೆ. ಆದರೆ, ಇದುವರೆಗೆ ಚಿತ್ರತಂಡದ ನಡುವೆ ಯಾವುದೇ ರೀತಿಯ ಅಸಮಾಧಾನ, ಮನಸ್ತಾಪ, ವಿವಾದ ಇರಲಿಲ್ಲ. ಈಗ ಅದು ಕೂಡ ನಡೆದಿದೆ.
ಚಿತ್ರತಂಡದಲ್ಲಿ ಅಸಮಾಧಾನ ಉಂಟಾಗಲು ಕಾರಣ ಆಗಿರುವುದು ನಟಿ ಆಮಿ ಜಾಕ್ಸನ್ ಅಂತೆ. ಹೌದು, ಸದ್ಯ ಚಿತ್ರದ ನಿರ್ದೇಶಕ ಪ್ರೇಮ್ ಹಾಗೂ ಆಮಿ ನಡುವೆ ಬಿರುಕು ಮೂಡಿದೆ. ಆಮಿ ವಿರುದ್ಧ ಪ್ರೇಮ್ ಗರಂ ಆಗಿದ್ದಾರೆ.
'ದಿ ವಿಲನ್' ಆಮಿ ಜಾಕ್ಸನ್ ಕನ್ನಡದಲ್ಲಿ ನಟಿಸುತ್ತಿರುವ ಮೊದಲ ಸಿನಿಮಾವಾಗಿದೆ. ಈ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಹೀರುವಾಗ, ಆಮಿ ಜಾಕ್ಸನ್ ಮೇಲೆ ಇದ್ದ ಅಸಮಾಧಾನವನ್ನ ಪ್ರೇಮ್ ಹೊರ ಹಾಕಿದ್ದಾರೆ. ಮುಂದೆ ಓದಿ...

ಪ್ರಚಾರಕ್ಕೆ ಬರುತ್ತಿಲ್ಲವಂತೆ ಆಮಿ
ಇದ್ದಕ್ಕಿದ್ದ ಹಾಗೆ, ಪ್ರೇಮ್ ಹಾಗೂ ಆಮಿ ಜಾಕ್ಸನ್ ನಡುವೆ ಏನಾಯ್ತು ಎಂಬ ಪ್ರಶ್ನೆ ಎಲ್ಲರಿಗೂ ಬರಬಹುದು. ನಟಿ ಆಮಿ ಜಾಕ್ಸನ್ ಮೇಲೆ ಪ್ರೇಮ್ ಸಿಟ್ಟಾಗಿರುವುದು ಚಿತ್ರದ ಪ್ರಮೋಷನ್ ವಿಚಾರವಾಗಿ. ಹೌದು, 'ದಿ ವಿಲನ್' ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ, ಆಮಿ ಮಾತ್ರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲವಂತೆ.

ಒಂದೇ ಕಾರ್ಯಕ್ರಮದಲ್ಲಿ ಮಾತ್ರ ಭಾಗಿ
ಈವರೆಗೆ ಆಗಿರುವ ಸಿನಿಮಾದ ಕಾರ್ಯಕ್ರಮಗಳ ಪೈಕಿ ಆಮಿ ಭಾಗಿಯಾಗಿರುವುದು ಒಂದೇ ಒಂದು ಕಾರ್ಯಕ್ರಮದಲ್ಲಿ ಮಾತ್ರ. ದುಬೈನಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಆಮಿ ಮತ್ತೆ ಇತ್ತ ಯೋಚಿಸಲೇ ಇಲ್ಲವಂತೆ. ಇತ್ತೀಚಿಗೆ ನಡೆದ ಚಿತ್ರದ ರಿಲೀಸಿಂಗ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಹ ಆಮಿ ಮಿಸ್ ಆಗಿದ್ದರು.

ಏನ್ ಅಂತ್ತಾರೆ ಪ್ರೇಮ್
ಈ ಬಗ್ಗೆ ಮಾತನಾಡಿರುವ ಪ್ರೇಮ್ ''ಆಮಿ ನನ್ನ ಸಿನಿಮಾದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆ ವಿಷಯದಲ್ಲಿ ಅವರ ಬಗ್ಗೆ ಗೌರವ ಇದೆ. ಆದರೆ, ಪ್ರಮೋಷನ್ ಬಗ್ಗೆ ಅವರು ಯೋಚನೆ ಮಾಡುತ್ತಿಲ್ಲ. ಕಾರ್ಯಕ್ರಮಗಳಿಗೆ ಬರುವುದು ಇರಲಿ, ಪ್ರಚಾರದ ವಿಚಾರವಾಗಿ ಸಂಪರ್ಕ ಮಾಡಿದರೆ ಎಷ್ಟೊ ದಿನ ಆದ ಮೇಲೆ ಆ ಕಡೆಯಿಂದ ಪ್ರತಿಕ್ರಿಯೆ ಬರುತ್ತದೆ'' ಎಂದಿದ್ದಾರೆ.

ಸೂಪರ್ ಸ್ಟಾರ್ ಗಳೆ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ
''ರಜನಿಕಾಂತ್, ಅಮಿತಾಬ್ ಬಚ್ಚನ್ ರೀತಿಯ ಸೂಪರ್ ಸ್ಟಾರ್ ನಟರೇ ತಮ್ಮ ಸಿನಿಮಾ ಬರುತ್ತಿದೆ ಅಂದರೆ, ಅವರ ಪ್ರಮೋಷನ್ ವಿಚಾರವಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಆದರೆ, ಆಮಿ ಜಾಕ್ಸನ್ ಸುಮ್ಮನೆ ಇದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ ಸೋ, ಚಿತ್ರದಲ್ಲಿ ನಟಿಸಿದ ಅವರ ಅನುಭವ ಹಂಚಿಕೊಳ್ಳುವ ಅಗತ್ಯವಿದೆ.'' ಎನ್ನುವುದು ಪ್ರೇಮ್ ವಾದ.

ಡೇಟ್ ಹೊಂದಾಣಿಕೆ ಮಾಡಿಕೊಂಡಿದ್ದೇವೆ
''ಶೂಟಿಂಗ್ ವೇಳೆ ಆಮಿ ಜಾಕ್ಸನ್ ಗೆ ತಕ್ಕ ಹಾಗೆ ನಾವು ಡೇಟ್ ಹೊಂದಾಣಿಕೆ ಮಾಡಿಕೊಂಡಿದ್ದೆವು. ನಟ ಶಿವರಾಜ್ ಕುಮಾರ್, ಸುದೀಪ್ ಅವರೇ ಆಮಿ ಅವರ ಸಮಯಕ್ಕೆ ತಕ್ಕ ಹಾಗೆ ಎಷ್ಟೋ ಬಾರಿ ಚಿತ್ರೀಕರಣಕ್ಕೆ ಬಂದಿದ್ದರು. ಆದರೆ, ಈಗ ಆಮಿ ಜಾಕ್ಸನ್ ಬೇರೆ ಬೇರೆ ಕೆಲಸದಲ್ಲಿ ಬ್ಯುಸಿ ಇದ್ದಾರೆ.'' - ಪ್ರೇಮ್, ನಿರ್ದೇಶಕ.

ಇದೇ ತಿಂಗಳು ಅದ್ದೂರಿಯಾಗಿ ಬಿಡುಗಡೆ
'ದಿ ವಿಲನ್' ಸಿನಿಮಾ ಇದೇ ತಿಂಗಳು 18 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 11ರಿಂದ ಮುಂಗಡ ಟಿಕೆಟ್ ಬುಕ್ಕಿಂಗ್ ಶುರು ಆಗಲಿದೆ. ಸಾವಿರ ಪರದೆಗಳಲ್ಲಿ ಶಿವರಾಜ್ ಕುಮಾರ್ ಹಾಗೂ ಸುದೀಪ್ ರಾರಾಜಿಸಲಿದ್ದಾರೆ.

ಫಿಲ್ಮ್ ಚೆಂಬರ್ ಗೆ ಪ್ರೇಮ್ ಮನವಿ
ಇನ್ನೊಂದು ಕಡೆ ಪ್ರೇಮ್ ಚಿತ್ರದ ರಿಲೀಸ್ ವೇಳೆ ಪ್ರೇಮ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಂದು ಮನವಿ ಮಾಡಿದ್ದಾರೆ. ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನದ ಹಣದಲ್ಲಿ 50% ರಷ್ಟುನ್ನು ಆ ಸಿನಿಮಾದ ನಿರ್ಮಾಪಕರಿಗೆ ನೀಡಬೇಕು ಎಂದು ಪ್ರೇಮ್ ಅಂಡ್ ಟೀಂ ಕೇಳಿಕೊಂಡಿದೆ.


Click it and Unblock the Notifications











